ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ರಸಗೊಬ್ಬರ, ಬಿತ್ತನೆ ಬೀಜ ವಿತರಣೆಗೆ ಆಗ್ರಹ

Last Updated 23 ಜೂನ್ 2022, 2:58 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್‌) ಸದಸ್ಯರು ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮುಂಗಾರು ಹಂಗಾಮಿನ ಬಿತ್ತನೆ ಶುರುವಾಗಿದ್ದರೂ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ರಸಗೊಬ್ಬರ ಸಿಗುತ್ತಿಲ್ಲ. ರೈತ ಸಂಪರ್ಕ ಕೇಂದ್ರಗಳ ಮುಂದೆ ರೈತರು ಗೊಬ್ಬರಕ್ಕಾಗಿ ನಿತ್ಯ ಪರದಾಡುತ್ತಿದ್ದಾರೆ.

‘ರೈತರು ಆತಂಕ ಪಡಬೇಕಾಗಿಲ್ಲ. ಸಾಕಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದೆ’ ಎಂದು ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಹಲವು ಕಡೆಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನೇ ಇಲ್ಲ ಎಂದು ಪ್ರತಿಭಟನಾ ನಿರತರು ದೂರಿದರು.

ಜಿಲ್ಲೆಯಲ್ಲಿ ಈ ವರ್ಷ 7.84 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಬಿತ್ತನೆ ಪ್ರದೇಶಕ್ಕೆ ಬೇಕಾಗುವಷ್ಟು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಸುವಲ್ಲಿ ವಿಫಲವಾಗಿದೆ. ಜಿಲ್ಲೆಗೆ ಅಂದಾಜು 50 ಸಾವಿರ ಮೆಟ್ರಿಕ್ ಟನ್ ಅಗತ್ಯವಿದೆ. ಕೃಷಿ ಇಲಾಖೆಯ ಬಳಿ ಕೇವಲ 6,500 ಮೆಟ್ರಿಕ್‌ ಟನ್‌ ಮಾತ್ರ ಇದೆ ಎಂದು ಹೇಳಿದರು.

ಬೇಡಿಕೆ ಮತ್ತು ಪೂರೈಕೆಯ ನಡುವೆ ಸಾಕಷ್ಟು ಅಂತರವಿದೆ. ಅಲ್ಲದೆ ಡಿಎಪಿಯೊಂದಿಗೆ ಕಾಂಪ್ಲೆಕ್ಸ್ ಗೊಬ್ಬರ ಖರೀಸಿದರೆ ಮಾತ್ರ ಡಿಎಪಿ ಕೊಡುವುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಬಿತ್ತನೆಗೆ ಕಾಂಪ್ಲೆಕ್ಸ್‌ನ ಅಗತ್ಯವಿಲ್ಲ. 50 ಕೆ.ಜಿ. ಚಿಲದ ಡಿಎಪಿಂಯ ನಿಗದಿತ ಬೆಲೆ ₹ 1,350 ಇದೆ. ಆದರೆ, ವ್ಯಾಪಾರಿಗಳು ₹ 100 ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಿ, ಅಧಿಕ ಬೆಲೆಗೆ ಮಾರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೋವಿಡ್ ತಂದೊಡಿದ್ದ ಸಂಕಷ್ಟಗಳಿಗೆ ರೈತರು ಸಾಕಷ್ಟು ಆರ್ಥಿಕ ಹೊರೆ ಕಂಡಿದ್ದಾರೆ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ಫಸಲು ಲಭಿಸಲಿಲ್ಲ. ಈ ವರ್ಷವಾದರೂ ಕೃಷಿ ಇಲಾಖೆ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡಬೇಕು. ರೈತರಿಗೆ ಅಗತ್ಯವಾದಷ್ಟು ಬಿತ್ತನೆ ಬೀಜ ನೀಡಬೇಕು. ಇಲ್ಲದಿದ್ದರೇ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್‌ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಸಿಂಗೆ, ಜಿಲ್ಲಾ ಕಾರ್ಯದರ್ಶಿ ಎಸ್‌ಬಿ. ಮಹೇಶ್, ಪದಾಧಿಕಾರಿಗಳಾದ ಈರಣ್ಣಗೌಡ ನಾಗಶೆಟ್ಟಿ, ಶ್ರೀನಿವಾಸ ಸರಡಗಿ, ಪ್ರವಿಣ ತಂಗಾ, ವೀರಣ್ಣಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT