ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸೌಲಭ್ಯಗಳ ಜಪ: ಕ್ರೀಡಾಪಟುಗಳಿಗೆ ಸಾಧನೆಯ ತವಕ

ಕೆಲವು ತಾಲ್ಲೂಕುಗಳಲ್ಲಿ ಇಲ್ಲ ಒಳಾಂಗಣ ಕ್ರೀಡಾಂಗಣಗಳು; ಸೌಕರ್ಯಗಳ ಕೊರತೆಯೂ ಅಡ್ಡಿ
Published 22 ಜನವರಿ 2024, 7:25 IST
Last Updated 22 ಜನವರಿ 2024, 7:25 IST
ಅಕ್ಷರ ಗಾತ್ರ

ಕಲಬುರಗಿ: ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತ ಹಲವು ಪ್ರತಿಭಾನ್ವಿತರು ‘ತೊಗರಿ ಕಣಜ’ ಕಲಬುರಗಿಯಲ್ಲಿದ್ದಾರೆ. ಆದರೆ ಸೂಕ್ತ ಅಂಗಣ, ಅನುದಾನ, ಸೌಲಭ್ಯಗಳ ಕೊರತೆ ಅವರಿಗೆ ತೊಡಕಾಗಿ ನಿಂತಿವೆ.

ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ಒಂದಷ್ಟು ಸೌಲಭ್ಯಗಳನ್ನು ಹೊರತುಪಡಿಸಿದರೆ ಉಳಿದೆಡೆ ಹೇಳಿಕೊಳ್ಳುವಂತಿಲ್ಲ. ಜೇವರ್ಗಿ, ಚಿಂಚೋಳಿ  ತಾಲ್ಲೂಕುಗಳಲ್ಲಿ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದ್ದು, ಶೇ 75ರಷ್ಟು ಕೆಲಸ ಆಗಿದೆ. ಮುಕ್ತಾಯ ಹಂತ ಮಾತ್ರ ಬಾಕಿ ಇದೆ. ಸೇಡಂನಲ್ಲಿಯೂ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಅಲ್ಲಿ ಬ್ಯಾಡ್ಮಿಂಟನ್ ಆಡುವ ವ್ಯವಸ್ಥೆ ಮಾಡಲಾಗುತ್ತಿದೆ.

ಆಳಂದ, ಹೊಸದಾಗಿ ರಚನೆಯಾದ ಶಹಾಬಾದ್‌, ಕಾಳಗಿ, ಯಡ್ರಾಮಿ ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳೇ ಇಲ್ಲದೇ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರು ಪರಿತಪಿಸುವಂತಾಗಿದೆ.

‘ಈ ತಾಲ್ಲೂಕುಗಳಲ್ಲಿ ಜಾಗ ನೋಡಲು ತಹಶೀಲ್ದಾರರಿಗೆ ಪತ್ರ ಬರೆಯಲಾಗುವುದು. ಕನಿಷ್ಠ ನಾಲ್ಕು ಎಕರೆ ಜಾಗ ಸಿಕ್ಕರೂ ಹೊರಾಂಗಣ ಮತ್ತು ಒಳಾಂಗಣ ಎರಡೂ ನಿರ್ಮಿಸಬಹುದು. ಕಮಲಾಪುರದಲ್ಲಿ ಒತ್ತುವರಿ ಕುರಿತು ಪ್ರಕರಣ ಬಾಕಿ ಇರುವುದರಿಂದ ಕ್ರೀಡಾಂಗಣ ನಿರ್ಮಾಣಕ್ಕೆ ತಡೆ ಇದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ಹೇಳುತ್ತಾರೆ.

ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಬ್ಯಾಡ್ಮಿಂಟನ್‌, ಸ್ಕ್ವಾಷ್‌, ಟೇಬಲ್‌ ಟೆನಿಸ್‌, ಜೂಡೊ, ಕೊಕ್ಕೊ ಮತ್ತು ಕಬಡ್ಡಿ ಅಂಕಣಗಳನ್ನು ನಿರ್ಮಿಸಲಾಗಿದೆ. ಇಂತಿಷ್ಟು ಶುಲ್ಕ ನಿಗದಿ ಮಾಡಿ ಪ್ರತಿದಿನ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗುತ್ತದೆ.

ನಾಲ್ಕು ಕೋರ್ಟ್‌ಗಳಿರುವ ಬ್ಯಾಡ್ಮಿಂಟನ್‌ ಅಂಗಣದಲ್ಲಿ ಬೆಳಗಿನ ಜಾವ ಹೆಚ್ಚಿನ ಆಟಗಾರರು ಹಾಗೂ ಹವ್ಯಾಸಿ ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಾರೆ. ರೇಣುಕಾಚಾರ್ಯ, ಅಥರ್ವ, ಪೃಥ್ವಿರಾಜ್‌, ಗೌರಿ ಪಾಟೀಲ ಅವರು ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಹೊಸ ವುಡನ್‌ ಮ್ಯಾಟ್‌ ಕೂಡ ಹಾಕಲಾಗಿದೆ. ಇದು ಕ್ರೀಡಾಪಟುಗಳಿಗೆ ಒಂದಷ್ಟು ಖುಷಿ ನೀಡಿದೆ.

‘ಬೆಳಗಿನ ಜಾವ ಹೆಚ್ಚು ಜನ ಅಭ್ಯಾಸ ನಡೆಸುವುದರಿಂದ ಕೋರ್ಟ್‌ಗಳು ಸಾಲುವುದಿಲ್ಲ. ಕೆಲವೊಮ್ಮೆ ಮನಸ್ತಾಪಗಳು ಬರುತ್ತವೆ. ಅಭ್ಯಾಸ ನಡೆಸಿ ವಿಶ್ರಾಂತಿ ತೆಗೆದುಕೊಳ್ಳಲು ಕುಳಿತುಕೊಳ್ಳಬೇಕೆಂದರೆ ನೆಲ ದೂಳು ಆಗಿರುತ್ತದೆ. ಸ್ವಚ್ಛತೆ ಕಡೆ ಗಮನ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಅಂಗಣದ ಹತ್ತಿರವೇ ಮಾಡಬೇಕು. ದೂರದಿಂದ ತರಲು ತೊಂದರೆಯಾಗುತ್ತದೆ’ ಎಂದು ಬ್ಯಾಡ್ಮಿಂಟನ್ ಕೋಚ್‌ ಜಾಕೀರ್ ಅಲವತ್ತುಕೊಳ್ಳುತ್ತಾರೆ.

ಸ್ಕ್ವಾಷ್‌ ಕ್ರೀಡೆಗೆ ಕೋಚ್‌ ಇಲ್ಲ. ಸ್ಕ್ವಾಷ್‌ ಮತ್ತು ಟೇಬಲ್ ಟೆನಿಸ್‌ ಕ್ರೀಡೆಗಳ ಅಂಗಣವನ್ನು ಸಂಜೆಯ ವೇಳೆಯಲ್ಲಿ ಕೆಲವು ಅಧಿಕಾರಿಗಳು ಮತ್ತು ಸೀನಿಯರ್‌ ಕ್ರೀಡಾಪಟುಗಳು ಬಳಸಿಕೊಳ್ಳುತ್ತಾರೆ. ಅಲ್ಲಿ ಯುವ ಕ್ರೀಡಾಪಟುಗಳು ಬರುವುದು ಕಡಿಮೆ.

ಜೂಡೊ ಅಂಗಣದಲ್ಲಿ ಸೌಲಭ್ಯಗಳು ಉತ್ತಮವಾಗಿವೆ ಎಂಬುದು ಕೋಚ್‌ ಅಶೋಕ್ ಸೂರಿ ಅವರ ಅಭಿಮತ. ಅವರ ಗರಡಿಯಲ್ಲಿ ಪಳಗಿರುವ ಹಲವು ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಕಬಡ್ಡಿ ಮತ್ತು ಕೊಕ್ಕೊ ಅಂಗಣಗಳನ್ನು ವಿವಿಧ ಟೂರ್ನಿಗಳನ್ನು ಆಡಿಸಲು ಮಾತ್ರ ಉಪಯೋಗಿಸಲಾಗುತ್ತದೆ. ಮ್ಯಾಟ್‌ ಹಾಳಾಗುತ್ತದೆ ಎಂದು ಸ್ಥಳೀಯರ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟಿಲ್ಲ.

ಹಳೆ ಕಟ್ಟಡಗಳು: ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಒಳಾಂಗಣ ಕ್ರೀಡೆಗಳನ್ನು ಹಳೆಯ ಕಟ್ಟಡಗಳಲ್ಲಿ ಆಡಿಸಲಾಗುತ್ತಿದೆ. ಕೆಲವು ಕಟ್ಟಡಗಳ ಕಿಟಕಿಗಳು ಮುರಿದಿವೆ. ಸ್ವಚ್ಛತೆಯೂ ಅಷ್ಟಕಷ್ಟೇ. ಇವುಗಳನ್ನು ನವೀಕರಣ ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಅವರ ಮನವಿ.

ಅನುದಾನದ ಕೊರತೆ: ಏನೇ ಹೊಸ ಯೋಜನೆ ಕೈಗೊಳ್ಳಬೇಕೆಂದರೂ ಕೆಕೆಆರ್‌ಡಿಬಿ ಅನುದಾನಕ್ಕೆ ಕಾಯಬೇಕು. ಅಲ್ಲಿಂದಲೇ ದುಡ್ಡು ಬರಬೇಕು. ಕ್ರೀಡಾ ಇಲಾಖೆ ಈಗ ಅನುದಾನ ನೀಡುವುದು ಕಡಿಮೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಜೇವರ್ಗಿ: ನಿರ್ಮಾಣ ಹಂತದಲ್ಲಿ ಅಂಗಣ

ಜೇವರ್ಗಿ ಪಟ್ಟಣದಲ್ಲಿರುವ ತಾಲ್ಲೂಕು ಕ್ರಿಡಾಂಗಣದ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 1 ಕೋಟಿ 99 ಲಕ್ಷ ವೆಚ್ಚದಲ್ಲಿ ಹೊರಾಂಗಣ ಕ್ರೀಡಾಂಗಣ ನಿಮಿ೯ಸಲಾಗಿದೆ. ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಇದರ ಅಂದಾಜು ವೆಚ್ಚ ₹ 40 ಲಕ್ಷ ಆಗಿದೆ.

‘ಹೊರಾಂಗಣ ಕ್ರೀಡಾಂಗಣಕ್ಕೆ 5 ಗೇಟ್‌ಗಳನ್ನು ನಿಮಿ೯ಸಲಾಗಿದೆ. 25 ಸಾವಿರ ಜನ ಕೂಡಲು ಆಸನ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಗ್ಯಾಲರಿ ಇದೆ. ಪ್ರತಿ ದಿನ ಸುಮಾರು 150ರಿಂದ 250 ಕ್ರೀಡಾಪಟುಗಳು  ಕ್ರೀಡಾಂಗಣಕ್ಕೆ ಬರುತ್ತಾರೆ. ಸಾವ೯ಜನಿಕರು ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡಲು ಬರುತ್ತಾರೆ. ಕ್ರೀಡಾಂಗದಲ್ಲಿ ಜಿಮ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಕ್ರೀಡಾಂಗಣದ ವ್ಯವಸ್ಥಾಪಕ ಹಾಗೂ ಕೋಚ್ ಸಂಗಮೇಶ್ ಕೊಂಬಿನ್ ತಿಳಿಸಿದ್ದಾರೆ

‘ಕೊಕ್ಕೊ ಮತ್ತು ಕಬಡ್ಡಿ ಅಂಕಣಗಳು ನಿಮಾ೯ಣ ಹಂತದಲ್ಲಿವೆ. ಜನವರಿ 26ರೊಳಗೆ ಕ್ರೀಡಾಂಗಣದ ಬಾಕಿ ಕಾಮಗಾರಿಗಳನ್ನು ಪೂಣ೯ಗೊಳಿಸುವಂತೆ ಶಾಸಕ ಡಾ.ಅಜಯ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಳಾಂಗಣ ಕ್ರೀಡಾಂಗಣ ಪ್ರಗತಿ ಹಂತಲ್ಲಿದ್ದು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂಣ೯ಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಳಿದ್ದಾರೆ. ಕ್ರೀಡಾಂಗಣದ ಸ್ವಚ್ಛತೆ ಹಾಗೂ ಗಿಡಮರಗಳನ್ನು ಬೆಳೆಸುವುದು ನೀರು ಸರಬರಾಜು ಮಾಡಲಾಗುತ್ತದೆ’ ಎಂದು ಪುರಸಭೆಯ ಕಿರಿಯ ಎಂಜಿನಿಯರ್‌ ಶ್ರೀನಿವಾಸ ತಿಳಿಸಿದ್ದಾರೆ.

ಪೂರಕ ಮಾಹಿತಿ: ಜಗನ್ನಾಥ ಶೇರಿಕಾರ, ವೆಂಕಟೇಶ ಹರವಾಳಕರ, ಮಂಜುನಾಥ ದೊಡಮನಿ, ಮಲ್ಲಿಕಾರ್ಜುನ ಎಚ್.ಎಂ,

ಬಸವರಾಜ ಬೈನೂರ್
ಬಸವರಾಜ ಬೈನೂರ್
ಶಿವಪ್ರಸಾದ ಪಿ.ಜಿ
ಶಿವಪ್ರಸಾದ ಪಿ.ಜಿ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಆವರಣದ ಒಳಾಂಗಣದಲ್ಲಿ ಟೇಬಲ್ ಟೆನಿಸ್‌ ಆಡಿದ ಕ್ರೀಡಾಪಟುಗಳು
–ಪ್ರಜಾವಾಣಿ ಚಿತ್ರಗಳು/ ತಾಜುದ್ದೀನ್ ಆಜಾದ್‌
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಆವರಣದ ಒಳಾಂಗಣದಲ್ಲಿ ಟೇಬಲ್ ಟೆನಿಸ್‌ ಆಡಿದ ಕ್ರೀಡಾಪಟುಗಳು –ಪ್ರಜಾವಾಣಿ ಚಿತ್ರಗಳು/ ತಾಜುದ್ದೀನ್ ಆಜಾದ್‌
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಟೇಬಲ್ ಟೆನಿಸ್ ಸ್ಕ್ವಾಷ್ ಒಳಾಂಗಣ ಕಟ್ಟಡದ ದುಃಸ್ಥಿತಿ 
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಟೇಬಲ್ ಟೆನಿಸ್ ಸ್ಕ್ವಾಷ್ ಒಳಾಂಗಣ ಕಟ್ಟಡದ ದುಃಸ್ಥಿತಿ 
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಬ್ಯಾಡ್ಮಿಂಟನ್ ಅಂಗಣದಲ್ಲಿ ತಾಲೀಮು ನಿರತ ಕ್ರೀಡಾಪಟುಗಳು ಹಾಗೂ ಹವ್ಯಾಸಿ ಆಟಗಾರರು 
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಬ್ಯಾಡ್ಮಿಂಟನ್ ಅಂಗಣದಲ್ಲಿ ತಾಲೀಮು ನಿರತ ಕ್ರೀಡಾಪಟುಗಳು ಹಾಗೂ ಹವ್ಯಾಸಿ ಆಟಗಾರರು 
ಜಿಲ್ಲಾ ಕ್ರೀಡಾಂಗಣದ ಸಂಪೂರ್ಣ ನವೀಕರಣಕ್ಕೆ ಯೋಜಿಸಲಾಗಿದೆ. ಇದಕ್ಕೆ ₹ 33 ಕೋಟಿ ವೆಚ್ಚ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಆದರೆ ನಿಖರ ಮೊತ್ತ ಎಷ್ಟು ಎಂಬ ಮಾಹಿತಿ ಇಲ್ಲ
ಜಿ. ಗಾಯತ್ರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ
ಚಿಂಚೋಳಿಯಲ್ಲಿ ಒಳಾಂಗಣ ಕ್ರೀಡಾಂಗಣ ಇಲ್ಲದ ಕಾರಣ ನಾವು ಕೆಎಸ್‌ಎಫ್‌ಸಿಯ ಖಾಲಿ ಉಗ್ರಾಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಈಗ ಒಳಾಂಗಣ ಕ್ರೀಡಾಂಗಣ ಉಪಯುಕ್ತವಾಗಿದೆ
ಶಿವಪ್ರಸಾದ ಪಿ.ಜಿ ಅಧ್ಯಕ್ಷ ಎನ್‌ಪಿಎಸ್ ನೌಕರರ ಸಂಘ ಚಿಂಚೋಳಿ
ಚಿಂಚೋಳಿಯ ಒಳಾಂಗಣ ಕ್ರೀಡಾಂಗಣದ ಆವರಣ ಗೋಡೆ ನಿರ್ಮಾಣ ಬಾಕಿಯಿದ್ದು ಶೀಘ್ರವೇ ಅದನ್ನು ಪೂರ್ಣಗೊಳಿಸಲಾಗುವುದು
ಬಸವರಾಜ ಬೈನೂರು ಎಇಇ ಲೋಕೋಪಯೋಗಿ ಇಲಾಖೆ ಚಿಂಚೋಳಿ
ನನಗೆ ಇಲ್ಲಿ ಅಭ್ಯಾಸ ಮಾಡಲು ಅನುಕೂಲಕರ ಪರಿಸ್ಥಿತಿ ಇದೆ. ವುಡನ್‌ ಮ್ಯಾಟ್‌ನಿಂದ ತುಂಬ ಅನುಕೂಲವಾಗಿದೆ
ಸಿ. ಮಂಜುನಾಥ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ

‘ಯಡ್ರಾಮಿಗೆ ಏಕೆ ಮಲತಾಯಿ ಧೋರಣೆ?’

ಯಡ್ರಾಮಿ ತಾಲ್ಲೂಕು ಕೇಂದ್ರವಾಗಿ ಸುಮಾರು ಹತ್ತು ವರ್ಷಗಳು ಗತಿಸುತ್ತಾ ಬಂದರೂ ಇನ್ನೂ ಕ್ರೀಡಾಂಗಣದ ಭಾಗ್ಯ ಕಂಡಿಲ್ಲ. ಹೆಸರಿಗಷ್ಟೇ ತಾಲ್ಲೂಕು ಎನಿಸಿದೆ. ಯಡ್ರಾಮಿ ತಾಲ್ಲೂಕಿಗೆ 62 ಗ್ರಾಮಗಳ ವ್ಯಾಪ್ತಿ ಇದೆ. ಹೋಬಳಿ ಮಟ್ಟ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳನ್ನು ಪಟ್ಟಣದ ಪಬ್ಲಿಕ್ ಶಾಲೆ ಆವರಣದಲ್ಲೇ ನಡೆಸಲಾಗುತ್ತದೆ. ಕ್ರೀಡಾಪಟುಗಳ ಜೊತೆಗೆ ಬರುವ ಕೋಚ್‌ ಪೋಷಕರಿಗೆ ಕುಳಿತುಕೊಳ್ಳಲು ಆಸನಗಳೂ ಇರುವುದಿಲ್ಲ. ವಾಲಿಬಾಲ್ ಥ್ರೋ ಬಾಲ್‌ ಟೆನಿಸ್ ಚೆಸ್ ಕೇರಂ ಕ್ರಿಕೆಟ್ ಅಥ್ಲೆಟಿಕ್ಸ್ ಕೊಕ್ಕೊ ಕಬಡ್ಡಿ  ಆಡುವ ಪ್ರತಿಭೆಗಳಿವೆ. ಆದರೆ ಒಳಾಂಗಣ ಹೊರಾಂಗಣ ಯಾವುದೂ ಇಲ್ಲದೇ ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಹಾಗೂ ಸಾವಿರಾರು ವಿದ್ಯಾರ್ಥಿಗಳು ಕ್ರೀಡೆಯಿಂದ ದೂರ ಉಳಿದಿದ್ದಾರೆ. ‘ಜೇವರ್ಗಿ ಮತ್ತು ಯಡ್ರಾಮಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಇಲ್ಲಿನ ಶಾಸಕ ಡಾ. ಅಜಯ್‌ ಸಿಂಗ್ ಅವರು ಜೇವರ್ಗಿಗೆ ಕ್ರೀಡಾಗಣ ಕಲ್ಪಿಸಿ ಯಡ್ರಾಮಿಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಯಡ್ರಾಮಿಯಲ್ಲಿ ಕ್ರೀಡಾಪಟುಗಳಿಲ್ಲವೇ’ ಎನ್ನುತ್ತಾರೆ ಪಟ್ಟಣದ ನಾಗರಿಕರೊಬ್ಬರು.

ಚಿಂಚೋಳಿ: ವರವಾದ ಕೆಕೆಆರ್‌ಡಿಬಿ:

ಸ್ವಾತಂತ್ರ್ಯ ಬಂದಾಗಿನಿಂದಲೂ ಚಿಂಚೋಳಿ ತಾಲ್ಲೂಕು ಕೇಂದ್ರವಾಗಿದ್ದರೂ ಇಲ್ಲಿನ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಕಸ್ತರಿಗೆ ಕ್ರೀಡಾ ಅಭ್ಯಾಸಕ್ಕಾಗಿ ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳಿರಲಿಲ್ಲ. ‌ ಆದರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ಮೇಲೆ ಮಂಜೂರಾದ ಅನುದಾನದಿಂದ ತಾಲ್ಲೂಕಿನಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಮೈದಳೆದಿದ್ದು ಕ್ರೀಡಾಸಕ್ತರ ಕನಸು ನನಸಾಗಿದೆ. ಸದ್ಯ ಚಿಂಚೋಳಿ ಚಂದಾಪುರ ಮಧ್ಯೆ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದ್ದು ನಿತ್ಯ ಮಕ್ಕಳು ಯುವಕರು ಹಾಗೂ ಕ್ರೀಡಾಸಕ್ತರು ಇಲ್ಲಿ ಅಭ್ಯಾಸ ನಡೆಸುತ್ತಾರೆ.

ಬೇಕಿದೆ ಸಿಬ್ಬಂದಿ ಸೌಲಭ್ಯ

ಚಿತ್ತಾಪುರ: ಪಟ್ಟಣದ ಹೊರವಲಯದಲ್ಲಿರುವ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳ ನಿರ್ವಹಣೆಗೆ ಒಬ್ಬರೇ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು ಹೆಚ್ಚಿನ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಬ್ಬರು ಸ್ವಚ್ಛತಾ ಸಿಬ್ಬಂದಿ ಒಬ್ಬ ಕಾವಲುಗಾರ ಇಲ್ಲದೆ ಕ್ರಿಡಾಂಗಣದ ಸೂಕ್ತ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ತಾಲ್ಲೂಕಿನ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಲು ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ₹ 2 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಪ್ರಥಮ ಎನ್ನುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿಸಿದ್ದಾರೆ. ಒಳಾಂಗಣದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆಂದು ಪ್ರತ್ಯೇಕ ಜಿಮ್ ವ್ಯವಸ್ಥೆ ಮಾಡಲಾಗಿದೆ. ಬ್ಯಾಡ್ಮಿಂಟನ್‌ಗೆ ನಾಲ್ಕು ಕೋರ್ಟ್‌ ಇವೆ. ಕ್ರೀಡಾಪಟುಗಳಿಗೆ ಶೌಚಾಲಯ ಡ್ರೆಸ್ಸಿಂಗ್ ರೂಂ ವ್ಯವಸ್ಥೆ ಮಾಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಎರಡು ಕೊಳವೆ ಬಾವಿಗಳಿವೆ. ಒಳಾಂಗಣದಲ್ಲಿ ವಾಲಿಬಾಲ್ ಮತ್ತು ಕಬಡ್ಡಿ ಮೈದಾನ ವ್ಯವಸ್ಥೆ ಮಾಡಲಾಗುತ್ತಿದೆ. ಒಳಾಂಗಣದಲ್ಲಿ ಖಾಸಗಿ ಬ್ಯಾಡ್ಮಿಂಟನ್ ಸಂಸ್ಥೆ ವತಿಯಿಂದ ಅಂತರ ರಾಜ್ಯ ಬ್ಯಾಡ್ಮಿಂಟನ್ ಪಂದ್ಯಗಳು ನಡೆದಿವೆ. ಹೊರಾಂಗಣದಲ್ಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಗ್ರಾಮೀಣ ಕ್ರೀಡಾಕೂಟ ಕಾಲೇಜು ಮತ್ತು ದಸರಾ ಕ್ರೀಡಾಕೂಟಗಳು ನಡೆಯುತ್ತಿವೆ. ಸುತ್ತಲೂ ತಡೆಗೋಡೆ ಇಲ್ಲದೆ ಕ್ರೀಡಾಂಗಣ ಸರಿಯಾಗಿ ಸಂರಕ್ಷಣೆ ಮಾಡಲು ಕಷ್ಟವಾಗುತ್ತಿದೆ ಎನ್ನುವ ಬೇಸರದ ಮಾತುಗಳು ಕ್ರಿಡಾಪಟುಗಳಿಂದ ವ್ಯಕ್ತವಾಗುತ್ತಿವೆ.

ವಿವಿಧ ಅಂಗಣಗಳಲ್ಲಿ ಅಭ್ಯಾಸಕ್ಕೆ ಶುಲ್ಕ (ಪ್ರತಿ ತಿಂಗಳಿಗೆ)

  • ಕ್ರೀಡೆ;ಸರ್ಕಾರಿ ನೌಕರರಿಗೆ;ಇತರರಿಗೆ ಟೇಬಲ್ ಟೆನಿಸ್‌; ₹ 400; ₹ 500

  • ಜೂಡೊ;₹ 300; ₹ 300

  • ಬ್ಯಾಡ್ಮಿಂಟನ್‌;₹ 400;₹ 500

ಅಂಗಣಗಳಲ್ಲಿ ಅಭ್ಯಾಸ ನಡೆಸುವವರ ಸಂಖ್ಯೆ (ಪ್ರತಿದಿನ)

ಕ್ರೀಡೆ;ಪುರುಷ;ಮಹಿಳೆಯರು ಟೇಬಲ್ ಟೆನಿಸ್‌;18;6

ಜೂಡೊ;18;7

ಬ್ಯಾಡ್ಮಿಂಟನ್‌;111;26

ಜನವರಿ 1ರಿಂದ 20ರವರೆಗೆ ಅಭ್ಯಾಸ ನಡೆಸಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT