ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಹೆಸರಿಗೆ ನಿವೇಶನ ನೋಂದಣಿ ಮಾಡಿ: ಸಿಎಂ ಸಿದ್ದರಾಮಯ್ಯ ಸೂಚನೆ

Published 27 ನವೆಂಬರ್ 2023, 16:17 IST
Last Updated 27 ನವೆಂಬರ್ 2023, 16:17 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಫುಡ್ ಪಾರ್ಕ್‌ನಲ್ಲಿ ಉದ್ಯಮಿ ಮಲ್ಲೇಶಪ್ಪ ಸಿದ್ದಪ್ಪ ಕಲ್ಲೂರ ಅವರು ನಿವೇಶನ ಖರೀದಿಗೆ ನಿಗದಿತ ಹಣ ಪಾವತಿಸಿ 7 ವರ್ಷವಾದರೂ, ಇದೂವರೆಗೆ ನೋಂದಣಿಯಾಗಿಲ್ಲ. ಕೂಡಲೇ ನಿವೇಶನವನ್ನು ಉದ್ಯಮಿಯ ಹೆಸರಿಗೆ ನೋಂದಾಯಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಸೂಚಿಸಿದರು.

ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರು ಸೋಮವಾರ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿ ಸಲ್ಲಿಕೆಯಾದ ಅಹವಾಲುಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳಲು ಆಯಾ ಜಿಲ್ಲಾ ಕೇಂದ್ರದಿಂದ ವಿಡಿಯೊ ಸಂವಾದದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಲಬುರಗಿಯ ಅಗ್ರೊ ಫುಡ್ ಪಾರ್ಕ್ ವ್ಯವಸ್ಥಾಪಕ ನಿರ್ದೇಶಕ ಮಲ್ಲೇಶಪ್ಪ ಕಲ್ಲೂರ ಅವರು ಜೇವರ್ಗಿಯ ಫುಡ್ ಪಾರ್ಕ್‌ನಲ್ಲಿ 2016ರಲ್ಲಿ ನಿವೇಶನ ಖರೀದಿಸಿದ್ದರು. ಅದಕ್ಕೆ ಬೇಕಾದ ಪೂರ್ಣ ಹಣ ಪಾವತಿಸಿದ್ದಾರೆ. ಇದುವರೆಗೂ ನಿವೇಶನ ತಮ್ಮ ಹೆಸರಿಗೆ ನೋಂದಣಿ ಆಗಿಲ್ಲ ಎಂದು ಜನಸ್ಪಂದನದಲ್ಲಿ ಸಿ.ಎಂ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಉದ್ಯಮಿ ಹೆಸರಿಗೆ ನಿವೇಶನ ನೋಂದಣಿ ಮಾಡಿಸಲು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ನಿರ್ದೇಶನ ನೀಡಿದರು.

‘ಬಿ.ಎಫ್.ಟಿ, ಕಾಯಕ ಮಿತ್ರಾ ಹುದ್ದೆಗೆ 2022ರಲ್ಲಿ ಅರ್ಜಿ ಸಲ್ಲಿಸಿರುವೆ. ತಾಲ್ಲೂಕು ಪಂಚಾಯಿತಿ ಇ.ಒ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರು ತಮ್ಮ ಅರ್ಜಿ ಪರಿಗಣಿಸುತ್ತಿಲ್ಲ. ದಯವಿಟ್ಟು ಉದ್ಯೋಗ ನೀಡಿ’ ಎಂದು ಕಲಬುರಗಿ ತಾಲ್ಲೂಕಿನ ಮೇಳಕುಂದಾ(ಬಿ) ಗ್ರಾಮದ ಮಮತಾ ಎನ್ನುವವರು ಸಿದ್ದರಾಮಯ್ಯ ಅವರನ್ನು ಕೋರಿದರು. ಈ ಕುರಿತು ಸೂಕ್ತವಾಗಿ ಪರಿಶೀಲಿಸುವಂತೆ ಅರ್ಜಿಯನ್ನು ಮುಖ್ಯಮಂತ್ರಿ ಕಚೇರಿಯಿಂದ ಕಲಬುರಗಿಗೆ ರವಾನಿಸಲಾಗಿದೆ.

ಪೂಜೆಗೆ ಅವಕಾಶ ಕೊಡಿ 

‘ಮೇಳಕುಂದಾ(ಬಿ) ಗ್ರಾಮದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಸರ್ವೆ ನಂ.114ರಲ್ಲಿ 30 ಎಕರೆ ಪ್ರದೇಶದಲ್ಲಿ ಮಾಳಿಂಗರಾಯ ದೇವಸ್ಥಾನವಿದೆ. ಅಲ್ಲಿ ತಲೆಮಾರುಗಳಿಂದ ಕುರುಬ ಸಮುದಾಯದವರು ದೇವಸ್ಥಾನದ ಪೂಜೆ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಅನ್ಯ ಸಮುದಾಯದವರು ಇದನ್ನು ಆಕ್ರಮಿಸಿಕೊಂಡು ಕುರುಬ ಸಮುದಾಯದ ಪೂಜಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ನಿಯಂತ್ರಿಸಿ ಕುರುಬ ಸಮುದಾಯದವರಿಗೆ ಮೊದಲಿನಂತೆ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮಾಳಿಂಗರಾಯ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಮುತ್ಯಾ ಅವರು ಮುಖ್ಯಮಂತ್ರಿ ಅವರನ್ನು ಕೋರಿದರು.

ಈ ಸಂಬಂಧ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಿ.ಎಂ. ಕಚೇರಿಯಿಂದ ಡಿ.ಸಿ. ಅವರಿಗೆ ನಿರ್ದೇಶನ ನೀಡಲಾಯಿತು.

‌ಒತ್ತುವರಿ, ರಸ್ತೆ ನಿರ್ಮಾಣ, ಗೃಹಲಕ್ಷ್ಮಿ ಯೋಜನೆಯಡಿ ಹಣ ಬಾರದಿರುವುದು, ಪಡಿತರ ಸಮಸ್ಯೆ, ವರ್ಗಾವಣೆಯಾದರೂ ಇನ್ನೂ ಬಿಡುಗಡೆ ಮಾಡದಿರುವ ಹೀಗೆ ಅನೇಕ ಸಮಸ್ಯೆಗಳು ಅಹವಾಲಿನಲ್ಲಿ ಕೇಳಿಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT