ಗುರುವಾರ , ನವೆಂಬರ್ 14, 2019
23 °C
ಮಹಾಗಾಂವ ಕ್ರಾಸ್- ಸುಲೇಪೇಟ ರಸ್ತೆ ದುರಸ್ತಿಗೆ ಆಗ್ರಹ

ರೈತ ಮುಖಂಡರಿಂದ ರಸ್ತೆ ತಡೆ

Published:
Updated:
Prajavani

ಕಾಳಗಿ: ತಾಲ್ಲೂಕಿನ ರಟಕಲ್ ಮತ್ತು ಕೋಡ್ಲಿ ಕ್ರಾಸ್ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರು ಕೋಡ್ಲಿ ಕ್ರಾಸ್ ವೃತ್ತದಲ್ಲಿ ಶನಿವಾರ ರಸ್ತೆ ತಡೆ ಚಳವಳಿ ನಡೆಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಮಳೆ ಮತ್ತು ಕಲಬುರ್ಗಿ– ಹುಮನಾಬಾದ್‌–ಚಿಂಚೋಳಿ ನಡುವೆ ವಾಹನಗಳ ದಟ್ಟಣೆಯಿಂದಾಗಿ ಮಹಾಗಾಂವ ಕ್ರಾಸ್- ಸುಲೇಪೇಟ ನಡುವೆ ರಾಜ್ಯ ಹೆದ್ದಾರಿ ತೀವ್ರ ಹದಗೆಟ್ಟಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಈ ಹೆದ್ದಾರಿ ದುರಸ್ತಿಗೆ ಸರ್ಕಾರ ಆಗಾಗ ಹಣ ಮಂಜೂರು ಮಾಡುತ್ತಲೇ ಇದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ದುರಸ್ತಿ ಮಾಡಿಸದೆ ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹಾಗೆಯೇ ಮಾಡಬೂಳ- ಕಾಳಗಿ- ಕೋಡ್ಲಿ ರಸ್ತೆಯೂ ಕೆಟ್ಟುಹೋಗಿದೆ. ಇದನ್ನೂ ಅಧಿಕಾರಿಗಳು ದುರಸ್ತಿಗೊಳಿಸುತ್ತಿಲ್ಲ. ಕ್ಷೇತ್ರದ ಶಾಸಕರು ಈ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಈ ಎಲ್ಲದರ ಪರಿಣಾಮ ಕಲಬುರ್ಗಿ- ಚಿಂಚೋಳಿ ನಡುವೆ ಸಂಚರಿಸುವ ವಾಹನಗಳಿಗೆ ಮತ್ತು ಪ್ರಯಾಣಿಕರಿಗೆ ದಿನದಿಂದ ದಿನಕ್ಕೆ ಸಂಕಷ್ಟ ಹೆಚ್ಚುತ್ತಿದೆ. ದುರಸ್ತಿಗೆ ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಿತ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಮಮಶೆಟ್ಟಿ ಎಚ್ಚರಿಸಿದರು.

ಕಾಳಗಿ ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ಲೋಕೋಪಯೋಗಿ ಇಲಾಖೆ ಎಇಇ ಮುಸ್ತಾಕ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಮುಖಂಡ ಗುರುನಂದೇಶ ಕೋಣಿನ, ಗೌರಿಶಂಕರ ಕಿಣ್ಣಿ, ತಾರಾಚಂದ ರಾಠೋಡ, ಶಿವು ಸ್ವಾಮಿ ಕೋಡ್ಲಿ, ಸಿದ್ದು ಅಲ್ಲಾಪುರ, ಶಂಕರ ಚೋಕಾ, ಅಲ್ಲಾ ಪಟೇಲ್ ಮೊಘಾ, ಪರಮೇಶ್ವರ ಕಾಂತಾ, ಶಬ್ಬೀರ ತೇಗಲತಿಪ್ಪಿ, ರಾಜು ಟಿಟಿ ಇದ್ದರು.

ಪ್ರತಿಕ್ರಿಯಿಸಿ (+)