ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ದಾಹ ನೀಗಿಸದ ‘ಮನೆ ಮನೆಗೆ ಗಂಗೆ’

ಜಲ ಜೀವನ್ ಮಿಷನ್ ಯೋಜನೆ: ಹೊಳೆಯಂತೆ ಹಣ ಹರಿದರೂ ಬಾರದ ನೀರು
Published 13 ಮೇ 2024, 4:48 IST
Last Updated 13 ಮೇ 2024, 4:48 IST
ಅಕ್ಷರ ಗಾತ್ರ

ಕಲಬುರಗಿ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಶುದ್ಧ ನೀರು ಪೂರೈಸುವ ಉದ್ದೇಶದಿಂದ ರೂಪಿಸಲಾದ ‘ಜಲಜೀವನ್ ಮಿಷನ್ ಯೋಜನೆ’ಯ (ಜೆಜೆಎಂ) ಬಹುತೇಕ ನಲ್ಲಿಗಳಿಗೆ ಜಲ ಮೂಲದ ಅಭಾವ ಕಾಡುತ್ತಿದೆ. ಹಣದ ಹೊಳೆಯೇ ಹರಿದರೂ ನಲ್ಲಿಗಳಲ್ಲಿ ನೀರೇ ಬರುತ್ತಿಲ್ಲ.

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ‘ಮನೆ– ಮನೆಗೆ ಗಂಗೆ’ ಎಂಬ ಹೆಸರಿನಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಹಂತದ ಜೆಜೆಎಂ ಯೋಜನೆ 2019ರಲ್ಲಿ ಜಾರಿಯಾಗಿದೆ. ಯೋಜನೆಗೆ ಒಟ್ಟು ಅನುದಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ತಲಾ ಶೇ 50ರಷ್ಟು ಇದೆ.

ಇಡೀ ಜಿಲ್ಲೆ ಈ ಬಾರಿಯ ಬರಗಾಲಕ್ಕೆ ತತ್ತರಿಸಿದೆ. ಅಂತರ್ಜಲ ಸಿಗುತ್ತಿಲ್ಲ. ಕೆರೆ ಕಟ್ಟೆಗಳು, ನದಿಗಳ ಒಡಲು, ಜಲಮೂಲಗಳು ಬತ್ತಿವೆ. ಕೊಳವೆ ಬಾವಿ ಕೊರೆದರೂ ಸಾಕಷ್ಟು ಪ್ರಮಾಣದಲ್ಲಿ ನೀರಿನ ಪ್ರಮಾಣ ಕಂಡು ಬರುತ್ತಿಲ್ಲ. ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ನಿತ್ಯ ಸರಾಸರಿ 55 ಲೀಟರ್ ನೀರು ಪೂರೈಸುವ ಗುರಿಯ ‘ಜೆಜೆಎಂ’ಗೆ ಜನರ ದಾಹ ನೀಗಿಸಲು ಸಾಧ್ಯವಾಗುತ್ತಿಲ್ಲ. ವಿರೋಧ ಮತ್ತು ಹಲವು ಅಡೆತಡೆಗಳ ನಡುವೆಯೂ 2 ಲಕ್ಷಕ್ಕೂ ಅಧಿಕ ನಲ್ಲಿಗಳು ಜೋಡಣೆ ಕಾರ್ಯ ನಡೆದಿದ್ದರೂ ನೀರಿನ ಸಮಸ್ಯೆ ಕೊನೆಗೊಂಡಿಲ್ಲ.

ನಾಲ್ಕು ಹಂತಗಳ ಒಟ್ಟು 1,037 ಕಾಮಗಾರಿಗಳಲ್ಲಿ 534 ಕಾಮಗಾರಿಗಳು ಪೂರ್ಣಗೊಂಡಿದ್ದು, ₹ 349.57 ಕೋಟಿ ವೆಚ್ಚ ಮಾಡಲಾಗಿದೆ. 534 ಕಾಮಗಾರಿಗಳಿಂದ 2,16,606 ಫಂಕ್ಷನಲ್‌ ಹೌಸ್‌ಹೋಲ್ಡ್‌ ಟ್ಯಾಪ್‌ ಸಂಪರ್ಕ (ಎಫ್‌ಎಚ್‌ಟಿಸಿ) ಒದಗಿಸಲಾಗಿದೆ. ಸಂಪರ್ಕ ಕಲ್ಪಿಸಲಾದ ನಲ್ಲಿಗಳ ಪೈಕಿ ಎಷ್ಟು ನಲ್ಲಿಗಳಲ್ಲಿ ನೀರು ಬರುತ್ತಿದೆ ಎಂಬ ಸ್ಪಷ್ಟ ಮಾಹಿತಿ ಸಂಬಂಧಿಸಿದ ಅಧಿಕಾರಿಗಳು ಬಹಿರಂಗ ಪಡಿಸುತ್ತಿಲ್ಲ. ಆದರೆ, ‘ಬರಗಾಲದಿಂದಾಗಿ ನೀರಿನ ಮೂಲಗಳು ಬತ್ತಿವೆ. ಕೊಳವೆ ಬಾವಿಗಳು ಕೊರೆಸಿದರೂ ಅಂತರ್ಜಲದ ಮಟ್ಟ ಕುಸಿದಿದೆ. ಎತ್ತರದ ಪ್ರದೇಶದಲ್ಲಿರುವ ಮನೆಗಳಿಗೆ ನಲ್ಲಿ ನೀರು ತಲುಪುತ್ತಿಲ್ಲ’ ಎಂಬ ಸಬೂಬು ಅಧಿಕಾರಿಗಳಿಂದ ಬರುತ್ತಿದೆ.

ಅಫಜಲಪುರ ತಾಲ್ಲೂಕಿನ ಒಟ್ಟು 109 ಕಾಮಗಾರಿಗಳ ಪೈಕಿ 40 ಕಾಮಗಾರಿಗಳು ಮಾತ್ರ ಪೂರ್ಣಗೊಳಿಸಲಾಗಿದ್ದು, 27,838 ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ₹ 35.91 ಕೋಟಿ ಖರ್ಚು ಮಾಡಲಾಗಿದೆ. ಆದರೆ, ತಾಲ್ಲೂಕಿನ ಬಹುತೇಕ ಗ್ರಾಮಗಳ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಆಳಂದ, ಕಮಲಾಪುರ, ಯಡ್ರಾಮಿ ತಾಲ್ಲೂಕಿನ ಕೆಲವು ಹಳ್ಳಿಗಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂತಹುದ್ದೆ ಸಮಸ್ಯೆ ಮುಂದುವರಿದಿದೆ.

ಹಲವು ಕಡೆ ಜಾಗದ ತಕರಾರರು ಸೇರಿದಂತೆ ಇತರೆ ಕಾರಣಗಳಿಗೆ ಕಾಮಗಾರಿ ಶುರುವೇ ಆಗಿಲ್ಲ. ಕೆಲವೆಡೆ ಅರ್ಧಂಬರ್ಧ ಕಾಮಗಾರಿ ಮುಗಿದಿವೆ. ಮುಗಿದ ಕಾಮಗಾರಿಗಳ ನಲ್ಲಿಗಳಿಂದ ತೊಟ್ಟು ನೀರೂ ಬರುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಗಳು ಒಂದಿಲ್ಲೊಂದು ರೀತಿಯ ಅವಾಂತರ ಸೃಷ್ಟಿಸಿವೆ ಎಂಬುದು ಗ್ರಾಮೀಣ ಭಾಗದ ಜನರ ಬೇಸರ.

‘ಪ್ರತಿ ವ್ಯಕ್ತಿಗೆ ನಿತ್ಯ ಸರಾಸರಿ 55 ಲೀಟರ್ ನೀರು ಪೂರೈಸುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ಎಂಜಿನಿಯರ್‌ಗಳು ವರ್ಷಪೂರ್ತಿ ನೀರು ಪೂರೈಸುವ ಜಲಮೂಲಗಳನ್ನು ಕಂಡುಕೊಳ್ಳುವಲ್ಲಿ ಎಡವಿದ್ದಾರೆ. ಈಗ ಬರಗಾಲದತ್ತ ಬೆರಳು ತೋರಿಸುತ್ತಿದ್ದಾರೆ. ಜಲಮೂಲಗಳು ಇಲ್ಲದಿದ್ದರೂ ಕಾಟಾಚಾರಕ್ಕೆ ಪೈಪ್‌ಲೈನ್ ಅಳವಡಿಸಿದ ಹಲವು ಪ್ರಕರಣಗಳಿವೆ. ಬಹುತೇಕ ಕಡೆಗಳಲ್ಲಿ ದಕ್ಷತೆಯ ಕೊರತೆ, ಭ್ರಷ್ಟಾಚಾರ, ಒಬ್ಬ ಗುತ್ತಿಗೆದಾರನಿಗೆ 10ಕ್ಕೂ ಹೆಚ್ಚು ಕಾಮಗಾರಿ ಕೊಟ್ಟಿದ್ದಾರೆ. ಇಂತಹ ಹಲವು ಕಾರಣಗಳಿಂದ ಯೋಜನೆಯು ಹಳ್ಳಹಿಡಿಯುತ್ತಿದೆ’ ಎಂಬುದು ಹಳ್ಳಿಗರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT