ಭಾನುವಾರ, ಸೆಪ್ಟೆಂಬರ್ 26, 2021
23 °C
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಗುರುವಂದನಾ ಕಾರ್ಯಕ್ರಮ

ಭಾರತದ ಗುರು ಪರಂಪರೆ ವಿಶ್ವಕ್ಕೆ ಮಾದರಿ: ಕೃಷ್ಣ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಗುರು ಪರಂಪರೆಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾದದ್ದು. ಆಶಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿವಸವನ್ನು ಗುರುಪೌರ್ಣಿಮೆ ಎಂದು ಆಚರಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ಇದೆ. ಮಹರ್ಷಿ ವೇದವ್ಯಾಸರೇ ಈ ಗುರುಪರಂಪರೆಗೆ ಗಟ್ಟಿ ಬುನಾದಿ ಹಾಕಿದ್ದಾರೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಬೌದ್ಧಿಕ ಪ್ರಮುಖ ಕೃಷ್ಣ ಜೋಶಿ ಹೇಳಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ನಗರದ ಆರ್.ಜೆ. ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದ ಗುರು– ಶಿಷ್ಯರ ಪರಂಪಲ್ಲಿ ಎರಡು ಗುಂಪುಗಳಿವೆ. ಗುರುಗಳು ಹೇಳಿರುವುದನ್ನು ಯೋಚಿಸದೇ ತಕ್ಷಣ ಕಾರ್ಯಪ್ರವೃತ್ತರಾಗುವ ಶಿಷ್ಯರ ಒಂದು ಗುಂಪು. ಗುರುಗಳನ್ನು ಪರೀಕ್ಷಿಸಿ ಶಿಷ್ಯರಾಗುವುದು ಇನ್ನೊಂದು ಗುಂಪು. ಸ್ವಾಮಿ ವಿವೇಕಾನಂದರು ರಾಮಕೃಷ್ಣ ಅವರನ್ನು ಪರೀಕ್ಷಿಸಿ ಗುರುಗಳಾಗಿ ಸ್ವೀಕರಿಸಿದರು. ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂದ ಹೆಚ್ಚು ಶಕ್ತಿ ಗುರುವಿಗೆ ಇದೆ. ಇದನ್ನು ಅರಿತೇ ಹರ ಮುನಿದರೆ ಗುರು ಕಾಯುವನು ಎಂಬ ಗಾದೆ ಮಾಡಿದ್ದಾರೆ’ ಎಂದರು.

‘ಜಾತಿಯಿಂದ ಯಾರೂ ದೊಡ್ಡವರಲ್ಲ; ಕೃತಿಯಿಂದ ದೊಡ್ಡವರು. ಅದಕ್ಕಾಗಿ ಅಂಬೇಡ್ಕರ್ ಸಂವಿಧಾನ ರಚಿಸಿದರು, ವ್ಯಾಸರು ಮಹಾಭಾರತ ಬರೆದರು, ವಾಲ್ಮೀಕಿ ರಾಮಾಯಣ ಬರೆದರು. ಇವರೆಲ್ಲ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡವರು’ ಎಂದೂ ಹೇಳಿದರು.

‘ಗುರು ತನ್ನಿಂದ ಸಾಧ್ಯವಾಗದ ಕೆಲಸವನ್ನು ಶಿಷ್ಯರಿಂದ ಮಾಡಿಸುತ್ತಾನೆ. ಉದಾಹರಣೆಗೆ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಿಂದ ವಿಶ್ವವನ್ನೇ ಗೆದ್ದು ಜಗತ್ತಿನಲ್ಲಿ ಭಾರತವನ್ನು ಧ್ರುವತಾರೆ ಮಾಡಿದರು’ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಹೆಚ್ಚುವರಿ ಆಯುಕ್ತರ ಕಾರ್ಯಾಲಯದ ಹಿರಿಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮುಧೋಳ ಮಾತನಾಡಿ, ‘ಶಿಕ್ಷಕ ಮತ್ತು ಗುರು ಈ ಎರಡೂ ಪದಗಳ ಮಧ್ಯೆ ಇರುವ ವ್ಯತ್ಯಾಸವರಿಯಬೇಕು. ಮೊದಲು ಗುರುಗಳಾಗಿ ಅನಂತರ ಶಿಕ್ಷಕರಾಗುವವರು ಜಗತ್ತನ್ನೇ ಬದಲಾಯಿಸುವ ಶಕ್ತಿ ಹೊಂದುತ್ತಾರೆ. ಇಂತ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಕರಾದ ನಾವು ನಮಗಾಗಿ ಅಲ್ಲದೆ ನಮ್ಮನ್ನು ಬೆಳೆಸಿದ ಸಮಾಜ, ದೇಶವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊರಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬುರ್ಲಿ ಪ್ರಹ್ಲಾದ ಮಾತನಾಡಿದರು. ಸಂಘದ ವಿಭಾಗ ಪ್ರಮುಖ ಮಹೇಶ ಬಸರಕೋಡ ಪ್ರಸ್ತಾವಿಕವಾಗಿ ಮಾತನಾಡಿ, ‘ಮಾಧ್ಯಮಿಕ ಶಿಕ್ಷಕ ಸಂಘದ ಸುಮಾರು ಐವತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದು ಶಿಕ್ಷಕರ ಸಮಸ್ಯೆಗಳ ಕುರಿತು ಕೇವಲ ಹೋರಾಟವನ್ನು ರೂಪಿಸುವುದಷ್ಟೇ ಸಾಲದು; ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನೂ ಮಾಡಬೇಕಿದೆ. ಶಿಕ್ಷಕರಿಗಾಗಿ ಸಂಕಲ್ಪದಿನ, ಸದಸ್ಯತ್ವ ಅಭಿಯಾನ, ಸಮಾಜ ನಿಧಿ ಸಮರ್ಪಣೆ, ಶಿಕ್ಷಕ ತರಬೇತಿ ಕಾರ್ಯಾಗಾರಗಳು, ಪ್ರತಿಭಾ ಪುರಸ್ಕಾರ ಹೀಗೆ ವಿವಿಧ ಆಯಾಮಗಳಲ್ಲಿ ಶಿಕ್ಷಕರ ಆತ್ಮವಿಮರ್ಶೆ ಮಾಡಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯ. ಕೃ.ನರಹರಿ ಅವರಂಥ ಹಿರಿಯರ ಮೂಲಕ ಸಂಘವು ಈ ಕಾರ್ಯ ಮಾಡುತ್ತಿದೆ’ ಎಂದರು.

ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ, ಉಪಾಧ್ಯಕ್ಷರಾದ ಚಂದ್ರಶೇಖರ ಗೋಸಲ್, ಕಾರ್ಯದರ್ಶಿ ಸಂಜುಕುಮಾರ ಪಾಟೀಲ ಹಾಗೂ ವಿವಿಧ ಶಿಕ್ಷಕರು, ಉಪನ್ಯಾಸಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.