ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆದು ರೈತ ಮುಖಂಡರ ಆಕ್ರೋಶ

ಕೃಷಿ ಕಾಯ್ದೆ ಹಿಂತೆಗೆದುಕೊಳ್ಳಲು ಆಗ್ರಹಿಸಿ ತೀವ್ರಗೊಂಡ ಹೋರಾಟ, ಮಹರ್ಷಿ ವಾಲ್ಮೀಕಿ ವೃತ್ತದ ಸುತ್ತ 3 ತಾಸು ಸಂಚಾರ ಬಂದ್
Last Updated 7 ಫೆಬ್ರುವರಿ 2021, 1:52 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೊಳಿಸಿದ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ನಗರದಲ್ಲಿ ಶನಿವಾರ ರೈತ ಸಂಘಟನೆಗಳ ಮುಖಂಡರು ಮೂರು ತಾಸು ಹೆದ್ದಾರಿ ತಡೆ ನಡೆಸಿದರು. ಇಲ್ಲಿನ ರಾಮ ಮಂದಿರ ಬಳಿ ಇರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಅವರ ವಿರುದ್ಧ
ಹರಿಹಾಯ್ದರು.

ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ ರೈತರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ ಮುಖಂಡರು ಮಧ್ಯಾಹ್ನ 12ಕ್ಕೆ ವೃತ್ತದಲ್ಲಿ ಸಮಾವೇಶಗೊಂಡರು. ಮಧ್ಯಾಹ್ನ 3 ಗಂಟೆಯವರೆಗೂ ನಿರಂತರವಾಗಿ ಘೋಷಣೆಗಳನ್ನು ಮೊಳಗಿಸಿದರು. ‘ರೈತರ ದೇಶದಲ್ಲಿ ರೈತರದ್ದೇ ಕಾನೂನು ಜಾರಿ ಆಗಬೇಕು. ಇದು ನಿರ್ಣಾಯಕ ಹೋರಾಟ. ಈ ದೇಶದಲ್ಲಿ ರೈತರು ಇರಬೇಕು ಅಥವಾ ಮೋದಿ ಇರಬೇಕು’ ಎಂದು ಹಲವು ಮುಖಂಡರು ಆಕ್ರೋಶ ಹೊರಹಾಕಿದರು.

‘ರೈತರ ಹೋರಾಟಕ್ಕೆ ಬೆಚ್ಚಿಬಿದ್ದಿರುವ ‘ಕಳ್ಳರು’ ರಸ್ತೆಯಲ್ಲಿ ಮೊಳೆಗಳನ್ನು ಜಡಿದು ಹೋರಾಟ ನಿಲ್ಲಿಸಲು ಸಾಧ್ಯವೇ? ದಾರಿಯಲ್ಲಿ ಮೊಳೆಗಳನ್ನು ಜಡಿಯುವ ಅಸ್ತ್ರ ಬಳಸುವುದು ಹಿಟ್ಲರ್‌ನ ತಂತ್ರ. ಪ್ರಧಾನಿ ಮೋದಿ ಕೂಡ ಅದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಭಗತ್‌ ಸಿಂಗ್‌ನ ದೇಶದಲ್ಲಿ ಹಿಟ್ಲರ್‌ ದರ್ಬಾರ್‌ ಅಡಗಿಸುತ್ತೇವೆ’ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ಬಿ.ಆರ್‌. ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೃಷಿ ಹಾಗೂ ಕೃಷಿ ಸಂಬಂಧಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ. ದೇಶದ ಮೂಲ ಉದ್ಯೋಗವಾದ ಕೃಷಿಯನ್ನು ಮತ್ತು ಕೃಷಿಕರನ್ನು ಹಾಳು ಮಾಡಿ, ರೈತರನ್ನು ಬಂಡವಾಳ ಶಾಹಿಗಳಿಗೆ ಗುಲಾಮರಾಗಿ ಮಾಡಲು ಹೊಂಚುಹಾಕಿದೆ’ ಎಂದು ಅವರು ಹೇಳಿದರು.

‘ನೊಬೆಲ್‌ ಪ್ರಶಸ್ತಿ ಪುರಸ್ಕತರು, ರಾಷ್ಟ್ರಮಟ್ಟದ ಚಿಂತಕರು, ವಿಜ್ಞಾನಿಗಳು, ಅನಿವಾಸಿ ಭಾರತೀಯರು, ವಿದ್ಯಾರ್ಥಿಗಳು ಕೂಡ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಕಣ್ಣು– ಕಿವಿ ಇಲ್ಲದಂತೆ ವರ್ತಿಸುತ್ತಿದೆ. ರೈತರನ್ನು ದಿವಾಳಿ ಮಾಡುವ ನಿಮ್ಮ ಹುನ್ನಾರ ಯಶಸ್ವಿ ಆಗುವುದಿಲ್ಲ’ ಎಂದರು.

ಕೆ.ನೀಲಾ ಮಾತನಾಡಿ, ‘ಕ್ರಿಕೆಟ್‌ ಆಡಿ ಕೋಟ್ಯಂತರ ಹಣ ಸಂಪಾದಿಸಿಕೊಂಡು ವಿಲಾಸಿ ಜೀವನ ನಡೆಸುತ್ತಿರುವ ಸಚಿನ್‌ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ ಅವರು ಕೂಡ ರೈತರ ಹೋರಾಟವನ್ನು ವಿರೋಧಿಸಿದ್ದಾರೆ. ಇವರು ದಿನವೂ ತಿನ್ನುತ್ತಿರುವ ಅನ್ನ ರೈತರು ಕೊಟ್ಟಿದ್ದೋ, ಮೋದಿ ಕೊಟ್ಟಿದ್ದೋ.
ಈ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದಿನಿಂದಲೇ ತಯಾರಿ ಮಾಡಿಕೊಂಡಿದೆ. ಹೋರಾಟ ಹತ್ತಿಕ್ಕಲು ಏನು ಬೇಕೋ ಅದೆಲ್ಲವನ್ನೂ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿದೆ’ ಎಂದು ಹರಿಹಾಯ್ದರು.

ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಪ್ರಧಾನಿ ಹಾಗೂ ಗೃಹಸಚಿವರು ದೇಶದ ರೈತರ ವಿರುದ್ಧ ಈಗ ಹೋರಾಟ ಸಾರಿದ್ದಾರೆ’ ಎಂದರು.

ಮುಖಂಡರಾದ ಅಲ್ಲಮಪ್ರಭು ಪಾಟೀಲ, ಎಚ್.ವಿ. ದಿವಾಕರ, ಮಹೇಶ ಎಸ್‌.ಬಿ., ವಿ.ಜಿ. ದೇಸಾಯಿ, ಭೀಮಾಶಂಕರ ಮಾಡಿಯಾಳ, ಎಂ.ಬಿ. ಸಜ್ಜನ, ಶಾಮ ನಾಟಿಕರ, ಎಸ್.ಎಂ. ಶರ್ಮಾ, ವೀರನಗೌಡ ಮಲ್ಲಾಬಾದಿ, ಅಶೋಕ ಗೂಳಿ, ಚಂದ್ರಿಕಾ ಪರಮೇಶ್ವರ, ಲತಾ ರಾಠೋಡ, ಸ್ನೇಹಾ ಕಟ್ಟಿಮನಿ, ಗುರುಶಾಂತ ಪಟ್ಟೇದಾರ, ಮೌಲಾ ಮುಲ್ಲಾ ಮುಂತಾದವರು ನೇತೃತ್ವ ವಹಿಸಿದ್ದರು.

box-1

ವಾಹನ ಸಂಚಾರಕ್ಕೆ ಇಲ್ಲ ಅಡಚಣೆ

ಕಲಬುರ್ಗಿ: ವಿಜಯಪುರ ಮಾರ್ಗದರಾಷ್ಟ್ರೀಯ ಹೆದ್ದಾರಿ, ರಿಂಗ್‌ ರಸ್ತೆ ಹಾಗೂ ನಗರ ಪ್ರವೇಶಿಸುವ ಹೊಸ ಜೇವರ್ಗಿ ರಸ್ತೆಗಳು ಸಂದಿಸುವ ಈ ವೃತ್ತದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆದರು. ನಾಂದೇಡ- ಬೀದರ್ -ಕಲಬುರ್ಗಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿ–50 ಮತ್ತು ಸೋಲ್ಲಾಪುರ– ಕಲಬುರ್ಗಿ– ಗುತ್ತಿ ರಾಷ್ಟ್ರೀಯ ಹೆದ್ದಾರಿ–150 ಇವೆರಡೂ ಸಂದಿಸುವ ಈ ಸ್ಥಳದಲ್ಲಿ ವಾಹನಗಳು ಸುಳಿಯಲಿಲ್ಲ.ನಾಲ್ಕೂ ಮಾರ್ಗಗಳಿಗೂ ರಿಂಗ್‌ ರಸ್ತೆಯಲ್ಲಿ ಪರ್ಯಾಯ ಮಾರ್ಗಗಳು ಇದ್ದ ಕಾರಣ, ಎಲ್ಲಿಯೂ ವಾಹನ ಸಂಚಾರಕ್ಕೆ ಅಡಚಣೆ ಆಗಲಿಲ್ಲ.

box-2

ವೈದ್ಯ ವಿದ್ಯಾರ್ಥಿಗಳೂ ಧರಣಿಯಲ್ಲಿ ಭಾಗಿ

ಕಲಬುರ್ಗಿ: ರೈತ ಸಂಘಟನೆಗಳ ಮುಖಂಡರು ನಡೆಸಿದ ಹೆದ್ದಾರಿ ತಡೆ ಹೋರಾಟದಲ್ಲಿ ನಗರದ ವಿವಿಧ ವೈದ್ಯಕೀಯ ಕಾಲೇಜಿನ ಹಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಪಾಲ್ಗೊಂಡರು. ಜಿಮ್ಸ್‌, ಎಂಆರ್‌ಎಂಸಿ, ಕೆಬಿಎನ್ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಗುಂಪಾಗಿ ಧರಣಿ ನಿರತ ಸ್ಥಳಕ್ಕೆ ಬಂದರು. ಎಐಡಿಎಸ್‍ಒ, ಆವಿಷ್ಕಾರ ಸಂಘಟನೆಗಳ ಸದಸ್ಯರೂ ಪಾಲ್ಗೊಂಡರು.

box-3

ಚೈತನ್ಯ ನೀಡಿದ ಕ್ರಾಂತಿಗೀತೆಗಳು

ರೈತರ ಹೋರಾಟ ಬೆಂಬಲಿಸಿ ವಿದ್ಯಾರ್ಥಿಗಳು ಹಾಡಿದ ಕ್ರಾಂತಿಗೀತೆಗಳು ಮತ್ತಷ್ಟು ಉತ್ತೇಜನ ನೀಡಿದವು. ಸುತ್ತಲಿನ ವಾಪಾರಿಗಳು, ಪಾದಚಾರಿಗಳು, ನಿವಾಸಿಗಳು ಸಹ ಕುಟುಂಬ ಸಮೇತ ಸರ್ಕಲ್‌ಗೆ ಬಂದು ಕ್ರಾಂತಿಗೀತೆಗಳನ್ನು ಆಲಿಸಿದರು.ಉರಿಯುವ ಬಿಸಿಲಿನಲ್ಲಿಯೇ ಕುಳಿತು ಧರಣಿ ನಡೆಸುತ್ತಿದ್ದ ರೈತ ಮುಖಂಡರಿಗೆ ಇದು ಚೈತನ್ಯ ನೀಡಿತು. ಬಿ.ಕೆ.ಶಿಲ್ಪಾ, ಪ್ರೀತಿ ದೊಡ್ಡಮನಿ ನೇತೃತ್ವದಲ್ಲಿ ಹಲವರು ತಮಟೆ ಬಾರಿಸುತ್ತ ಗೀತೆ ಪ್ರಸ್ತುತಪರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT