ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಗೆ ಕಲಬುರಗಿ ಜಿಲ್ಲೆ ತತ್ತರ

ಹಲವೆಡೆ ಸಂಪರ್ಕ ಕಡಿತ; ಮನೆಗಳಿಗೆ ನುಗ್ಗಿದ ನೀರು; ಜಲಾಶಯ ಭರ್ತಿ
Last Updated 5 ಆಗಸ್ಟ್ 2022, 2:57 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ನಗರ ಸೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುವಾರ ಭಾರಿ ಮಳೆ ಸುರಿದ ಕಾರಣ ಜನರು ಅಕ್ಷರಶಃ ತತ್ತರಿಸಿದರು. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು.

ಕಲಬುರಗಿ ಹೊರವಲಯದ ಕುಸನೂರು ಗ್ರಾಮದಲ್ಲಿ ಅತಿ ಹೆಚ್ಚು 80 ಮಿಲಿಮೀಟರ್ ಮಳೆ ಬಿದ್ದಿದೆ. ಮಧ್ಯಾಹ್ನ ಆರಂಭವಾದ ಬಳಿಕ ಕೊಂಚ ಬಿಡುವು ನೀಡಿತು. ಸಂಜೆಯ ಬಳಿಕ ಮತ್ತೆ ಶುರುವಾಯಿತು. ಮನೆಗೆ ನೀರು ನುಗ್ಗುವ ಭೀತಿಯಲ್ಲೇ ಜನರು ರಾತ್ರಿ ಕಳೆದರು.

ಕಲಬುರಗಿ ಹೊರವಲಯದ ಬೇಡ, ಬುಡ್ಗ ಜಂಗಮರ ಗುಡಿಸಲುಗಳಿಗೆ ನೀರು ನುಗ್ಗಿದ್ದರಿಂದ ಮಕ್ಕಳು, ವೃದ್ಧರು, ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸಿದರು. ಬೇರೆಡೆ ಹೋಗಿ ತಂಗಲಿಕ್ಕೂ ಅವರಿಗೆ ಅವಕಾಶಗಳಿರಲಿಲ್ಲ.

ಕಲಬುರಗಿ ನಗರ ತಾರಫೈಲ್ ಬಡಾವಣೆ, ಪೂಜಾ ಕಾಲೊನಿ, ಕುಸನೂರ ರಸ್ತೆ, ಎಸ್‌ಆರ್‌ವಿ ಹೋಟೆಲ್ ಎದುರಿನ ಹಳ್ಳದ ನೀರು ಭಾರಿ ಪ್ರಮಾಣದಲ್ಲಿ ಹರಿದು ವಾಹನ ಹಾಗೂ ಜನಸಂಚಾರಕ್ಕೆ ಅಡ್ಡಿಯಾಯಿತು. ಕಳೆದ ವರ್ಷವೂ ಪೂಜಾ ಕಾಲೊನಿ ಸಮೀಪದಲ್ಲಿ ಹಳ್ಳ ತುಂಬಿ ಹರಿದ ಕಾರಣ ಕಾರೊಂದು ಕೊಚ್ಚಿಕೊಂಡು ಹೋಗಿತ್ತು.

ಭಾರಿ ಮಳೆಯಿಂದಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ ಕಟ್ಟಡದಲ್ಲಿನ ಕೊಠಡಿಗಳಿಗೆ ನೀರು ನುಗ್ಗಿತ್ತು. ನಗರದ ಶರಣಬಸವೇಶ್ವರ ರಸ್ತೆಯು ಅಕ್ಷರಶಃ ನದಿಯಾಗಿ ಮಾರ್ಪಟ್ಟಿತ್ತು. ಲಾಲಗೇರಿ ಕ್ರಾಸ್‌ ಬಳಿ ಭಾರಿ ಪ್ರಮಾಣದ ನೀರಿನಿಂದ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ ನೀರಿನಲ್ಲಿ ಕೊಚ್ಚಿ ಹೋದವು.

ಲಾಲಗೇರಿ ಕ್ರಾಸ್‌ ಹಾಗೂ ಶಹಾಬಾದ್ ರಸ್ತೆ, ಪಿಡಿಎ ಎಂಜಿನಿಯರಿಂಗ್ ಕಾಲೇಜಿನಿಂದ ಕೋರಂಟಿ ಹನುಮಾನ್ ದೇವಸ್ಥಾನಕ್ಕೆ ತೆರಳುವಲ್ಲಿನ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನಿಂತ ಗಂಟೆಗಳ ಬಳಿಕವೂ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ಅಂತಹ ನೀರಿನಲ್ಲೇ ಕಾರು ಹಾಗೂ ಬೈಕ್ ಸವಾರರು ತಮ್ಮ ವಾಹನಗಳನ್ನು ದಾಟಿಸಲು ಪ್ರಯತ್ನಪಟ್ಟರು. ಕಲಬುರಗಿ ಪಬ್ಲಿಕ್‌ ಗಾರ್ಡನ್ ಹಾಗೂ ಕಿರು ಮೃಗಾಲಯದ ಆವರಣದಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತು.

ಕಮ್ಮರವಾಡಿಯಲ್ಲಿ 56 ಮಿ.ಮೀ, ಕಮಲಾಪುರ ತಾಲ್ಲೂಕಿನ ಕಲಮೂಡ ಗ್ರಾಮದಲ್ಲಿ 49.5 ಮಿ.ಮೀ, ಆಳಂದ ತಾಲ್ಲೂಕಿನ ಸರಸಂಬಾದಲ್ಲಿ 29.5 ಮಿ.ಮೀ, ಚಿಂಚೋಳಿ ತಾಲ್ಲೂಕಿನ ದೇಗಲಮಡಿಯಲ್ಲಿ 28.5 ಮಿ.ಮೀ, ಕಲಬುರಗಿ ತಾಲ್ಲೂಕಿನ ಸರಡಗಿಯಲ್ಲಿ 33.5 ಮಿ.ಮೀ, ನಂದೂರ (ಕೆ) ಗ್ರಾಮದಲ್ಲಿ 40 ಮಿ.ಮೀ. ಕಲಬುರಗಿಯಲ್ಲಿ 24 ಮಿ.ಮೀ. ಮಳೆ ಸುರಿದಿದೆ.

ದಂಡಗುಂಡ ದೇವಸ್ಥಾನಕ್ಕೆ ನುಗ್ಗಿದ ನೀರು

ವಾಡಿ: ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ದಂಡಗುಂಡ ಗ್ರಾಮದ ಪ್ರಸಿದ್ಧ ಬಸವಣ್ಣನ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ. ಗುಡ್ಡದ ಮೇಲಿನಿಂದ ಏಕಾಏಕಿ ಹರಿದು ಬಂದ ಮಳೆ ನೀರು ದೇವಸ್ಥಾನಕ್ಕೆ ನುಗ್ಗಿ ಒಂದು ಕ್ಷಣ ಭಕ್ತರು ಹಾಗೂ ಅರ್ಚಕರ ಗಾಬರಿಗೆ ಕಾರಣವಾಯಿತು.

ನಿರಂತರ ಮಳೆಗೆ ಬೆಳೆ ನಾಶ

ಅಫಜಲಪುರ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಹತ್ತಿ, ತೊಗರಿ, ಉದ್ದು, ಹೆಸರು ಹಾಗೂ ಸೂರ್ಯಕಾಂತಿ ಬೆಳೆಗಳಿಗೆಅಪಾರಹಾನಿಯಾಗಿದೆ.

ಬೆಳೆಗಳು ಮೊಳಕೆಯ ಹಂತದಲ್ಲಿ ಸುಟ್ಟು ಹೋಗುತ್ತಿವೆ. ಈ ಭಾಗದಲ್ಲಿ 2 ತಿಂಗಳ ನಂತರ ಮಳೆಯಾಗಿದ್ದರಿಂದ ರೈತರು ತಡವಾಗಿ ಬಿತ್ತನೆ ಮಾಡಿದ್ದರು. ಸದ್ಯ ಮೊಳಕೆ ಹಂತದಲ್ಲಿದ್ದು, ಕೆಲವೆಡೆ 2 ಎಲೆಗಳನ್ನು ಮಾತ್ರ ಬಿಟ್ಟಿವೆ. ಹೀಗಾಗಿ ಮಳೆ ಹಾಗೂ ಹೆಚ್ಚಿದ ತೇವಾಂಶದಿಂದಾಗಿ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿವೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಕರಜಗಿ, ಅತನೂರು ಮತ್ತು ಅಫಜಲಪುರದಲ್ಲಿ ನಿರಂತರ ಮಳೆಗೆ 10 ಸಾವಿರ ಹೆಕ್ಟೇರ್‌ ಬೆಳೆಗಳು ಹಾಳಾಗಿವೆ. ಕಂದಾಯ ಮತ್ತು ತೋಟಗಾರಿಕೆ ಕೃಷಿ ಇಲಾಖೆ ಜಂಟಿಯಾಗಿ ಹಾಳಾಗಿರುವ ಬೆಳೆ ಸಂಖ್ಯೆಯನ್ನು ಮಾಡಬೇಕು ಎಂದು ಬಂದರವಾಡದ ಪ್ರಾಂತ ರೈತ ಸಂಘದ ಮುಖಂಡ ಲಕ್ಷ್ಮಣ ಕಟ್ಟಿಮನಿ ಹಾಗೂ ಮಾಶಾಳದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಶಿವು ಪ್ಯಾಟಿ ಒತ್ತಾಯಿಸಿದ್ದಾರೆ.

ಜಲಾಶಯಗಳಿಂದ ನೀರು ಬಿಡುಗಡೆ

ಚಿಂಚೋಳಿ: ನಿರಂತರ ಮಳೆ ಸುರಿಯುತ್ತಿರುವ ಕಾರಣ ತಾಲ್ಲೂಕಿನ ಜಲಾಶಯಗಳಲ್ಲಿ‌ ಒಳ ಹರಿವು ಹೆಚ್ಚಾಗಿದೆ. ಚಂದ್ರಂಪಳ್ಳಿ ಮತ್ತು ನಾಗರಾಳ‌ ಜಲಾಶಯಗಳಿಂದ ನೀರು ನದಿಗೆ ಬಿಡಲಾಗಿದೆ. ನಿರಂತರ ಮಳೆಯಿಂದ ನದಿ, ನಾಲಾ, ತೊರೆಗಳು ತುಂಬಿ ಹರಿಯುತ್ತಿವೆ. ನಾಗರಾಳ ಜಲಾಶಯಕ್ಕೆ 1,100 ಕ್ಯುಸೆಕ್ ಒಳಹರಿವು ಹೆಚ್ಚಾಗಿದ್ದರಿಂದ 1289 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ ಎಂದು ಎಇಇ ಹಣಮಂತ ಪೂಜಾರಿ ತಿಳಿಸಿದರು.

ಚಂದ್ರಂಪಳ್ಳಿ ಜಲಾಶಯಕ್ಕೆ 474 ಕ್ಯುಸೆಕ್ ಒಳ ಹರಿವಿದೆ. ಜಲಾಶಯದಿಂದ 874 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ ಎಂದು ಎಇಇ ಚೇತನ ಕಳಸ್ಕರ ತಿಳಿಸಿದರು. ಜಲಾಶಯದ ಕೆಳಭಾಗದ ಗ್ರಾಮಗಳಾದ ದೇಗಲಮಡಿ, ಐನೋಳ್ಳಿ, ಫತೆಪೂರ, ಕೊಳ್ಳೂರು, ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ, ಕನಕಪುರ, ಗೌಡನಹಳ್ಳಿ, ನೀಮಾ ಹೊಸಳ್ಳಿ, ಚಿಂಚೋಳಿ, ಚಂದಾಪುರ ರೈತರು ಹಾಗೂ ಸಾರ್ವಜನಿಕರು ನದಿಯತ್ತ ಹೋಗಬಾರದು ಎಂದು ಅವರು ಕೋರಿದ್ದಾರೆ.

ಕಮಲಾಪುರ–ಚಿಂಚೋಳಿ ಸಂಚಾರ ಸ್ಥಗಿತ

ಕಮಲಾಪುರ: ತಾಲ್ಲೂಕಿನಾದ್ಯಂತ ಗುರುವಾರ ಬೆಳಿಗ್ಗೆಯಿಂದ ಸುರಿದ ಧಾರಕಾರ ಮಳೆಗೆ ಕಮಲಾಪುರ–ಚಿಂಚೋಳಿ ಸಂಚಾರ ಸ್ಥಗಿತಗೊಂಡಿದೆ. ಜತೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಹೊಲಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿದೆ. ರಾಜನಾಳ, ಬಾಚನಾಳ, ಓಕಳಿ, ಮರಗುತ್ತಿ, ಸೊಂತ, ಪಟವಾದ, ಕಲಮೂಡ, ಬೆಳಕೋಟಾ, ಮಹಾಗಾಂವ ಸೇರಿದಂತೆ ಇತೆರೆಡೆ ಬೆಟ್ಟಗುಡ್ಡಗಳಿಂದ ಹರಿದು ಬಂದ ನೀರು ಪ್ರವಾಹ ಸೃಷ್ಟಿಸಿದ್ದು, ಜಮೀನಿಗೆ ನುಗ್ಗಿ ಬೆಳೆ ಕೊಚ್ಚಕೊಂಡು ಹೋಗಿದೆ.

ಕಮಲಾಪುರ ಕಲಮೂಡ ಮಧ್ಯದ ಅಂತಪನಾಳ ಬಳಿಯೆ ಸೇತುವೆ ಮೇಲೆ ಪ್ರವಾಹದಿಂದಾಗಿ ಸುಮಾರು 3 ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕಲಮೂಡ, ಚೇಂಗಟಾ, ಚಂದನಕೇರಾ, ಚಿಂಚೋಳಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಜಲಾಶಯದಿಂದ ನೀರು: ಕಮಲಾಪುರದ ಹೊಲವೊಂದರಲ್ಲಿ ಗುರುವಾರ ದನ ಮೇಯಿಸುತ್ತಿದ್ದ ಇಸ್ಮಾಯಿಲ್‌ ರಬ್ಬಾನಿ ಬರ್ದಾಪುರ ಎಂಬುವವರಿಗೆ ಸಿಡಿಲು ಬಡಿದಿದ್ದು, ಸ್ವಲ್ಪ ಗಾಯವಾಗಿದೆ. ಜಲಾಶಯಗಳ ಹೊರ ಹರಿವು ಹೆಚ್ಚಳ: ಬೆಳಕೋಟಾ ಜಲಾಶಯದಿಂದ 750 ಕ್ಯುಸೆಕ್ ನೀರು ಹೊರ ಬಿಡಲಾಯಿತು. 600 ಕ್ಯುಸೆಕ್‌ ಒಳ ಹರಿವಿದ್ದು ಶೇ 82 ಜಲಾಶಯ ಭರ್ತಿಯಾಗಿದೆ ಎಂದು ಸಹಾಯಕ ಎಂಜಿನಿಯರ ಶ್ರೀಕಾಂತ ಹೊಂಡಾಳೆ ತಿಳಿಸಿದರು.

ಬೆಣ್ಣೆ ತೊರೆ ಜಲಾಶಯದಿಂದ ಗುರುವಾರ ಸಂಜೆ 2,400 ಕ್ಯುಸೆಕ್ ನೀರು ಹೊರ ಬಿಡಲಾಯಿತು. 3000 ಕ್ಯುಸೆಕ್ ಒಳ ಹರಿವಿದೆ. ಸದ್ಯ ಶೇ 70ರಷ್ಟು ನೀರಿನ ಸಂಗ್ರಹವಿದೆ ಎಂದು ಜಲಾಶಯದ ಸಹಾಯಕ ಎಂಜಿನಿಯರ ವೀರೇಶ ಜೀರ್ಗೆ ತಿಳಿಸಿದ್ದರು.

ಚಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯ

ಆಳಂದ: ವಿವಿಧೆಡೆ ಮಳೆ ಅಬ್ಬರ ಮುಂದುವರಿದಿದೆ. ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಪಿಯು ಕಾಲೇಜಿನ ಕೊಠಡಿ ಚಾವಣಿ ಕುಸಿದು ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಅಲ್ಲದೇ ತಾಲ್ಲೂಕಿನ ಹಳ್ಳಗಳು ತುಂಬಿ ಹರಿಯುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ನಿಕಿತಾ ಬಾಬುರಾವ ನಿಂಗದಳ್ಳಿ (16) ಗಾಯಗೊಂಡಿದ್ದು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿಯರಾದ ತಾರಾಬಾಯಿ ಉಮೇಶ, ವಿಜಯಲಕ್ಷ್ಮಿ ಸಿದ್ದರಾಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಥಮ ವರ್ಷದ ತರಗತಿ ಕೋಣೆಯಲ್ಲಿ ಉಪನ್ಯಾಸಕರು ಬೋಧನೆ ಸಂದರ್ಭದಲ್ಲಿಯೇ ಏಕಾಏಕಿ ವಿದ್ಯಾರ್ಥಿನಿಯರ ಮೇಲೆ ಚಾವಣಿ ಸಿಮೆಂಟ್ ಪ್ಲಾಸ್ಟರ್ ಕುಸಿದು ಬಿದ್ದಿದೆ.

ಸತತ ಮಳೆಯಿಂದ ಮಾದನ ಹಿಪ್ಪರಗಿ ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡದ ಚಾವಣಿ ಮೇಲೆ ನೀರು ಸಂಗ್ರಹಗೊಂಡಿದ್ದರಿಂದಲೇ ಚಾವಣಿ ಕುಸಿಯಲು ಕಾರಣ ಎನ್ನಲಾಗಿದೆ. ಸಂಚಾರ ಸ್ಥಗಿತ: ವರುಣ ಅಬ್ಬರಕ್ಕೆ ತಾಲ್ಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಆಳಂದ-ತಡಕಲ್ ಮಾರ್ಗದ ದಬದಬ್ಬಿ ಸೇತುವೆ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಈ ಮಾರ್ಗದ ಮುನ್ನೋಳ್ಳಿ, ಹೊನ್ನಳ್ಳಿ, ಹಳ್ಳಿಸಲಗರ, ತಡಕಲ್, ಬೆಳಮಗಿ, ಸನಗುಂದಾ, ಕಿಣ್ಣಿಸುಲ್ತಾನ, ಹೊಸಳ್ಳಿ ಗ್ರಾಮಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ತಾಲ್ಲೂಕಿನ ಹೊದಲೂರು ಗ್ರಾಮದ ಸಮೀಪದ ಹಳ್ಳದ ಸೇತುವೆ ಕೂಡ ಮುಳುಗಿದ್ದು, ಜನರು ಊರಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ತಾಲ್ಲೂಕಿನ ದೇಗಾಂವ–ಬಿಲಗುಂದಿ ಗ್ರಾಮದ ಮಧ್ಯದ ಸೇತುವೆ ಹಾಳಾಗಿ ಹಳ್ಳವು ಸುತ್ತಲಿನ ಹೊಲಗದ್ದೆಗಳಿಗೆ ನೀರು ನುಗ್ಗುವ ಪರಿಸ್ಥಿತಿಯಿದೆ. ಬಿಲಗುಂದಾ–ದೇಗಾಂವ ಮಧ್ಯದ ಸಂಪರ್ಕವು ಕಡಿತಗೊಂಡಿದೆ. ಮಟಕಿ, ನರೋಣಾ, ಬೆಣ್ಣೆಶಿರೂರು ಮತ್ತಿತರ ಗ್ರಾಮದ ಹಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇದರಿಂದ ಬಹುತೇಕ ಗ್ರಾಮಸ್ಥರು ಮನೆಗಳಿಗೆ ತೆರಳಲು ಹಳ್ಳದ ದಡದಲ್ಲಿ ಕಾದಿದ್ದರು.

ಪಟ್ಟಣದ ಮುಖ್ಯರಸ್ತೆಗಳಾದ ರಜ್ವಿ ರಸ್ತೆ, ಬಸ್ ನಿಲ್ದಾಣ, ತಹಶೀಲ್ದಾರ್- ಸುಲ್ತಾನಪುರ ಗಲ್ಲಿ ಮಾರ್ಗ, ಹನುಮಾನ ರಸ್ತೆ, ಭೀಮನಗರ-ಶರಣನಗರ ರಸ್ತೆಗಳು ಜಲಾವೃತಗೊಂಡವು. ವಾಹನ ಸವಾರರು, ಪಾದಾಚಾರಿಗಳು, ತರಕಾರಿ–ಹಣ್ಣಿನ ವ್ಯಾಪಾರಿಗಳು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT