ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ದ್ರಾಕ್ಷಿ: ಗುಮಗೇರಾ ರೈತನ ನೇರ ಮಾರಾಟ

Published 27 ಫೆಬ್ರುವರಿ 2024, 14:47 IST
Last Updated 27 ಫೆಬ್ರುವರಿ 2024, 14:47 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಗುಮಗೇರಾ ಗ್ರಾಮದ ಮಹಾಂತಗೌಡ ಪೊಲೀಸ್‌ ಪಾಟೀಲ ಎಂಬ ರೈತ ಮದ್ಯವರ್ತಿಗಳ ಹಾವಳಿ, ಮಾರುಕಟ್ಟೆ ವ್ಯವಸ್ಥೆಗೆ ಬೇಸತ್ತು ತಮ್ಮ ತೋಟದಲ್ಲಿ ಬೆಳೆದ ದ್ರಾಕ್ಷಿ ಹಣ್ಣನ್ನು ಸ್ವತಃ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಮೂಲಕ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಎರಡು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಉತ್ತಮ ಫಸಲು ಬಂದಿದೆ. ಔಷಧ ಇತರೆ ವೆಚ್ಚ ಸೇರಿ ಈ ವರ್ಷ ₹ 1 ಲಕ್ಷ ಖರ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತೀರಾ ಕಡಿಮೆ ದರಕ್ಕೆ ಕೇಳುತ್ತಿದ್ದು, ಅವರಿಗೆ ಕೊಟ್ಟರೆ ಬಹಳಷ್ಟು ಹಾನಿಯಾಗುತ್ತದೆ. ಹಣ್ಣು ಬೆಳೆಯಲು ಮಾಡಿದ ಖರ್ಚು ಮರಳುವುದಿಲ್ಲ ಎಂಬ ಚಿಂತೆ ಮೂಡಿತ್ತು. ಆಗ ಅವರಿಗೆ ಹೊಳೆದದ್ದು, ಗ್ರಾಹಕರೊಂದಿಗೆ ನೇರ ಮಾರಾಟ ವ್ಯವಸ್ಥೆ ಕಲ್ಪಿಸಿಕೊಳ್ಳುವ ಆಲೋಚನೆ.

ಮಾರುಕಟ್ಟೆಯಲ್ಲಿ ರೈತರು ಬೆಳೆದ ದ್ರಾಕ್ಷಿಗೆ ಸಗಟು ವ್ಯಾಪಾರಿಗಳು ಕೇವಲ ಕೆ.ಜಿಗೆ ₹ 25 ದರ ನೀಡುವುದಾಗಿ ಹೇಳುತ್ತಾರೆ. ಆದರೆ ತಾವು ಮಾತ್ರ ಗ್ರಾಹಕರಿಗೆ ಕೆ.ಜಿಗೆ ₹ 60-70 ರಂತೆ ಮಾರಾಟ ಮಾಡುತ್ತಾರೆ. ಆದರೆ ರೈತ ಮಹಾಂತಗೌಡ ಅವರು, ತಾವು ನೇರವಾಗಿ ಗ್ರಾಹಕರಿಗೆ ಕೇಜಿಗೆ ₹ 40ರ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ದರದಲ್ಲಿ ಸಿಹಿ ದ್ರಾಕ್ಷಿ ಕೈಗೆಟುಕುತ್ತಿರುವುದರಿಂದ ಗ್ರಾಹಕರು ಮುಗಿಬಿದ್ದು ಖರೀದಿಸಿದರು.

ಮಾರಾಟಕ್ಕೆ ಪತ್ನಿ ಶರಣಮ್ಮ, ಪುತ್ರ ಗಣೇಶ ಸಾಥ್‌ ನೀಡುತ್ತಿದ್ದಾರೆ. ತಮ್ಮದೇ ಟ್ರ್ಯಾಕ್ಟರ್‌ನಲ್ಲಿ ದ್ರಾಕ್ಷಿಹಣ್ಣಿನ ಬುಟ್ಟಿಗಳನ್ನು ಇಟ್ಟುಕೊಂಡು ನಿತ್ಯ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 3 ಕ್ವಿಂಟಲ್‌ ಹಣ್ಣು ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಶಿಕ್ಷಕ ವೃತ್ತಿಯಲ್ಲಿರುವ ಇನ್ನೊಬ್ಬ ಪುತ್ರ ಶಿವರಾಜ ಸಹ ಕೀಳರಿಮೆ ಇಲ್ಲದೆ ಬಿಡುವಿನ ಅವಧಿಯಲ್ಲಿ ತಂದೆ–ತಾಯಿಯೊಂದಿಗೆ ತಾವೂ ದ್ರಾಕ್ಷಿ ಮಾರಾಟಕ್ಕೆ ಸಹಕರಿಸುತ್ತಿದ್ದಾರೆ.

ಮಧ್ಯವರ್ತಿಗಳಿಲ್ಲದೆ ರೈತ ನೇರವಾಗಿ ಗ್ರಾಹಕರಿಗೆ ದ್ರಾಕ್ಷಿ ಮಾರಾಟ ಮಾಡುತ್ತಿರುವುದು ಕಡಿಮೆ ದರದಲ್ಲಿ ಹಣ್ಣು ದೊರೆಯುತ್ತಿದೆ. ರೈತನಿಗೂ ನಷ್ಟ ಇಲ್ಲ, ನಮ್ಮ ಜೇಬಿಗೂ ಹೊರೆಯಾಗುವುದಿಲ್ಲ ಎಂದು ಗ್ರಾಹಕ ಗುರಪ್ಪ ಬಡಿಗೇರ, ಹನುಮಗೌಡ ನೆರೆಬೆಂಚಿ ಇತರರು ಖುಷಿ ಹಂಚಿಕೊಂಡರು. (ರೈತ ಮಹಾಂತಗೌಡ: 8722284904).

ಕುಷ್ಟಗಿ ತಾಲ್ಲೂಕು ಗುಮಗೇರಾದ ರೈತ ಮಹಾಂತಗೌಡ ಅವರು ತಮ್ಮ ತೋಟದಲ್ಲಿ ದ್ರಾಕ್ಷಿ ಹಣ್ಣನ್ನು ಮಾರುಕಟ್ಟೆಗೆ ತಂದು ನೇರ ಮಾರಾಟ ಮಾಡಿದರು
ಕುಷ್ಟಗಿ ತಾಲ್ಲೂಕು ಗುಮಗೇರಾದ ರೈತ ಮಹಾಂತಗೌಡ ಅವರು ತಮ್ಮ ತೋಟದಲ್ಲಿ ದ್ರಾಕ್ಷಿ ಹಣ್ಣನ್ನು ಮಾರುಕಟ್ಟೆಗೆ ತಂದು ನೇರ ಮಾರಾಟ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT