ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆರೋಪಿ ಬಂಧನ

Published 24 ಸೆಪ್ಟೆಂಬರ್ 2023, 16:30 IST
Last Updated 24 ಸೆಪ್ಟೆಂಬರ್ 2023, 16:30 IST
ಅಕ್ಷರ ಗಾತ್ರ

ಕಲಬುರಗಿ: ನ್ಯಾಯಾಂಗ ಬಂಧನದ ಆದೇಶ ಪಡೆದು ಪೊಲೀಸರು ಜೈಲಿನತ್ತ ಕರೆದೊಯ್ಯುವ ಸಂದರ್ಭದಲ್ಲಿ ಪೊಲೀಸರನ್ನು ಯಾಮಾರಿಸಿ ನಗರದ ಹಳೇ ಜೇವರ್ಗಿ ರಸ್ತೆಯಿಂದ ಪರಾರಿಯಾದ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.

ಸಾವಳಗಿ(ಬಿ) ಗ್ರಾಮದ ಬಸವರಾಜ ಜಮಾದಾರ ಬಂಧಿತ ಆರೋಪಿ. ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಜನರಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದ ಆರೋಪದಡಿ ಬಸವರಾಜನನ್ನು ಬಂಧಿಸಿದ ಸಬ್ ಅರ್ಬನ್ ಠಾಣೆ ಪೊಲೀಸರು, ಆಯುಕ್ತರ ಮುಂದೆ ಹಾಜರುಪಡಿಸಿದ್ದರು.

ಆಯುಕ್ತರ ಆದೇಶದಂತೆ ನ್ಯಾಯಾಂಗ ಬಂಧನಕ್ಕಾಗಿ ಜೈಲಿಗೆ ಕರೆದೊಯ್ಯುವ ವೇಳೆ ಹಳೇ ಜೇವರ್ಗಿ ರಸ್ತೆಯಲ್ಲಿನ ಹೋಟೆಲ್‌ನಿಂದ ನೀರಿನ ಬಾಟಲಿ ತರಲು ಪೊಲೀಸ್ ಕಾನ್‌ಸ್ಟೆಬಲ್ ಹೋಗಿದ್ದರು. ಆರೋಪಿಯನ್ನು ಹಿಡಿದುಕೊಂಡ ಮತ್ತೊಬ್ಬ ಕಾನ್‌ಸ್ಟೆಬಲ್ ಚಂದ್ರವದನ ಅವರನ್ನು ನೂಕಿದ ಬಸವರಾಜ, ಕೇಂದ್ರ ಬಸ್ ನಿಲ್ದಾಣದತ್ತ ಓಡಿ ಪರಾರಿಯಾಗಿದ್ದರು. ಈಗ ಪೊಲೀಸ್ ಬಂಧನದಲ್ಲಿ ಇದ್ದಾರೆ.

ಗಡಿಪಾರು ಆದೇಶ ಉಲ್ಲಂಘನೆ: ಗಡಿಪಾರು ಆದೇಶ ಉಲ್ಲಂಘಿಸಿ ಕಲಬುರಗಿ ನಗರದಲ್ಲಿ ತಲೆ ಮರೆಸಿಕೊಂಡು ವಾಸವಾಗಿದ್ದ ರೌಡಿ ಶೀಟರ್ ಅಮ್ಜದ್ ಖಾನ್ ಆಲಂ ಖಾನ್‌ ವಿರುದ್ಧ ರೋಜಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಲಾಲವಾಡಿ ರೋಜಾ ನಿವಾಸಿ ಅಮ್ಜದ್ ಖಾನ್ ರೌಡಿ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಆತನನ್ನು ಒಂದು ವರ್ಷದ ಅವಧಿಗೆ ನಗರದ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಿಂದ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಸೆ.13ಕ್ಕೆ ಆದೇಶ ಹೊರಡಿಸಿದ್ದರೂ ಅಮ್ಜದ್‌ ಖಾನ್ ಅವರು ಶಿರ್ವ ಪೊಲೀಸ್ ಠಾಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿಪಾರು ಆದೇಶ ಉಲ್ಲಂಘಿಸಿ ನಗರದಲ್ಲಿ ವಾಸವಾಗಿದ್ದ ಅಮ್ಜದ್ ಖಾನ್‌ ವಿರುದ್ಧ ಅಸಂಜ್ಞೇಯ ಪ್ರಕರಣ ದಾಖಲಿಸಲಾಗಿದೆ.

ಬೈಕ್ ಸವಾರ ಸಾವು: ಅವರಾದ ಸಮೀಪದ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಹೊಡೆದು ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಭೂಪಾಲ ತೆಗನೂರು ಗ್ರಾಮದ ನಿವಾಸಿ ಅಶೋಕ(43) ಮೃತಪಟ್ಟಿದ್ದು, ಸಂಚಾರ ಪೊಲೀಸ್ ಠಾಣೆ– 2ರಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕ ಅವರು ಸೆ.23ರಂದು ಕಣ್ಣೂರ ಗ್ರಾಮದ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರುತ್ತಿದ್ದರು. ಅವರಾದ ಸಮೀಪದ ರಸ್ತೆಯಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿಹೊಡೆದಿದೆ. ಅಶೋಕ ಅವರ ತಲೆ ಹಾಗೂ ಇತರೆ ಕಡೆಗಳಲ್ಲಿ ತೀವ್ರವಾಗಿ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ತಪಾಸಣೆ ಮಾಡಿ ಮೃತಪಟ್ಟಿದ್ದಾಗಿ ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಚಿನ್ನಾಭರಣ ಕಳವು: ಇಲ್ಲಿನ ಶೇಖರೋಜಾ ಜಿಡಿಎ 2ನೇ ಹಂತದಲ್ಲಿನ ಮನೆಯೊಂದರ ಬಾಗಿಲಿನ ಒಳಕೊಂಡಿ ಮುರಿದು ಒಳ ನುಗ್ಗಿದ ಕಳ್ಳರು ನಗದು ಸೇರಿ ₹1.48 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಮಲ್ಲಯ್ಯ ಮಠಪತಿ ಅವರು ಸೆ.23ರ ಮಧ್ಯಾಹ್ನ ಸಂಗೋಳಗಿ(ಸಿ) ಗ್ರಾಮದ ಹನುಮಾನ ದೇವರ ಜಾತ್ರೆಗೆ ಹೋಗಿದ್ದರು. ಭಾನುವಾರ ವಾಪಸ್ ಬಂದು ನೋಡಿದಾಗ ಮನೆಯಲ್ಲಿನ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೆಡ್‌ ರೂಮಿನ್‌ ಒಳಕೊಂಡಿ ಮುರಿದು, ಒಳ ನುಗ್ಗದ ಕಳ್ಳರು ಬೀರುವಿನಲ್ಲಿದ್ದ ₹1.48 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT