ಪ್ರಕರಣ ಸುಖಾಂತ್ಯ: ‘ಅಮ್ಮ’ನ ಸುಪರ್ದಿಯಲ್ಲಿ ಬಾಲಕಿ

7
ಜಯಶ್ರೀ ಗುತ್ತೇದಾರ ಮನೆಯಲ್ಲಿ ಸಂಭ್ರಮ

ಪ್ರಕರಣ ಸುಖಾಂತ್ಯ: ‘ಅಮ್ಮ’ನ ಸುಪರ್ದಿಯಲ್ಲಿ ಬಾಲಕಿ

Published:
Updated:

ಕಲಬುರ್ಗಿ: ಪೊದೆಯಲ್ಲಿ ಸಿಕ್ಕಿದ್ದ ಹಸುಗೂಸನ್ನು ಸ್ವಂತ ಮಗಳಂತೆ ಏಳು ವರ್ಷಗಳಿಂದ ಬೆಳೆಸುತ್ತಿರುವ ಇಲ್ಲಿಯ ಗುಬ್ಬಿ ಕಾಲೊನಿಯ ಜಗನ್ನಾಥ–ಜಯಶ್ರೀ ಗುತ್ತೇದಾರ ದಂಪತಿಯ ಸಂಕಷ್ಟ ದೂರವಾಗಿದೆ.

‘ಅನಾಥ ಮಗುವನ್ನು ಅನಧಿಕೃತವಾಗಿ ಸಾಕುತ್ತಿದ್ದಾರೆ’ ಎಂಬ ದೂರು ಮಕ್ಕಳ ಸಹಾಯವಾಣಿ (1098)ಗೆ ಬಂದಿತ್ತು. ಆದರ ಆಧಾರದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಮಗುವನ್ನು ತಮ್ಮ ಸುಪರ್ದಿಗೆ ನೀಡಬೇಕು ಮತ್ತು ಅದನ್ನು ಬಾಲ ಮಂದಿರಕ್ಕೆ ಕಳಿಸುವುದಾಗಿ ಈ ದಂಪತಿ ಮೇಲೆ ಒತ್ತಡ ಹೇರುತ್ತಿದ್ದರು. ಎರಡು ತಿಂಗಳಿನಿಂದ ಈ ವಿವಾದ ಉಂಟಾಗಿತ್ತು.

ಅಕ್ಟೋಬರ್‌ 1ರಂದು ಜಯಶ್ರೀ ಅವರು ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಭೇಟಿಯಾಗಿ ನೆರವು ಕೋರಿದ್ದರು.

ನಾಲ್ಕು ತಿಂಗಳು ಸುಪರ್ದಿಗೆ: ‘ದತ್ತು ಪ್ರಕ್ರಿಯೆ ಕಾಯ್ದಿರಿಸಿ, ಈ ಮಗುವನ್ನು ನಾಲ್ಕು ತಿಂಗಳ ಮಟ್ಟಿಗೆ ಜಯಶ್ರೀ ಗುತ್ತೇದಾರ ಅವರ ಸುಪರ್ದಿಗೆ ನೀಡುವ ನಿರ್ಣಯವನ್ನು ಬುಧವಾರ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹೀಗಾಗಿ ವಿವಾದ ಸದ್ಯ ಇತ್ಯರ್ಥಗೊಂಡಿದೆ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದರು.

ಹಬ್ಬದ ಸಂಭ್ರಮ: ‘ಮಕ್ಕಳ ಕಲ್ಯಾಣ ಸಮಿತಿಯು ಈ ಮಗುವನ್ನು ನಮ್ಮ ಸುಪರ್ದಿಗೆ ನೀಡಿರುವುದರಿಂದ ನಮ್ಮ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಗುರುವಾರ ನಾವು ಆಕೆಯ ಜನ್ಮದಿನವನ್ನೂ ಆಚರಿಸಿದೆವು’ ಎಂದು ಜಯಶ್ರೀ ಗುತ್ತೇದಾರ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. 

‘ನಾವು ಈ ಮಗುವನ್ನು ಸ್ವಂತ ಮಗಳಂತೆ ಸಾಕುತ್ತಿದ್ದೇವೆ. ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಪ್ರವೇಶ ಕೊಡಿಸಿದ್ದೇವೆ. ಆಕೆ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಏಳು ವರ್ಷಗಳ ನಂತರ ಮಕ್ಕಳ ಸಹಾಯವಾಣಿ (1098)ಗೆ ಯಾರು ದೂರು ನೀಡಿದರು ಎಂಬುದೇ ನಮಗೆ ಅಚ್ಚರಿ ತಂದಿದೆ’ ಎಂದರು.

ಹಳೆಯ ಆರ್‌ಟಿಒ ಕಚೇರಿಯ ಆರ್ಯ ಈಡಿಗ ಸಂಘದ ಹಾಸ್ಟೆಲ್‌ ಹಿಂಭಾಗದ ಪೊದೆಯಲ್ಲಿ ಏಳು ವರ್ಗಳ ಹಿಂದೆ (ಅಕ್ಟೋಬರ್‌ 8, 2012ರಂದು) ಈ ಮಗುವನ್ನು ಎಸೆಯಲಾಗಿತ್ತು. ಮೈಗೆ ಇರುವೆ ಮುತ್ತಿಕೊಂಡಿದ್ದವು. ಆ ಮಗುವನ್ನು ಎತ್ತಿಕೊಂಡು ಮನೆಗೊಯ್ದಿದ್ದ ಮೂವರು ಮಕ್ಕಳ ತಾಯಿ ಜಯಶ್ರೀ, ಆ ಮಗುವನ್ನೂ ಸ್ವಂತ ಮಗಳಂತೆ ಸಾಕುತ್ತಿದ್ದಾರೆ.

ಜಯಶ್ರೀ ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾರೆ. ಜಯಶ್ರೀ ಅವರ ಪತಿ ಜಗನ್ನಾಥ ವ್ಯವಹಾರ ಮಾಡಿಕೊಂಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !