ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ವಲಯ ಸ್ಥಾಪಿಸುವ ಚಿಂತನೆ: ಸಚಿವ ಮುರುಗೇಶ ನಿರಾಣಿ

Last Updated 16 ಆಗಸ್ಟ್ 2021, 2:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲಬುರ್ಗಿಗೆ ವಿಮಾನ ಸೇವೆಆರಂಭಗೊಂಡ ನಂತರ ಈ ಭಾಗದಲ್ಲಿ ಕೈಗಾರೀಕರಣಕ್ಕೆ ಹೆಚ್ಚಿನ ವೇಗ ಬಂದಿದ್ದು, ಉದ್ಯಮಿಗಳು ಇಲ್ಲಿ ಬಂಡವಾಳ ಹೂಡುವಂತೆ ಆಕರ್ಷಿಸಲು ಒಂದೇ ಕಡೆ 5 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುವುದು. ಇಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ಚಿಂತನೆಯೂ ಇದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಲ್ಲಿನ ಪೊಲೀಸ್‌ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್ 1,000 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಜ್ಯುವೆಲರಿ ಪಾರ್ಕ್ ಅಭಿವೃದ್ಧಿಪಡಿಸುವ ಗುರಿಯಿದೆ’ ಎಂದರು.

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಮಂಡಳಿಗೆ 2021–22ನೇ ಸಾಲಿಗೆ ₹ 1,493 ಕೋಟಿ ಅನುದಾನ ಹಂಚಿಕೆಯಾಗಿದೆ. ಇದರಲ್ಲಿ 1,078 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ ₹ 298 ಕೋಟಿ ಖರ್ಚು ಮಾಡಲಾಗಿದೆ. ಕಲ್ಯಾಣಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿಗಾಗಿ ಮತ್ತು ಪರಿಣಾಮಕಾರಿ ಬದಲಾವಣೆತರಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ರಚಿಸಿ ₹ 500 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ’ ಎಂದರು.

‘ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ರೈತ ಮಕ್ಕಳಿಗೆ ₹ 2,500 ರಿಂದ ₹ 11 ಸಾವಿರದವರೆಗೆ ವಾರ್ಷಿಕ
‘ವಿದ್ಯಾರ್ಥಿ ವೇತನ’ವನ್ನು 2021–22ನೇ ಸಾಲಿನಿಂದಲೇ ಜಾರಿಗೊಳಿಸಲು ಆದೇಶಿಸಿಸಲಾಗಿದೆ. ಇದಕ್ಕಾಗಿ ₹ 1 ಸಾವಿರ ಕೋಟಿ ಮೀಸಲಿಡಲಾಗಿದೆ. ರಾಜ್ಯದ 17 ಲಕ್ಷ ಅನ್ನದಾತರ ಮಕ್ಕಳು ಇದರ ಫಲಾನುಭವಿಗಳಾಗಲಿದ್ದಾರೆ’ ಎಂದರು.

‘ಆಗಸ್ಟ್ ತಿಂಗಳಿಂದಲೇ ಅನ್ವಯವಾಗುವಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ವೃದ್ಧಾಪ್ಯ ವೇತನ ₹ 1 ಸಾವಿರದಿಂದ ₹ 1200ಕ್ಕೆ ಹೆಚ್ಚಿಸಿದ್ದು, ಜಿಲ್ಲೆಯ 95,934 ಫಲಾನುಭವಿಗಳು ಇದರ ಸೌಲಭ್ಯ ಪಡೆಯಲಿದ್ದಾರೆ. ವಿಧವಾ ವೇತನ ಸಹ ₹ 600ರಿಂದ ₹ 800ರವರೆಗೆ ಹೆಚ್ಚಿಸಲಾಗಿದೆ. ಅದೇ ರೀತಿ ಶೇ 40ರಿಂದ ಶೇ 75ರವರೆಗೆ ಅಂಗವೈಕಲ್ಯ ಹೊಂದಿರುವವರಿಗೆ ನೆರವನ್ನು ₹ 600ರಿಂದ ₹ 800ಕ್ಕೆ ಹೆಚ್ಚಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ 50 ಲಕ್ಷ ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ಮತ್ತು ಎಸ್.ಟಿ.ಪಿ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕವಾಗಿ ‘ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ ಸ್ಥಾಪಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT