ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲೇ ಮೊಳಕೆಯೊಡೆದ ಹೆಸರು

ಚಿಂಚೋಳಿ: ಹೆಸರು ರಾಶಿಗೆ ನಿರಂತರ ಸುರಿಯುತ್ತಿರುವ ಮಳೆ ಅಡ್ಡಿ
Last Updated 19 ಆಗಸ್ಟ್ 2020, 4:55 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ಹೆಸರು ಬೆಳೆಗಾರರು ಮಳೆರಾಯನ ಕಾಟದಿಂದ ನಲುಗಿ ಹೋಗಿದ್ದಾರೆ.

ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೇಸಾಯ ನಡೆಸಲಾಗಿದೆ. ಹುಲುಸಾಗಿ ಬೆಳೆದ ಬೆಳೆಯನ್ನು ರೋಗ ರುಜಿನ ಹಾಗೂ ಕೀಟಬಾಧೆಗಳಿಂದ ರೈತರು ರಕ್ಷಿಸಿಕೊಂಡ ನಂತರ ಇದೀಗ ಕೊಯ್ಲಿಗೆ ಬಂದಿದೆ. ಆದರೆ ರಾಶಿ ಮಾಡಲು ಹವಾಮಾನ ವೈಪರಿತ್ಯ ಕಾಡುತ್ತಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುವುದೋ ಇಲ್ಲವೋ ಎಂಬ ಆತಂಕ ರೈತರು ಮನದಲ್ಲಿ ಮನೆ ಮಾಡಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಹೆಸರು ಗಿಡದಲ್ಲಿ ಕಾಯಿಗಳು ಮೊಳಕೆಯೊಡೆಯುತ್ತಿರುವು ದನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಕುಂಚಾವರಂದಲ್ಲಿ ಆ.10ರಿಂದ 17ವರೆಗೆ ಒಂದುವಾರದಲ್ಲಿ 200 ಮಿ.ಮೀ ಮಳೆ ಸುರಿದಿದೆ. ಚಿಂಚೋಳಿಯಲ್ಲಿ 110 ಮಿ.ಮೀ, ನಿಡಗುಂದಾ 89 ಮಿ.ಮೀ, ಚಿಮ್ಮನಚೋಡ 66 ಮಿ.ಮೀ, ಐನಾಪುರ 127.2 ಮಿ.ಮೀ ಸುಲೇಪೇಟ 90.2 ಮಿ.ಮೀ ಮಳೆಯಾಗಿದೆ.

‘ಅತ್ಯಂತ ಸೂಕ್ಷ್ಮ ಬೆಳೆಯಾದ ಹೆಸರು ಬೆಳೆ ಒಣಗಿ ನಿಂತಿದೆ. ಅಧಿಕ ತೇವಾಂಶ ಹಾಗೂ ಮಳೆ ಸಹಿಸದ ಈ ಬೆಳೆ ರೈತರ ಕೈಗೆಟುಕಲು ಒಂದು ವಾರ ಮಳೆ ಬಿಡುವು ನೀಡಿದರೆ ಉತ್ತಮ’ ಎನ್ನುತ್ತಾರೆ ರಾಯಕೋಡ ಗ್ರಾಮದ ರೈತ ಚಂದ್ರು ಮೈಲ್ವಾರ.

‘ನಾಗರಾಳ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಉಂಟಾದ ಹಾನಿಯ ಕುರಿತು ಈಗಾಗಲೇ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು ವರದಿ ಸಲ್ಲಿಸಲಾಗುತ್ತಿದೆ. ಆದರೆ ಅತಿವೃಷ್ಟಿಯಿಂದ ಹಾಳಾದ ಬೆಳೆಯ ಜಂಟಿ ಸಮೀಕ್ಷೆ ಇನ್ನಷ್ಟೇ ಆರಂಭವಾಗಬೇಕಿದೆ’ ಎಂದು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ತಿಳಿಸಿದರು.

‘ಸೋಯಾ ಬೀಜದ ಕುರಿತು ಸರ್ಕಾರ ಇಲ್ಲಸಲ್ಲದ ಭಯ ಹುಟ್ಟಿಸಿ ರೈತರಿಗೆ ಬೀಜ ಸಿಗದಂತೆ ಮಾಡಿದ್ದರಿಂದ ರೈತರು ಹೆಸರು ಬಿತ್ತನೆ ನಡೆಸಿದ್ದಾರೆ. ಈಗ ಬೆಳೆ ಮಳೆಗೆ ಆಹುತಿಯಾಗಿದೆ. ಒಂದು ವೇಳೆ ಸೋಯಾ ಬೀಜ ರೈತರ ಅಗತ್ಯಕ್ಕೆ ತಕ್ಕಂತೆ ಪೂರೈಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ ಆಡಳಿತಾತ್ಮಕವಾಗಿ ಎಡವಿದೆ’ ಎನ್ನುತ್ತಾರೆ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT