ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನದಿಗೆ 1.80 ಕ್ಯೂಸೆಕ್ ನೀರು: ಉಕ್ಕಿ ಹರಿಯುತ್ತಿರುವ ಅಮರ್ಜಾ, ಬೋರಿ ಹಳ್ಳ

Last Updated 22 ಅಕ್ಟೋಬರ್ 2022, 4:03 IST
ಅಕ್ಷರ ಗಾತ್ರ

ಅಫಜಲಪುರ: ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ವೀರ ಭಟ್ಕಳ ಡ್ಯಾಂನಿಂದ 1.80 ಲಕ್ಷ ಕ್ಯೂಸೆಕ್‌ ನೀರು ಭೀಮಾ ನದಿಗೆ ಬರುತ್ತಿರುವುದರಿಂದ ತಾಲ್ಲೂಕಿನಲ್ಲಿ ಹರಿಯುತ್ತಿರುವ 170 ಕಿ.ಮೀ ಭೀಮಾನದಿ ತುಂಬಿ ಹರಿಯುತ್ತಿದೆ. ಅದರ ಉಪನದಿ ಅಮರ್ಜಾ ಮತ್ತು ಬೋರಿ ಹಳ್ಳಗಳು ತುಂಬಿ ಹರಿಯುತ್ತಿವೆ. ಇನ್ನೊಂದು ಕಡೆ ಭೀಮಾ ಬ್ಯಾರೇಜ್ ತುಂಬಿಕೊಂಡಿರುವುದರಿಂದ ಹಿನ್ನೀರಿನಿಂದ ಕೆಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಅಮರ್ಜಾ ನದಿ ತೀರದ ತಾಲ್ಲೂಕಿನ ತೆಲ್ಲೂರ, ದಿಕ್ಸಂಗಾ, ನಂದರಗಾ, ಜೇವರ್ಗಿ(ಕೆ), ಜೇವರ್ಗಿ(ಬಿ) ಹತ್ತಿರ ನದಿ ತುಂಬಿ ಹರಿಯುತ್ತಿವೆ. ದಿಕ್ಸಂಗಾ(ಬಿ) ಹಾಗೂ ಜೇವರ್ಗಿ(ಕೆ) ಹತ್ತಿರ ಬೋರಿಹಳ್ಳ ತುಂಬಿಕೊಂಡಿದ್ದು, ಸಂಪರ್ಕ ಕಡಿತವಾಗಿದೆ. ಅಲ್ಲದೆ ತಾಲ್ಲೂಕಿನ ಭೀಮಾನದಿಯ ಘತ್ತರಗಿ ಗ್ರಾಮದ ಹತ್ತಿರದ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಸಿಂದಗಿ ತಾಲ್ಲೂಕಿಗೆ ಸಂಪರ್ಕ ಕಡಿತವಾಗಿದೆ.

ತಾಲ್ಲೂಕಿನ ದೇವಲಗಾಣಗಾಪುರ ಹತ್ತಿರ ಬ್ರೀಜ್ ಕಂ ಬ್ಯಾರೇಜ್ ತುಂಬಿ ಹರಿಯುತ್ತಿರುವುದರಿಂದ ಜೇವರ್ಗಿ ತಾಲ್ಲೂಕಿಗೆ ಸಂಪರ್ಕ ಕಡಿತವಾಗಿದೆ. ಇನ್ನೊಂದು ಕಡೆ ಭೀಮಾ ಹಿನ್ನೀರಿನಿಂದ ಅಲ್ಲಲ್ಲಿ ಕಟಾವಿಗೆ ಬಂದಿರುವ ಉದ್ದು, ಹೆಸರು, ಮೆಕ್ಕೆಜೋಳ ಹಾಗೂ ಕಬ್ಬು, ತೊಗರಿ, ಹತ್ತಿ ಬೆಳೆಗಳು ಹಾಳಾಗುತ್ತಿವೆ. ಮತ್ತೆ 2 ದಿನಗಳಿಂದ ತಾಲ್ಲೂಕಿನಲ್ಲಿ ಮಳೆ ಆರಂಭವಾಗಿದೆ. ಒಂದು ಕಡೆ ಭೀಮಾ ಪ್ರವಾಹ ಇನ್ನೊಂದು ಕಡೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

‘ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ವೀರ ಭಟ್ಕಳ ಡ್ಯಾಂನಿಂದ 1.80 ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿರುವುದರಿಂದ ಸದ್ಯಕ್ಕೆ ಭೀಮಾ ಬ್ಯಾರೇಜ್‌ನಲ್ಲಿ 401.5 ಮೀ ನೀರು ಸಂಗ್ರಹ ಆ‌ಗಿದೆ. ಹೆಚ್ಚುವರಿ ಬಂದಿರುವ ನೀರನ್ನು 24 ಗೇಟ್‌ಗಳ ಮುಖಾಂತರ ಬಿಡಲಾಗುತ್ತಿದೆ. ಜನರು ನದಿ ತೀರಕ್ಕೆ ಹೋಗಬಾರದು’ ಎಂದು ಭೀಮಾ ಏತ ನೀರಾವರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷಕುಮಾರ ಪಾಟೀಲ ಕೋರಿದ್ದಾರೆ.

‘ಘತ್ತರಗಾ, ಗಾಣಗಾಪುರ, ದಿಕ್ಸಂಗಾ, ಜೇವರ್ಗಿ(ಕೆ) ಸೇತುವೆಗಳು ತುಂಬಿ ಹರಿಯುತ್ತಿವೆ. ಯಾರೂ ಸೇತುವೆ ದಾಟುವ ಸಾಹಸ ಮಾಡಬಾರದು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ 2 ದಿನ ಮಳೆ ಸುರಿಯಲಿದ್ದು, ಗ್ರಾಮ ಲೆಕ್ಕಿಗರು, ಕಂದಾಯ ನೀರಿಕ್ಷಕರು ಕೇಂದ್ರ ಸ್ಥಾನದಲ್ಲಿದ್ದು, ಸಾವು–ನೋವುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ತಹಶೀಲ್ದಾರ್‌ ಸಂಜೀವಕುಮಾರ ದಾಸರ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT