ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಹೋರಾಟಕ್ಕೆ ಸಿದ್ಧರಾಗಿ: ಸುಣಗಾರ

Last Updated 6 ಸೆಪ್ಟೆಂಬರ್ 2020, 15:49 IST
ಅಕ್ಷರ ಗಾತ್ರ

ಕಲಬುರ್ಗಿ: ತಳವಾರ, ಪರಿವಾರ ಸಮುದಾಯಗಳಿಗೆ ನ್ಯಾಯ ಸಿಗುವವರೆಗೆ ಈ ಹೋರಾಟ ಹೀಗೆ ಶಾಂತಿಯುತವಾಗಿ ನಡೆಯಲಿ, ಒಂದು ವೇಳೆ ನ್ಯಾಯ ಸಿಗದಿದ್ದರೆ ಕ್ರಾಂತಿಕಾರಿ ಮಾರ್ಗದಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಬೇಕು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ 10ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಭಾನುವಾರ ಬೆಂಬಲಿಸಿ ಯುವ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮಗೆ ಕೊಟ್ಟಂತ ಸೌಲಭ್ಯವನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಕಿತ್ತುಕೊಂಡು ನಮಗೆ ವಂಚಿಸುತ್ತಿದೆ ಎಂದು ಟೀಕಿಸಿದರು.

2014ರಲ್ಲಿ ರಾಜ್ಯ ಸರಕಾರ ಕಳುಸಿ ಕೊಟ್ಟಂತೆ 88ಎಚ್‌ ನಲ್ಲಿರುವ ತಳವಾರ, ತಳವಾರ ಬೋಯಾವನ್ನು ಕೇಂದ್ರ ಸರ್ಕಾರ ಯಥಾವತ್ತಾಗಿ ರಾಷ್ಟ್ರಪತಿಯವರ ಅಂಕಿತದೊಂದಿಗೆ ಜಾರಿಮಾಡಿದೆ. ಆದರೆ ಇಲ್ಲಿ ರಾಜ್ಯ ಸರ್ಕಾರ ಇನ್ಯಾರದೋ ಹಿತ ಕಾಪಾಡುವುದಕ್ಕಾಗಿ ನಮ್ಮನ್ನು ತುಳಿಯುತ್ತಿದೆ. ಸರ್ಕಾರದ ಈ ನಡೆಯಿಂದ ತಳವಾರ, ಪರಿವಾರ ಸಮುದಾಯಗಳಿಗೆ ಸಾಂವಿಧಾನಿಕ ಅನ್ಯಾಯವಾಗುತ್ತಿದೆ. ನಮಗಾದ ಅನ್ಯಾಯವನ್ನು ಖಂಡಿಸಿ ಸಾಮಾಜಿಕ ನ್ಯಾಯದಡಿಯಲ್ಲಿ ನಮ್ಮ ಹಕ್ಕಿಗಾಗಿ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಜಿಲ್ಲಾ ಆಡಳಿತ ನಮ್ಮ ಶಾಂತಿಯುತ ಧರಣಿ ಸತ್ಯಾಗ್ರಹ ಹಿಂಪಡೆಯುವಂತೆ ಒತ್ತಡ ಹೇರುತ್ತಿದೆ. ಹೋರಾಟ ನಿರತರ ಮೇಲೆ ಕೋವಿಡ್–19 ವಿಪತ್ತು ನಿರ್ವಹಣೆ ಅಡಿಯಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಭಯ ಹಾಕುತ್ತಿದೆ. ನಮಗೆ ನ್ಯಾಯ ಸಿಗುವವರೆಗೆ ಸತ್ಯಾಗ್ರಹದಿಂದ ಹಿಂದಕ್ಕೆ ಸರಿಯುವ ಮಾತೇ ಇಲ್ಲ. ಒತ್ತಾಯದ ಮೇರೆಗೆ ಏನಾದರೂ ಎಬ್ಬಿಸುವ ಪ್ರಯತ್ನ ನಡೆದರೆ ರಾಜ್ಯದ ತುಂಬಾ ಹೋರಾಟ ಭುಗಿಲೇಳಲಿವೆ’ ಎಂದರು.

ಸೇವಾ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶರಣಪ್ಪ ಕಣಮೇಶ್ವರ, ಸುರೇಶಗೌಡ ಪಾಟೀಲ್, ಭೀಮಣ್ಣ ಕೌವಲಗಿ, ಧರ್ಮರಾಜ ವಾಲೀಕಾರ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಯಲ್ಲಪ್ಪ ನಾಯ್ಕೋಡಿ, ದೇವರ ಹಿಪ್ಪರಗಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ, ಆಕಾಶ ಬೂದಿಹಾಳ, ಇರಗಂಟೆಪ್ಪ, ರತ್ನಾಬಾಯಿ ಸಿದ್ದಣ್ಣ, ಸುನೀತಾ ಎಂ.ತಳವಾರ, ಮಲ್ಲಿಕಾರ್ಜುನ ಮುಕ್ಕಾ, ಯಮನಪ್ಪ ತಡಕಲ್, ಅಳ್ಳೆಪ್ಪ ನಾಟಿಕಾರ್, ರಮೇಶ್ ನಾಟಿಕರ್, ಡಾ.ಸರ್ದಾರ ರಾಯಪ್ಪ, ರಾಜೇಂದ್ರ ರಾಜವಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT