ಸೋಮವಾರ, ಮೇ 23, 2022
30 °C
ಕಾಡಿಗೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಕಲಬುರ್ಗಿ: ಅರಣ್ಯದಲ್ಲಿ ಫೈರ್‌ಲೈನ್ ನಿರ್ಮಾಣ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಚಿಂಚೋಳಿಯ ವನ್ಯಜೀವಿ ಧಾಮವನ್ನು ಬೇಸಿಗೆಯಲ್ಲಿ ಬೆಂಕಿ ಅವಘಡಗಳಿಂದ ರಕ್ಷಿಸಲು, ಮುನ್ನೆಚ್ಚರಿಕೆ ವಹಿಸಿದ ಅರಣ್ಯ ಅಧಿಕಾರಿಗಳು ರಸ್ತೆ ಬದಿ, ಕಾಲುದಾರಿ, ಹೊಲಗಳಿಗೆ ಹೋಗುವ ಹಣಾದಿ ಮತ್ತು ಕಾಡಿನ ಸೀಮೆಯಲ್ಲಿ ಫೈರ್‌ಲೈನ್ ನಿರ್ಮಿಸುತ್ತಿದ್ದಾರೆ.

ತೇಗ ಮತ್ತು ದಿಂಡಿಲು ಮರಗಳೇ ಹೆಚ್ಚಾಗಿರುವ ಈ ಕಾಡಿನಲ್ಲಿ ಮಾಗಿಯ ಕಾಲ ಬಂದರೆ ಸಾಕು ಮರಗಳಿಂದ ಒಣಗಿದ ಎಲೆಗಳು ಉದುರಲಾರಂಭಿಸುತ್ತವೆ. ಹೀಗೆ ಉದುರಿದ ಎಲೆಗಳೇ ಒಣಗಿ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಪ್ರಸಕ್ತ ವರ್ಷ ವಾಡಿಕೆಗಿಂತಲೂ ಶೇ 25ಕ್ಕೂ ಅಧಿಕ ಮಳೆ ಸುರಿದಿದ್ದರಿಂದ ಕಾಡಿನಲ್ಲಿ ಮರಗಳು ಈಗಲೂ ಹಸಿರಾಗಿವೆ. ಇದರಿಂದ ಎತ್ತರದ ಪ್ರದೇಶದಲ್ಲಿನ ಮರಗಳಿಂದ ಎಲೆ ಉದುರಿವೆ. ಆದ್ಯತೆ ಮೇಲೆ ಇಂತಹ ಕಡೆ ಫೈರ್‌ಲೈನ್ ನಿರ್ಮಾಣದಲ್ಲಿ ಅರಣ್ಯ ಸಿಬ್ಬಂದಿ ನಿರತರಾಗಿದ್ದಾರೆ.

ಚಿಕ್ಕಲಿಂಗದಳ್ಳಿ, ಶಾದಿಪುರ, ಚಿಂದಾನೂರ ಅಂತಾವರಂ, ಶೇರಿಭಿಕನಳ್ಳಿ ಶಾದಿಪುರ, ಧರ್ಮಾಸಾಗರ, ಭೋಗಾನಿಂಗದಳ್ಳಿ ಮತ್ತು ಕುಸ್ರಂಪಳ್ಳಿ, ಚಂದ್ರಂಪಳ್ಳಿ, ಗೊಟ್ಟಮಗೊಟ್ಟ, ಮಾಣಿಕ ಪುರ, ಪೋಚಾವರಂ ಮೊಗದಂ ಪುರ, ಪೆದ್ದಾತಾಂಡಾ ಅಂತಾ ವರಂ, ಕುಂಚಾವರಂ ಚಿಂದಾನೂರ, ಕುಂಚಾವರಂ ಜಹೀರಾಬಾದ ಗಡಿ ಮೊದಲಾದ ಕಡೆಗಳಲ್ಲಿ ಫೈರ್ ಲೈನ್ ನಿರ್ಮಾಣ ನಡೆಯುತ್ತಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಇದು ಪೂರ್ಣಗೊಂಡಿದೆ.

ತೇವಾಂಶವಿರುವ ಕಡೆ ಇನ್ನೂ ನಿರ್ಮಿಸಬೇಕಿದೆ. ಉಳಿದ ಕಡೆಗಳಲ್ಲಿ ಫೈರ್ ಲೈನ್ ನಿರ್ಮಿಸಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ರಾಹುಲ್ ರಾದುರೆ ವಿವರಿಸಿದರು.

ಪ್ರಾದೇಶಿಕ ಅರಣ್ಯ ವಲಯದಲ್ಲಿ 12 ಸಾವಿರ ಹೆಕ್ಟೇರ್ ಕಾಡಿದೆ. ಕೆಲವು ಕಡೆ ಒಣಗಿದ ಹುಲ್ಲು ಸುಡಲು ಹೊತ್ತಿಸಿದ ಬೆಂಕಿ ಚಿಮ್ಮನಚೋಡ, ದೇಗಲಮಡಿ, ಕೋಡ್ಲಿ, ಚಂದನಕೇರಾ, ಭುಂಯಾರ್ ಮೊದಲಾದ ಕಡೆ ಕಾಡಿಗೂ ಹಬ್ಬಿತ್ತು ಅದನ್ನು ನಂದಿಸಲಾಗಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಮಹಮದ್ ಮುನೀರ್ ಅಹಮದ್.

ಬೆಂಕಿ ಪತ್ತೆಗೆ ಅರಣ್ಯಸೂಚಿ ತಂತ್ರಾಂಶ ವರ: ಜಿಪಿಎಸ್ ಆಧರಿಸಿ ಕಾಡು, ಕಾಡಿನ ಗಡಿ ಹಾಗೂ ಕೃಷಿ ಭೂಮಿಗಳಲ್ಲಿ ಬೆಂಕಿಬಿದ್ದರೆ ಅದನ್ನು ಅರಣ್ಯಸೂಚಿ ತಂತ್ರಾಂಶದಲ್ಲಿ ಕ್ಷಣಾರ್ಧದಲ್ಲಿಯೇ ತೋರಿಸುತ್ತದೆ. ಬೆಂಕಿಬಿದ್ದ ಸ್ಥಳ ಸಮೇತ ಮಾಹಿತಿ ನೀಡುತ್ತದೆ. ತಕ್ಷಣ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುತ್ತಾರೆ ಎನ್ನುವುದು ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಅವರ ಹೇಳಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು