ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದನೂರು: ಸಾವಿರಾರು ಮೀನುಗಳ ಸಾವು

ಭೀಮಾ ನದಿ ದಂಡೆಯಲ್ಲಿ ಮೀನುಗಳ ಸವದ ರಾಶಿ, ವಿಡಿಯೊ ವೈರಲ್‌, ಗ್ರಾಮಸ್ಥರಲ್ಲಿ ಆತಂಕ
Last Updated 15 ಮೇ 2021, 3:27 IST
ಅಕ್ಷರ ಗಾತ್ರ

ವಾಡಿ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಬಳಿ ಭೀಮಾ ನದಿಯಲ್ಲಿ ಸಾವಿರಾರುಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿವೆ. ಗ್ರಾಮಗಳ ಸುತ್ತ ನದಿ ದಡದಗುಂಡ ಸಣ್ಣ ಮೀನುಗಳ ಶವದ ರಾಶಿಯೇ ಬಿದ್ದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಸಮೀಪದ ಕುಂದನೂರು ಸಂಗಮದ ಸುತ್ತ ಮೀನುಗಳು ಸತ್ತಿರುವುದು ಕಂಡು ಬಂದಿದೆ. ಇಲ್ಲಿನ ನೀರು ವಾಡಿ ಪಟ್ಟಣ, ಕುಂದನೂರು, ಕಡಬೂರು, ಚಾಮನೂರು ಸೇರಿದಂತೆ ಹಲವು ಗ್ರಾಮಗಳಿಗೆ ಪೂರೈಕೆಯಾಗುತ್ತಿದೆ. ನದಿ ನೀರನ್ನು ಸಂಸ್ಕರಿಸಿ ಪಟ್ಟಣಕ್ಕೆ ಪೂರೈಕೆ ಮಾಡಲಾಗುತ್ತಿದೆ. ಆದರೂ ಸ್ಥಳೀಯರ ಆತಂಕ ದೂರವಾಗಿಲ್ಲ. ಕುಡಿಯುವ ನೀರು ದುರ್ವಾಸನೆ ಬೀರುತ್ತಿದ್ದು, ನೀರಿನಲ್ಲಿ ವಿಷದ ಅಂಶವೇನಾದರೂ ಇದೆಯೇ ಎಂದು ಜನ ಆತಂಕಗೊಂಡಿದ್ದಾರೆ.

ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಜಾಕ್ ವೆಲ್‌ನ ಒಂದು ಕಿ.ಮೀ ಅಂತರದಲ್ಲಿ ಮೀನುಗಳು ಸತ್ತು ಬಿದ್ದಿವೆ. ಸತ್ತ ಮೀನುಗಳ ರಾಶಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭೀಮಾ ನದಿಯಲ್ಲಿ ಸದ್ಯಕ್ಕೆ ಒಳಹರಿವು ಇಲ್ಲ. ಆದರೆ, ಮುಂದೆ ಸಾಗುವ ನೀರನ್ನು ಸನ್ನತಿ ಬಳಿ ಬಾಂದಾರ್ ನಿರ್ಮಿಸಿ ತಡೆಹಿಡಿಯಲಾಗಿದೆ. ಅದಕ್ಕೂ ಮೊದಲು ಚಾಮನೂರು ಬಳಿ ಬಾಂದಾರ್ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ನೀರು ತಡೆ ಹಿಡಿಯಲಾಗಿದೆ. ನದಿಯ ನಿಂತ ನೀರು ಬೇಸಿಗೆಯ ಬಿಸಿಲಿನಲ್ಲಿ ಕಾಯುತ್ತದೆ. ಕಾದ ನೀರು ಮೀನಿನಂತ ಜಲಚರಗಳ ಕುತ್ತು ತರುತ್ತದೆ. ಬಹುಶಃ ಇದರಿಂದಲೇ ಸಣ್ಣ ಮೀನುಗಳು ಸತ್ತಿರಬಹುದು. ಆದರೆ, ಇಷ್ಟು ಪ್ರಮಾಣದಲ್ಲಿ ಯಾವತ್ತೂ ಸತ್ತಿರಲಿಲ್ಲ ಎನ್ನುತ್ತಾರೆ ಕುಂದನೂರು ನಿವಾಸಿ ಶೇಷಣ್ಣ ಹೂಗಾರ.‌

ಯಾವ ಕಾರಣಕ್ಕಾಗಿ ಮೀನುಗಳ ಮೃತಪಡುತ್ತಿವೆ ಎನ್ನುವುದನ್ನು ಮೀನುಗಾರಿಕೆ ಇಲಾಕೆ ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಬೇಕು. ಅಲ್ಲಿಯವರೆಗೆ ಜನರು ಮೀನು ತಿನ್ನುವುದನ್ನು ಬಿಡಬೇಕು ಎಂದೂ ಗ್ರಾಮದ ಮುಖಂಡರು ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT