ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೈಕೆ ಜೊತೆ ‘ಹೆದರಿಸುವ ರಾಜಕೀಯ’ ಮುನ್ನಲೆಗೆ

Last Updated 11 ಏಪ್ರಿಲ್ 2019, 17:29 IST
ಅಕ್ಷರ ಗಾತ್ರ

ಕಲಬುರ್ಗಿ: ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಓಲೈಕೆಯ ಜೊತೆಗೆ ‘ಹೆದರಿಸುವ ರಾಜಕೀಯ’ವೂ ಮುನ್ನಲೆಗೆ ಬಂದಿದೆ.

‘ಬಂಜಾರ ಸಮಾಜದ ಮತಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ವಿಭಜಿಸುವ ವಿಷಯದಲ್ಲಿ ಉಂಟಾಗಿರುವ ಪೈಪೋಟಿ ಈಗ ತಾರಕಕ್ಕೇರಿದ್ದೇ ಇದಕ್ಕೆ ಕಾರಣ’ ಎಂಬ ಚರ್ಚೆ ಜೋರಾಗಿದೆ.

ಚಿತ್ತಾಪುರ ತಾಲ್ಲೂಕು ಕುಂಬಾರಹಳ್ಳಿಯಲ್ಲಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್‌ ಕಾರಿಗೆ ಕಲ್ಲು ತೂರಿ, ಅದರಲ್ಲಿದ್ದ ಕಾಂಗ್ರೆಸ್‌ ಪಕ್ಷದ ಬಂಜಾರ ಸಮಾಜದ ಮುಖಂಡರನ್ನು ಎಳೆದಾಡಿದ್ದಾರೆ ಎನ್ನಲಾದಪ್ರಕರಣ ಈಗ ಸದ್ದು ಮಾಡುತ್ತಿದೆ. ಇದಕ್ಕೆಸಂಬಂಧಿಸಿದಂತೆ ದೂರು–ಪ್ರತಿ ದೂರು ದಾಖಲಾಗಿದ್ದು, ಇದು ಆರೋಪ–ಪ್ರತ್ಯಾರೋಪಕ್ಕೂ ಕಾರಣವಾಗಿದೆ.

‘ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಸೋಲಿನ ಭೀತಿಯಿಂದ ತಮ್ಮ ಸಂಬಂಧಿಕರು ಹಾಗೂ ಬಾಡಿಗೆ ಗೂಂಡಾಗಳನ್ನು ಕಳಿಸಿ ಹೀಗೆ ಮಾಡಿಸುತ್ತಿದ್ದಾರೆ. ಒಂದೇ ಗುಂಪು ಇಂತಹ ಕೃತ್ಯವೆಸಗುತ್ತಿದೆ’ ಎಂದು ಕಾಂಗ್ರೆಸ್‌ ಆರೋಪಿಸುತ್ತಿದ್ದರೆ, ‘ಹಣ–ಹೆಂಡ ಹಂಚುತ್ತಿದ್ದರು. ಈ ಕಾರಣಕ್ಕಾಗಿ ನಮ್ಮ ಕಾರ್ಯಕರ್ತರು ಅವರನ್ನು ಪ್ರಶ್ನಿಸಿದ್ದಾರೆ’ ಎಂದು ಬಿಜೆಪಿಯವರು ಪ್ರತ್ಯಾರೋಪ ಮಾಡುತ್ತಿದ್ದಾರೆ.

ಎರಡೂ ಗುಂಪುಗಳ ಮೇಲೆ ಕೊಲೆ ಯತ್ನ ಪ್ರಕರಣ
ವಾಡಿ:
ಚಿತ್ತಾಪುರ ತಾಲ್ಲೂಕು ಕುಂಬಾರಹಳ್ಳಿಯಲ್ಲಿ ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಗುಂಪುಗಳ ವಿರುದ್ಧ ಕೊಲೆ ಯತ್ನವೂ ಸೇರಿದಂತೆ ಹಲವು ಕಲಂಗಳ ಅಡಿ ದೂರು–ಪ್ರತಿ ದೂರು ದಾಖಲಿಸಲಾಗಿದೆ.

‘ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾಗ ಬಿಜೆಪಿ ಪ್ರಚೋದಿತ ಗುಂಪೊಂದು ಹಲ್ಲೆ ಮಾಡಿ ದೈಹಿಕ ಹಿಂಸೆ ಹಾಗೂ ಕೊಲೆ ಯತ್ನ ನಡೆಸಿದೆ’ ಎಂದು ಪೇಠಶಿರೂರು ತಾಲ್ಲೂಕು ಪಂಚಾಯಿತಿ ಸದಸ್ಯ ನಾಮದೇವ ರಾಠೋಡ ಅವರು, ಬಿಜೆಪಿಯ ವಾಲ್ಮೀಕ್ ರಾಠೋಡ, ಮನೋಹರ ಶಂಕರ ರಾಠೋಡ, ಪುರು ರಾಮಚಂದ್ರ ಚವ್ಹಾಣ, ಮೋನು ದೀಪ್ಲಾ ರಾಠೋಡ ಸೇರಿದಂತೆ 15 ಜನರ ವಿರುದ್ಧ ದೂರು ಸಲ್ಲಿಸಿದ್ದರು. ಈ ಪೈಕಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

‘ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಭಾಷ ರಾಠೋಡ, ಹಡಗಲಿ ಶಾಸಕರೂ ಆಗಿರುವ ಸಚಿವ ಪಿ.ಟಿ ಪರಮೇಶ್ವರ, ಮುಖಂಡರಾದ ರವಿ ಚವ್ಹಾಣ, ನಾಮದೇವ ರಾಠೋಡ, ಬಾಬು ಪವಾರ, ಶ್ಯಾಮ, ವಾಹನ ಚಾಲಕ ಸಂತೋಷ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲತಾ ರಾಠೋಡ ಅವರು ಹಣ– ಹೆಂಡ ಹಂಚಲು ಬಂದಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಬಲವಂತ ಮಾಡುತ್ತಿದ್ದರು’ ಎಂದು ರೇವುನಾಯಕ ತಾಂಡಾ ನಿವಾಸಿ, ಬಿಜೆಪಿ ಕಾರ್ಯಕರ್ತ ವಸಂತ ಶಂಕರ್ ಚವ್ಹಾಣ ಪ್ರತಿ ದೂರು ನೀಡಿದ್ದು, ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪ: ‘ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಡಕ್ಕೆ ಮಣಿದು ಪೊಲೀಸರು ಬಿಜೆಪಿಯ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆದರೆ, ಕಾಂಗ್ರೆಸ್ಸಿನ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರನ್ನುಬಂಧಿಸಿಲ್ಲ’ ಎಂದು ಮಾಜಿ ಶಾಸಕ ವಾಲ್ಮಿಕ್‌ ನಾಯಕ ಆರೋಪಿಸಿದ್ದಾರೆ.

**

ರೇವೂನಾಯಕ ಬೆಳಮಗಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಎದುರಾಳಿಗಳಾಗಿ ಎರಡು ಚುನಾವಣೆ ಎದುರಿಸಿದ್ದಾರೆ. ಆಗ ಇಲ್ಲದ ಜಾತಿಯ ವೈಷಮ್ಯದ ಮಾತು ಈಗೇಕೆ? ಸೋಲಿನ ಹತಾಶೆಯಿಂದ ಆರ್‌ಎಸ್‌ಎಸ್‌ನವರು ಇಂತಹ ಕೃತ್ಯ ಮಾಡಿಸುತ್ತಿದ್ದಾರೆ. ಇದಕ್ಕೆ ನಾವು ಹೆದರಲ್ಲ.
–ಪ್ರಿಯಾಂಕ್‌ ಖರ್ಗೆ, ಸಚಿವ

**

ಕಾರಿನಲ್ಲಿ ಎಷ್ಟು ಹಣ ಸಾಗಿಸುತ್ತಿದ್ದರು? ಎಲ್ಲಿಗೆ ಸಾಗಿಸುತ್ತಿದ್ದರು ಮತ್ತು ಯಾರನ್ನು ಖರೀದಿ ಮಾಡಲು ಹೊರಟಿದ್ದರು ಎಂಬುದು ನಮಗೂ ಗೊತ್ತಿದೆ. ಈ ಅಕ್ರಮ ತಡೆಯಲು ಹೋದ ಬಿಜೆಪಿ ಕಾರ್ಯಕರ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.
-ಎನ್‌.ರವಿಕುಮಾರ್‌, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT