ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಅನಾಥ ಸ್ಥಿತಿಯಲ್ಲಿ ಜಿಲ್ಲಾ ಗುರುಭವನ

ದೂಳು ಮೆತ್ತಿಕೊಂಡು ನಿಂತ ಕಟ್ಟಡ, ಕಸದ ತೊಟ್ಟಿಯಾದ ಆವರಣ: ಜೀರ್ಣೋದ್ಧಾರಕ್ಕೆ ಅಡ್ಡಿಯಾದ ನಿವೇಶನ ದಾಖಲೆ
Published 18 ಮೇ 2023, 1:20 IST
Last Updated 18 ಮೇ 2023, 1:20 IST
ಅಕ್ಷರ ಗಾತ್ರ

ಕಲಬುರಗಿ: ಕಂದಾಯ ವಿಭಾಗ ಕೇಂದ್ರವಾದ ಕಲಬುರಗಿಯಲ್ಲಿರುವ ಜಿಲ್ಲಾ ಗುರುಭವನ ಪಾಳುಬಿದ್ದ ಕಾರಣ ಶಿಕ್ಷಕರು ಬಾಡಿಗೆ ಪಾವತಿಸಿ ಸಭೆ–ಸಮಾರಂಭ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ 9,000ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ 5,000 ಪ್ರೌಢಶಾಲಾ ಶಿಕ್ಷಕರಿದ್ದಾರೆ.

ಹಲವು ವರ್ಷಗಳ ಹಿಂದೆ ನಗರದ ಹೃದಯ ಭಾಗವಾದ ಎಸ್‌ಟಿಬಿಟಿ ಕ್ರಾಸ್ ಬಳಿಯ ವಿಶಾಲವಾದ ಸರ್ಕಾರಿ ಜಾಗದಲ್ಲಿ ಜಿಲ್ಲಾ ಗುರುಭವನ ಕಟ್ಟಡ ನಿರ್ಮಿಸಲಾಗಿತ್ತು. ಆ ಕಟ್ಟಡ ಈಗ ಪಾಳು ಬಿದ್ದಿದೆ. ರೂಪ ಕಳೆದುಕೊಂಡು ನಿಂತಿದೆ.

ಕಟ್ಟಡದಲ್ಲಿ ಕಾರ್ಯಕ್ರಮಗಳನ್ನು ಮಾಡಲು ವಿಶಾಲವಾದ ಸಭಾಂಗಣ ಹಾಗೂ ವೇದಿಕೆ ನಿರ್ಮಿಸಲಾಗಿತ್ತು. ಹಲವು ವರ್ಷಗಳ ಹಿಂದೆ ಇಲ್ಲಿಯ ಗೋಡೆಗಳು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದವು. ಎಲ್ಲವೂ ಈಗ ಪಾಳು ಬಿದ್ದಿವೆ.

ಕಿಟಕಿಗಳು ಮುರಿದು ಹೋಗಿವೆ. ಕಿಡಿಗೇಡಿಗಳು ಕಿಟಕಿಯ ಸರಳು ಕಿತ್ತುಕೊಂಡು ಹೋಗಿದ್ದಾರೆ. ಇಡೀ ಕಟ್ಟಡ, ತ್ಯಾಜ್ಯಮಯವಾಗಿದೆ. ದೂಳು ಮೆತ್ತಿಕೊಂಡು ನಿಂತಿದೆ. ಆವರಣ ಹಾಗೂ ಕಟ್ಟಡದ ಸುತ್ತಮುತ್ತ ಗಿಡ–ಗಂಟಿಗಳು ದಟ್ಟವಾಗಿ ಬೆಳೆದಿವೆ. ಸುತ್ತಮುತ್ತಲಿನ ನಿವಾಸಿಗಳು ಇಲ್ಲಿಯೇ ಕಸ ಎಸೆದು ಬೆಂಕಿ ಹಾಕುತ್ತಾರೆ. ಆದ್ದರಿಂದ ಆವರಣ ಅಕ್ಷರಶಃ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.

ಸುತ್ತುಗೋಡೆ ಶಿಥಿಲಾವಸ್ಥೆಗೆ ತಲುಪಿದೆ. ಕಸದ ಆಕರ್ಷಣೆಗೆ ಹಂದಿಗಳು ಬರುತ್ತಿರುವುದರಿಂದ ಅವುಗಳ ಆವಾಸ ಸ್ಥಾನವಾಗಿದೆ. ಸುತ್ತಮುತ್ತಲಿನ ಕೆಲವರು ಇಲ್ಲಿಯೇ ಬಹಿರ್ದೆಸೆ ಮಾಡುತ್ತಾರೆ. ಜೀರ್ಣೋದ್ಧಾರ ಭಾಗ್ಯಕ್ಕಾಗಿ ಈ ಕಟ್ಟಡ ಕಾಯುತ್ತಿದೆ.

ಆಳಂದದಲ್ಲಿ ಸುಸಜ್ಜಿತ ಕಟ್ಟಡ: ಜಿಲ್ಲೆಯ ಆಳಂದದಲ್ಲಿ ಶಿಕ್ಷಕರ ಸಂಘದವರು ಶಿಕ್ಷಕರಿಂದ ವಂತಿಗೆ ಸಂಗ್ರಹಿಸಿ ಸುಸಜ್ಜಿತ ಭವನ ನಿರ್ಮಿಸಿದ್ದಾರೆ. ಉಳಿದ ಕಡೆ ಎಲ್ಲಿಯೂ ಗುರುಭವನಗಳಿಲ್ಲ. ಶಿಕ್ಷಕರು ವಿಧಿ ಇಲ್ಲದೆ ಬಾಡಿಗೆ ಪಾವತಿಸಿ ಸಭೆ ಸಮಾರಂಭಗಳನ್ನು ಮಾಡುತ್ತಾರೆ. ಇಲಾಖೆಯು ಸಹ ಬಾಡಿಗೆ ಪಾವತಿಸಿ ತರಬೇತಿ ಹಾಗೂ ಇತರ ಚಟುವಟಿಕೆಗಳನ್ನು ನಡೆಸುತ್ತಿದೆ.

ಅಲ್ಲದೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿ ಇಲ್ಲೇ ಇರುವುದರಿಂದ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಶಿಕ್ಷಕರು ಕೆಲಸದ ಮೇಲೆ ಇಲ್ಲಿಗೆ ಬರುತ್ತಾರೆ. ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ ಹಣ ಪಾವತಿಸಿ ಖಾಸಗಿ ವಸತಿ ಗೃಹಗಳಲ್ಲಿ ಉಳಿದುಕೊಳ್ಳುತ್ತಾರೆ.

ನಿವೇಶನದ ದಾಖಲೆ ಇಲ್ಲ!: ‘ಕಲಬುರಗಿಯಲ್ಲಿ ಸುಸಜ್ಜಿತ ಗುರುಭವನ ಇಲ್ಲ. ಸುಮಾರು 15 ವರ್ಷಗಳಿಂದ ಗುರು ಭವನ ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿದೆ. ಅದನ್ನು ಜೀರ್ಣೋದ್ಧಾರ ಮಾಡಬೇಕು ಎಂದುಕೊಂಡರೆ ಎಸ್‌ಟಿಬಿಟಿ ಬಳಿಯ ಕಟ್ಟಡದ ಸರ್ಕಾರಿ ನಿವೇಶನದ ದಾಖಲೆಗಳಿಲ್ಲ. ಇದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಸಂಘಗಳಿಗೂ ಆರ್ಥಿಕ ಹೊರೆಯಾಗುತ್ತಿದೆ’ ಎಂದು ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತರು ಹಾಗೂ ಶಿಕ್ಷಕರ ಸಂಘದವರು ಜಿಲ್ಲಾ ಗುರುಭವನ ಜೀರ್ಣೋದ್ಧಾರ ಮಾಡಬೇಕು ಎಂದು ಒತ್ತಾಯಿಸಿ ಹಲವು ಬಾರಿ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ, ಆದರೂ ಸ್ಪಂದಿಸಿಲ್ಲ. ಆದಷ್ಟು ಬೇಗ ಸುಸಜ್ಜಿತ ಜಿಲ್ಲಾ ಗುರುಭವನ ನಿರ್ಮಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

‘ಅತಿಥಿ ಗೃಹ ನಿರ್ಮಾಣ ಮಾಡಿ’: ‘ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಶಿಕ್ಷಕರಿಗೆ ವಸತಿ ಗೃಹಗಳಿಲ್ಲ. ಹೆಚ್ಚು ಬಾಡಿಗೆ ಪಾವತಿಸಿ ವಾಸಿಸ ಬೇಕಾದ ಸ್ಥಿತಿ ಇದೆ. ಸರ್ಕಾರ ಅತಿಥಿ ಗೃಹ ನಿರ್ಮಿಸಬೇಕು’ ಎಂದು ಶಿಕ್ಷಕರ ಸಂಘದವರು ಒತ್ತಾಯಿಸುತ್ತಾರೆ.

ಕಲಬುರಗಿ ನಗರದ ಎಸ್‌ಟಿಬಿಟಿ ಕ್ರಾಸ್ ಬಳಿ ನಿರ್ಮಿಸಲಾದ ಜಿಲ್ಲಾ ಗುರುಭವನ ಕಟ್ಟಡ ಪಾಳು ಬಿದ್ದಿರುವುದು
ಕಲಬುರಗಿ ನಗರದ ಎಸ್‌ಟಿಬಿಟಿ ಕ್ರಾಸ್ ಬಳಿ ನಿರ್ಮಿಸಲಾದ ಜಿಲ್ಲಾ ಗುರುಭವನ ಕಟ್ಟಡ ಪಾಳು ಬಿದ್ದಿರುವುದು

Highlights - null

Quote - ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲಿ ಸುಸಜ್ಜಿತವಾದ ಗುರುಭವನ ನಿರ್ಮಿಸುವ ಅಗತ್ಯ ಇದೆ. ಇದರಿಂದ ಶಿಕ್ಷಕರಿಗೆ ಅನುಕೂಲವಾಗಲಿದೆ. ನೂತನ ಸರ್ಕಾರ ಗುರುಭವನ ನಿರ್ಮಾಣಕ್ಕೆ ಮುಂದಾಗಬೇಕು ಮಲ್ಲಯ್ಯ ಗುತ್ತೇದಾರ ಜಿಲ್ಲಾ ಘಟಕದ ಅಧ್ಯಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

Quote - ಗುರುಭವನ ಸಮಿತಿಯ ಅಧ್ಯಕ್ಷರು ಆದಷ್ಟು ಬೇಗ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಕರೆದು ಜಿಲ್ಲಾ ಗುರುಭವನದ ಜೀರ್ಣೋದ್ಧಾರದ ಕುರಿತು ಚರ್ಚಿಸಬೇಕು. ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು ಮಹೇಶ ಹೂಗಾರ ಜಿಲ್ಲಾ ಘಟಕದ ಅಧ್ಯಕ್ಷ ಪ್ರೌಢಶಾಲಾ ಸಹ ಶಿಕ್ಷಕರ ಸಂಘ

Cut-off box - ಸರ್ಕಾರದಿಂದ ಅನುದಾನ ಶಿಕ್ಷಕರ ಸಭೆ–ಸಮಾರಂಭ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತರಬೇತಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಗುರುಭವನ ನಿರ್ಮಾಣಕ್ಕೆ ಕಟ್ಟಡದ ವಿಸ್ತೀರ್ಣ ಆಧರಿಸಿ ₹12 ರಿಂದ 30 ಲಕ್ಷದವರೆಗೂ ಅನುದಾನ ನೀಡುತ್ತದೆ. ಅದರಂತೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಭವನ ನಿರ್ಮಿಸುತ್ತದೆ. ಕೆಲ ಕಡೆ ಶಿಕ್ಷಕರ ಸಂಘದವರೇ ವಂತಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸಿಕೊಳ್ಳುತ್ತಾರೆ. ಗುರು ಭವನ ಸಮಿತಿಗೆ ಇಲಾಖೆಯ ಉಪನಿರ್ದೇಶಕರೇ ಅಧ್ಯಕ್ಷರಾಗಿರುತ್ತಾರೆ. ಕೆಲ ಕಡೆ ಶಿಕ್ಷಕರ ಸಂಘದವರೇ ಭವನದ ನಿರ್ವಹಣೆ ನೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT