ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ತೊಗರಿ ಬೆಳೆಗಾರರಿಗೆ ಮತ್ತೆ ನಿರಾಸೆ

ತೊಗರಿಗೆ ಕೇಂದ್ರ ಸರ್ಕಾರ ₹ 300 ಬೆಂಬಲ ಬೆಲೆ ಘೋಷಿಸಿದ್ದಕ್ಕೆ ರೈತ ಸಂಘಟನೆಳಿಗೆ ಬೇಸರ
Last Updated 9 ಜೂನ್ 2022, 16:10 IST
ಅಕ್ಷರ ಗಾತ್ರ

ಕಲಬುರಗಿ: ‘ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯುವ ತೊಗರಿಗೆ ಪ್ರಸಕ್ತ ವರ್ಷ ₹ 300 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದ್ದಕ್ಕೆ ವಿವಿಧ ರೈತ ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.

‘ಒಂದೂವರೆ ತಿಂಗಳಲ್ಲಿ ಬರುವ ಹೆಸರು ಬೆಳೆಗೆ ₹ 480 ಬೆಂಬಲ ಬೆಲೆ ಹೆಚ್ಚಳ ಮಾಡಿದೆ. 6 ತಿಂಗಳಿಗೆ ಬರುವ ಮತ್ತು ಪ್ರಮುಖ ಆಹಾರ ಉತ್ಪನ್ನವಾದ ತೊಗರಿಗೆ ಹೆಸರು ಬೆಳೆಗಿಂತ ಕಡಿಮೆ ಬೆಂಬಲ ಬೆಲೆ ನಿಗದಿಪಡಿಸಿದ್ದು ಸರಿಯಲ್ಲ’ ಎಂದು ರೈತ ಮುಖಂಡರು ಹೇಳುತ್ತಾರೆ.

‘ಎಂ.ಎಸ್‌.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತನಿಗೆ ಖರ್ಚಾಗಿದ್ದಕ್ಕಿಂತ ಎರಡು ಪಟ್ಟು ಆದಾಯ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಬೆಂಬಲ ಬೆಲೆ ನಿಗದಿ ಮಾಡಬೇಕು. ₹ 300 ನಿಗದಿ ಮಾಡಿದ್ದು ಯಾವುದಕ್ಕೂ ಸಾಕಾಗದು’ ಎಂದು ಅಖಿಲ ಭಾರತ ಕಿಸಾನ್ ಖೇತ್‌ ಮಜದೂರ್ ಸಂಘಟನೆಯ (ಎಐಕೆಕೆಎಂಎಸ್) ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿ. ದಿವಾಕರ್ ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಕೇಂದ್ರ ಸರ್ಕಾರವು ತೊಗರಿ ಬೆಳೆಗಾರರ ವಿಚಾರದಲ್ಲಿ ಕಣ್ಣಾ ಮುಚ್ಚಾಲೆ ಆಡುತ್ತಿದೆ. ತೊಗರಿಗಿಂತ ಕಡಿಮೆ ಅವಧಿಯಲ್ಲಿ ಬರುವ ಹೆಸರು, ಉದ್ದಿಗೆ ಹೆಚ್ಚು ಬೆಂಬಲ ಬೆಲೆ ನಿಗದಿ ಮಾಡಿದೆ. ಇದು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತಾಗಿದೆ. ಸಂಸದರು, ಶಾಸಕರು ತಮಗೆ ಬೇಕಾದಷ್ಟು ವೇತನವನ್ನು ಹೆಚ್ಚು ಮಾಡಿಕೊಳ್ಳುತ್ತಾರೆ. ಆದರೆ, ರೈತರ ವಿಚಾರಕ್ಕೆ ಬಂದಾಗ ಇಷ್ಟೊಂದು ಹೃದಯಹೀನರಾಗುವುದು ಏಕೆ’ ಎಂದರು.

‘ಕಳೆದ ಬಾರಿ ರಾಜ್ಯ ಸರ್ಕಾರ ತನ್ನ ಪಾಲಿನ ಬೆಂಬಲ ಬೆಲೆ ಘೋಷಿಸಲಿಲ್ಲ. ಕಳೆದ ಬಾರಿ ₹ 6,300 ದರ ನಿಗದಿ ಮಾಡಲಾಗಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ₹ 7 ಸಾವಿರದವರೆಗೂ ದರ ಇತ್ತು. ಹೀಗಾಗಿ, ರೈತರು ಹೆಚ್ಚು ಬೆಂಬಲ ಬೆಲೆಯಡಿ ತೊಗರಿ ನೀಡಲಿಲ್ಲ. ಆದರೆ, ಹಾಗೆ ಖರೀದಿ ಮಾಡಿದ್ದ ತೊಗರಿಯನ್ನು ಇದೀಗ ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರಿಂದ ಬೆಲೆ ಕುಸಿದಿದೆ. ಆದ್ದರಿಂದ ಕನಿಷ್ಠ ಪ್ರತಿ ಕ್ವಿಂಟಲ್‌ಗೆ ₹ 8 ಸಾವಿರ ಬೆಲೆಯನ್ನು ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

ಯಾವ ಬೆಳೆಗೆ ಎಷ್ಟು ಕನಿಷ್ಠ ಬೆಂಬಲ ಬೆಲೆ?
ಬೆಳೆ; ಬೆಂಬಲ ಬೆಲೆ ಮೊತ್ತ; ಒಟ್ಟು ಬೆಲೆ (₹ ಕ್ವಿಂಟಲ್‌ಗೆ)
ತೊಗರಿ
; 300; 6600
ಭತ್ತ; 100; 2040
ಶೇಂಗಾ; 300; 5850
ರಾಗಿ; 201; 3578
ಸೂರ್ಯಕಾಂತಿ; 385; 6400
ಹೆಸರು; 480; 7755
ಉದ್ದು; 300; 6600
ಸಾಸಿವೆ; 523; 7830
ಹತ್ತಿ; 318; 6080

*

ಬೀಜ, ಗೊಬ್ಬರದ ಬೆಲೆ ಹೆಚ್ಚಳವಾಗಿದ್ದು, ಕೂಲಿ ದರವೂ ಹೆಚ್ಚಾಗಿದೆ. ತೊಗರಿ ಬೆಳೆಗಾರರಲ್ಲಿ ಬಹುತೇಕ ಮಂದಿ ವರ್ಷದಲ್ಲಿ ಬೆಳೆಯುವುದು ಇದೊಂದೇ ಬೆಳೆ. ಹೀಗಾಗಿ, ಕನಿಷ್ಠ ₹ 10 ಸಾವಿರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು
–ಎಚ್‌.ವಿ.ದಿವಾಕರ,ರಾಜ್ಯ ಘಟಕದ ಅಧ್ಯಕ್ಷ, ಎಐಕೆಕೆಎಂಎಸ್

*

ಕಾಟಾಚಾರಕ್ಕೆ ಎಂಬಂತೆ ₹ 300 ಬೆಂಬಲ ಬೆಲೆ ನಿಗದಿ ಮಾಡಿದ್ದನ್ನು ಗಮನಿಸಿದರೆ ಹಟ ಮಾಡುತ್ತಿರುವ ಮಗುವಿಗೆ ಚಾಕೊಲೇಟ್ ಕೊಟ್ಟು ಕೈತೊಳೆದುಕೊಂಡಂತೆ ಕಾಣುತ್ತದೆ.
–ಶರಣಬಸಪ್ಪ ಮಮಶೆಟ್ಟಿ,ಜಿಲ್ಲಾ ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

*

14 ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಮ್ಮ ಸರ್ಕಾರದ ಮೂಲ ಉದ್ದೇಶ ರೈತರ ಆದಾಯ ಹೆಚ್ಚಳವಾಗಬೇಕು. ಇದು ಬಂಪರ್ ಕೊಡುಗೆ.
–ರಾಜಕುಮಾರ ಪಾಟೀಲ ತೇಲ್ಕೂರ,ಬಿಜೆಪಿ ರಾಜ್ಯ ವಕ್ತಾರ, ಶಾಸಕ

*

ತೊಗರಿಗೆ ಭೌಗೋಳಿಕ ವಿಶಿಷ್ಟ ಸ್ಥಾನಮಾನ ಸಿಕ್ಕಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲೂ ರಫ್ತಿಗೆ ಅವಕಾಶವಿದೆ. ಆದ್ದರಿಂದ ಆ ಎಲ್ಲ ಸಾಧ್ಯತೆ ಬಳಸಿಕೊಳ್ಳುವುದರ ಜೊತೆಗೆ ಹೆಚ್ಚಿನ ಬೆಂಬಲ ಬೆಲೆ ಘೋಷಿಸಬೇಕು
–ಶರಣಬಸಪ್ಪ ಎಂ. ಪಪ್ಪಾ,ಗೌರವ ಕಾರ್ಯದರ್ಶಿ, ಎಚ್‌ಕೆಸಿಸಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT