ಶುಕ್ರವಾರ, ಜೂನ್ 18, 2021
22 °C
ಚಿನ್ನದ ಪದಕ ಪಡೆದವರಿಗಷ್ಟೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ

ಅಕ್ಟೋಬರ್‌ನಲ್ಲಿ ಗುವಿವಿ ಘಟಿಕೋತ್ಸವ?

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸೆಪ್ಟೆಂಬರ್ 3ರಿಂದ 20ರವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು, ಅಕ್ಟೋಬರ್‌ ಮೊದಲ ವಾರದಲ್ಲಿ ಘಟಿಕೋತ್ಸವ ಆಯೋಜಿಸಲು ವಿ.ವಿ. ನಿರ್ಧರಿಸುವ ನಿರೀಕ್ಷೆ ಇದೆ.

ಈ ಸಂಬಂಧ ಇದೇ 28ರಂದು ಸಿಂಡಿಕೇಟ್‌ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಮತ್ತು ಉಳಿದ ವಿದ್ಯಾರ್ಥಿಗಳು ವರ್ಚ್ಯುವಲ್ (ಆನ್‌ಲೈನ್) ವಿಧಾನದ ಮೂಲಕ ಭಾಗವಹಿಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ.

‘ಪರೀಕ್ಷೆಗಳನ್ನು ಸುಸೂತ್ರವಾಗಿ ಮತ್ತು ದೈಹಿಕ ಅಂತರ ಕಾಯ್ದುಕೊಂಡು ನಡೆಸುವುದಕ್ಕೆ ಮೊದಲ ಆದ್ಯತೆ ನೀಡಲಿದ್ದೇವೆ’ ಎಂದು ಗುಲಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ತಿಳಿಸಿದರು.

‘ರಾಜ್ಯ ಸರ್ಕಾರ ಲಾಕ್‌ಡೌನ್‌ ತೆರವುಗೊಳಿಸಿ ವ್ಯಾಪಾರ ವಹಿವಾಟು, ಜನ ಸಂಚಾರಕ್ಕೆ ಅವಕಾಶ ನೀಡಿದ್ದರೂ ಶಾಲಾ, ಕಾಲೇಜುಗಳ ಆರಂಭಕ್ಕೆ ಇನ್ನೂ ಅನುಮತಿ ನೀಡಿಲ್ಲ. ಲಾಕ್‌ಡೌನ್‌ ತೆರವುಗೊಂಡಿದ್ದರಿಂದ ಹೆಚ್ಚು ಜನರ ಓಡಾಟದಿಂದಾಗಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಸಾವಿನ ಪ್ರಮಾಣದಲ್ಲಿಯೂ ಏರಿಕೆಯಾಗುತ್ತಿದೆ. ಇದರಿಂದ ಘಟಿಕೋತ್ಸವದ ಸಂದರ್ಭ
ದಲ್ಲಿ ಹೆಚ್ಚು ಜನರನ್ನು ಸೇರಿಸದಿರಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಸೆಪ್ಟೆಂಬರ್‌ ಕೊನೆಯ ಹೊತ್ತಿಗೆ ಸೋಂಕಿನ ಪ್ರಮಾಣ ಕಡಿಮೆಯಾದರೆ ಎಂದಿನಂತೆ ವಿದ್ಯಾರ್ಥಿಗಳನ್ನು ಭೌತಿಕವಾಗಿ ಒಂದೆಡೆ ಸೇರಿಸಿ ಪದವಿ ಪ್ರಮಾಣವನ್ನು ಹಂಚಿಕೆ ಮಾಡುವ ಯೋಜನೆಯೂ ಇದೆ’ ಎಂದು ಮಾಹಿತಿ ನೀಡಿದರು.

ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಕುಲಪತಿಗಳ ನೇಮಕ ಇನ್ನೂ ಆಗಿಲ್ಲ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಕಾಲೇಜುಗಳು ರಾಯಚೂರು ವಿ.ವಿ.ಯೊಂದಿಗೆ ಸಂಯೋಜನೆ ಹೊಂದಲಿವೆ. ಸಿಬ್ಬಂದಿ, ಆಸ್ತಿ ವರ್ಗಾವಣೆಯೂ ಆಗಲಿದೆ. ಆದರೆ, ಪ್ರಸಕ್ತ ವರ್ಷದಲ್ಲಿ ಈ ಎರಡೂ ಜಿಲ್ಲೆಗಳು ಸೇರಿದಂತೆ ಬೀದರ್‌ ಹಾಗೂ ಕಲಬುರ್ಗಿ ಜಿಲ್ಲೆಯ ವಿದ್ಯಾರ್ಥಿಗಳು ಗುಲಬರ್ಗಾ ವಿ.ವಿ. ಅಧೀನದಲ್ಲೇ ಪರೀಕ್ಷೆ ಬರೆಯುವರು. ಇದಕ್ಕಾಗಿ ಪ್ರಾಥಮಿಕ ಸಿದ್ಧತೆ ಆರಂಭಿಸಿರುವ ವಿಶ್ವವಿದ್ಯಾಲಯದ ಪರೀಕ್ಷಾಂಗವು ಕಾಲೇಜುಗಳ ದೊಡ್ಡ ಸಭಾಂಗಣಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಪರೀಕ್ಷೆ ನಡೆಸಲಿದೆ.

‘ಆನ್‌ಲೈನ್‌ ಮೂಲಕ ಪಠ್ಯ ಪೂರೈಸುವ ಪ್ರಯೋಗ ಅಷ್ಟೊಂದು ಯಶಸ್ವಿಯಾಗಿಲ್ಲ. ಹೀಗಾಗಿ, ಸ್ನಾತಕೋತ್ತರ ಪರೀಕ್ಷೆಯ ದಿನಾಂಕ ಪ್ರಕಟವಾದ ಕೂಡಲೇ ಅದಕ್ಕೂ ಮೊದಲು ಒಂದು ವಾರ ತರಗತಿ ನಡೆಸುತ್ತೇವೆ’ ಎಂದು ಗುಲಬರ್ಗಾ ವಿ.ವಿ.ಯ ಹಿರಿಯ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು