ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಟ್ಟ ಮಂಜಿನಿಂದಾಗಿ ಹೈದರಾಬಾದ್‌ನಲ್ಲಿ ಇಳಿದ ವಿಮಾನ; ಎಲ್ಲ ಪ್ರಯಾಣಿಕರೂ ಸುರಕ್ಷಿತ

ಬೆಳಿಗ್ಗೆ 9.35ಕ್ಕೆ ಲ್ಯಾಂಡಿಂಗ್‌ ಆಗಬೇಕಿದ್ದ ಸ್ಟಾರ್‌ಏರ್‌ನ ವಿಮಾನ
Last Updated 21 ನವೆಂಬರ್ 2021, 16:01 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ 9.35ಕ್ಕೆ ಇಳಿಯಬೇಕಿದ್ದ ಸ್ಟಾರ್‌ ಏರ್ ಸಂಸ್ಥೆಯ ವಿಮಾನ ಹವಾಮಾನ ವೈಪರೀತ್ಯದ ಕಾರಣ, ಹೈದರಾಬಾದ್‌ನ ರಾಜೀವಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

‘ಎಂದಿನಂತೆ ಬೆಂಗಳೂರಿನಿಂದ ಬೆಳಿಗ್ಗೆ 8.40ಕ್ಕೆ ಹಾರಿದ ವಿಮಾನವು ಇಲ್ಲಿನ ವಿಮಾನ ನಿಲ್ದಾಣಕ್ಕೆ ಸರಿಯಾಗಿ 9.35ಕ್ಕೆ ಲ್ಯಾಂಡಿಂಗ್‌ ಆಗಬೇಕಿತ್ತು. ಆದರೆ, ದಟ್ಟ ಮಂಜು ಕವಿದ ಕಾರಣ ‍ಪೈಲೆಟ್‌ಗೆ ರನ್‌ ವೇ ಕಾಣಿಸಲಿಲ್ಲ. ಲ್ಯಾಂಡಿಂಗ್‌ಗೆ ನೀಡಬೇಕಾದ ಸಿಗ್ನಲ್‌ಗಳೂ ಸರಿಯಾಗಿ ತಲುಪದ ಕಾರಣ, ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ವಿಮಾನವನ್ನು ಹೈದರಬಾದ್‌ ನಿಲ್ದಾಣಕ್ಕೆ ಹಾರಿಸಲಾಯಿತು’ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದರು.

‘ವಿಮಾನವು ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಯಾರೂ ಆತಂಕ ಪಡಬೇಕಿಲ್ಲ. ಅಲ್ಲಿಂದ ಕೆಲವು ಪ್ರಯಾಣಿಕರು ಖಾಸಗಿ ವಾಹನ ಮಾಡಿಕೊಂಡು ಕಲಬುರಗಿ ತಲುಪಿದ್ದಾರೆ. ಮತ್ತೆ ಕೆಲವರಿಗೆ ಅಲ್ಲಿನ ವಿಮಾನ ನಿಲ್ದಾಣದಿಂದಲೇ ವಾಹನ ವ್ಯವಸ್ಥೆ ಮಾಡಲಾಗಿದೆ’ ಎಂದೂ ಅವರು ಖಚಿತಪಡಿಸಿದರು.‌

ಉಳಿದಂತೆ, ಬೆಂಗಳೂರಿನಿಂದ ಬಂದು ಮಧ್ಯಾಹ್ನ 3.15ಕ್ಕೆ ಕಲಬುರಗಿ ತಲುಪ‍ಬೇಕಿದ್ದ ಅಲಯನ್ಸ್‌ ಏರ್‌ನ ಇನ್ನೊಂದು ವಿಮಾನವು ಸರಿಯಾದ ಸಮಯಕ್ಕೆ ಕಲಬುರಗಿಯಲ್ಲಿ ಇಳಿಯಿತು. ಮಧ್ಯಾಹ್ನ 2.25ಕ್ಕೆ ತಿರುಪತಿಯಿಂದ ಹೊರಟು 3.30ಕ್ಕೆ ತಲುಬೇಕಿದ್ದ ತಿರುಪತಿ– ಕಲಬುರಗಿ ಮಾರ್ಗದ ವಿಮಾನವೂ ಸರಿಯಾದ ಸಮಯಕ್ಕೆ ನಿಗದಿತ ನಿಲ್ದಾಣದಲ್ಲಿ ಬಂದಿಳಿದಿದೆ.

ಇಬ್ಬರು ಶಾಸಕರು ಪ್ರಯಾಣ: ಈ ವಿಮಾನದಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಹಿನ್ನೆಲೆ ಗಾಯಕ, ಸಂಗೀತಗಾರ ಗುರುಕಿರಣ್ ಸಹ ಇದ್ದರು. ಅಜಯ್ ಸಿಂಗ್ ಹಾಗೂ ಪ್ರಿಯಾಂಕ್ ಅವರು ಹೈದರಾಬಾದ್‌ನಿಂದ ಹುಮನಾಬಾದ್‌ಗೆ ತೆರಳಿದರು. ಗುರುಕಿರಣ್ ಕಲಬುರಗಿಗೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT