ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಸ್ಪಂದನೆ: ಉದ್ಯಾನ ದತ್ತು ಯೋಜನೆ ರದ್ದು

ನಗರದ ಅಭಿವೃದ್ಧಿಗೆ ಪಾಲಿಕೆ ಜೊತೆ ಕೈಜೋಡಿಸದ ಕೈಗಾರಿಕೆಗಳು, ಸಂಘ–ಸಂಸ್ಥೆಗಳು
Published 19 ಅಕ್ಟೋಬರ್ 2023, 6:11 IST
Last Updated 19 ಅಕ್ಟೋಬರ್ 2023, 6:11 IST
ಅಕ್ಷರ ಗಾತ್ರ

ಕಲಬುರಗಿ: ಕನಿಷ್ಠ ಸೌಲಭ್ಯಗಳೂ ಇಲ್ಲದೆ ಬಳಲುತ್ತಿರುವ ನಗರದ ಉದ್ಯಾನಗಳನ್ನು ಕೈಗಾರಿಕೆಗಳು, ಸಂಘ–ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಪರಿಚಯಿಸಿದ್ದ ‘ಉದ್ಯಾನ ದತ್ತು ಯೋಜನೆ’ಗೆ ಸ್ಪಂದನೆ ಸಿಗದ ಕಾರಣ ರದ್ದು ಪಡಿಸಲಾಗಿದೆ.

ನಗರದಲ್ಲಿ 230ಕ್ಕೂ ಹೆಚ್ಚು ಉದ್ಯಾನಗಳಿವೆ. ಅವುಗಳಲ್ಲಿ ಕೆಲವು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದವುಗಳಲ್ಲಿ ಮೂಲಸೌಕರ್ಯ ನೋಡಲೂ ಸಿಗುವುದಿಲ್ಲ. ಅವುಗಳಿಗೆ ಉದ್ಯಾನ ಎನಿಸಿಕೊಳ್ಳುವ ಅರ್ಹತೆಯೂ ಇಲ್ಲ.

ನಗರದ ಜಯನಗರ, ದೇವನಗರ, ಮಹಾಲಕ್ಷ್ಮೀ, ಸಂಗಮೇಶ್ವರ, ಭಾವನಪ್ಪ ಬಡಾವಣೆ, ವಿಠ್ಠಲನಗರ ಬಡಾವಣೆ, ಖೂಬಾ ಪ್ಲಾಟ್‌ ಮತ್ತು ಸಾಯಿನಗರ, ರಾಜಮಹಲ್‌, ಜೇವರ್ಗಿ ಕಾಲೊನಿ, ವಿದ್ಯಾನಗರ, ಶಕ್ತಿನಗರ, ಕುವೆಂಪು ನಗರ ಹಾಗೂ ವೆಂಕಟೇಶ್ವರ ನಗರ, ಗಾಂಧಿನಗರ, ಬಸವೇಶ್ವರ ನಗರ ಸೇರಿ ಅನೇಕ ಬಡಾವಣೆಯ ಕೆಲ ಕಡೆ ಉದ್ಯಾನಗಳಲ್ಲಿ ಆಸನಗಳಿಲ್ಲ. ವಾಯು ವಿಹಾರಕ್ಕೆ ಪಥವಿಲ್ಲ. ಗಿಡ ಮರಗಳ ನೀರಿನ ದಾಹ ತಣಿಸಲು ಜಲಮೂಲಗಳಿಲ್ಲ. ವಿದ್ಯುತ್ ಸಂಪರ್ಕ ಇಲ್ಲ. ಮಕ್ಕಳಿಗೆ ಆಟದ ಪರಿಕರಗಳಿಲ್ಲ.

ಮಹಾನಗರ ಪಾಲಿಕೆ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಕಾರಣ ಅವುಗಳ ಅಭಿವೃದ್ಧಿ ಸಾಧ್ಯವಾಗದೇ 2021 ರ ಆಗಸ್ಟ್‌ನಲ್ಲಿ ಪಾಲಿಕೆಯ ಅಂದಿನ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಉದ್ಯಾನ ದತ್ತು ಯೋಜನೆ ಪರಿಚಯಿಸಿದರು. ಸಂಘ–ಸಂಸ್ಥೆಗಳು, ಕೈಗಾರಿಕೆಗಳು ಉದ್ಯಾನಗಳ ಅಭಿವೃದ್ಧಿಗೆ ಮುಂದೆ ಬರಬೇಕು. ಈ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದ್ದರು.

ಈ ಯೋಜನೆಯಡಿ ಉದ್ಯಾನವನ್ನು ನಿರ್ದಿಷ್ಟ ಅವಧಿಗೆ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ದತ್ತು ಪಡೆದವರು ಆ ನಿರ್ದಿಷ್ಟ ಅವಧಿಯಲ್ಲಿ ಉದ್ಯಾನದ ಅಭಿವೃದ್ಧಿಗೆ ಶ್ರಮಿಸಬೇಕಿತ್ತು. ಉದ್ಯಾನದಲ್ಲಿ ಗಿಡ ನೆಡುವುದು, ಕಸದ ಬುಟ್ಟಿಗಳನ್ನು ಇಡುವುದು ಹಾಗೂ ಆಸನ ಅಳವಡಿಸುವ ಕೆಲಸವನ್ನು ಮಾಡಬೇಕಿತ್ತು.

ಆರಂಭದಲ್ಲಿ ಒಬ್ಬರು ಇಬ್ಬರು ಮುಂದೆ ಬಂದಿದ್ದರು. ಬಳಿಕ ಅವರೂ ಸರಿಯಾಗಿ ಸ್ಪಂದಿಸಲಿಲ್ಲ. ಬಳಿಕ ಸಂಘ–ಸಂಸ್ಥೆಗಳು ಹಾಗೂ ಉದ್ಯಮಿಗಳ ಸಭೆ ಕರೆದು ಮನವಿ ಮಾಡಲಾಯಿತು. ಆದರೂ ಪ್ರಯೋಜನವಾಗಲಿಲ್ಲ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ಕಲಬುರಗಿ ನಗರ, ನಂದೂರು, ವಾಡಿ ಹಾಗೂ ಶಹಾಬಾದ್ ಸೇರಿ ಹಲವು ಕಡೆ ಕೈಗಾರಿಕೆಗಳಿವೆ. ಅಲ್ಲದೆ, ಜಿಲ್ಲೆಯಲ್ಲಿ ಹಲವು ಸಂಘ–ಸಂಸ್ಥೆಗಳಿವೆ. ಜನಪ್ರತಿನಿಧಿಗಳಿದ್ದಾರೆ. ಆದರೂ ಉದ್ಯಾನಗಳನ್ನು ದತ್ತು ತೆಗೆದುಕೊಳ್ಳಲು ಯಾರೂ ಮುಂದೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT