ಶನಿವಾರ, ನವೆಂಬರ್ 26, 2022
22 °C
ಚಿಂಚೋಳಿಯಲ್ಲಿ ಪಾದಯಾತ್ರೆ ಸಾಮಾರೋಪ ಸಮಾರಂಭದಲ್ಲಿ ಎಚ್.ಡಿ.ಕುಮಾರಸ್ವಾಮಿ

ಭರವಸೆ ಈಡೇರಿಸದಿದ್ದರೆ ಪಕ್ಷ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ (ಕಲಬುರಗಿ ಜಿಲ್ಲೆ): ‘ನಿಮ್ಮ ಮಕ್ಕಳಿಗೆ ಪಿಯುಸಿವರೆಗೆ ಉಚಿತ ಶಿಕ್ಷಣ, ಎಲ್ಲರಿಗೂ ಉಚಿತ ಆರೋಗ್ಯ, ಯುವಕರಿಗೆ ಉದ್ಯೋಗ, ರೈತರ ಏಳ್ಗೆ, ಪ್ರತಿ ಕುಟುಂಬಕ್ಕೂ ಸ್ವಂತ ಮನೆ ಕಟ್ಟಿಸಿಕೊಡಲು ಜೆಡಿಎಸ್ ಪಕ್ಷ ಪಂಚರತ್ನ ಯೋಜನೆ ರೂಪಿಸಿದೆ. ನೀವು ಒಂದು ಬಾರಿ ಪೂರ್ಣಪ್ರಮಾಣದ ಬಹುಮತದೊಂದಿಗೆ ಅಧಿಕಾರ ನೀಡಿ, ನಾನು ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇನೆ. ಇದಕ್ಕೆ ವಿಫಲವಾದರೆ ಜೆಡಿಎಸ್ ವಿಸರ್ಜಿಸುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ ಅವರು 25 ದಿನಗಳ ಕಾಲದ 500 ಕಿ.ಮೀ. ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಆರ್ಥಿಕವಾಗಿ ಸದೃಢರಾಗಲು ರೈತರ ಹೊಲಗಳಿಗೆ ನೀರು ಹರಿಯಬೇಕು. ರೈತರಿಗೆ ದಿನದ 24 ಗಂಟೆ ಉಚಿತ ತ್ರಿಫೇಸ್ ವಿದ್ಯುತ್ ದೊರೆಯಬೇಕು. ನಮ್ಮಲ್ಲಿ ಈಗ 3ರಿಂದ 4 ಗಂಟೆ ಮಾತ್ರ ನೀಡಲಾಗುತ್ತಿದೆ. ಆದರೆ ನಮ್ಮಲ್ಲಿ ತಯಾರಾದ ವಿದ್ಯುತ್ ಬೇರೆ ರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದರು.

‘ನೆರೆಯ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು 3 ವರ್ಷದಲ್ಲಿ ₹ 1,20,000 ಕೋಟಿ ಖರ್ಚು ಮಾಡಿ 23 ಜಿಲ್ಲೆಗಳ 45 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಿರುವಾಗ ನಮ್ಮಿಂದ ಏಕೆ ಈ ಕೆಲಸವಾಗಬಾರದು? ಇದಕ್ಕಾಗಿ ಜೆಡಿಎಸ್ ರೈತರಲ್ಲಿ ಅರಿವು ಮೂಡಿಸಲು ಜನತಾ ಜಲಧಾರೆ ಕಾರ್ಯಕ್ರಮ ನಡೆಸಿದೆ. ಈ ಕೆಲಸ ವಿಧಾನ ಸೌಧದ 3ನೇ ಮಹಡಿಯಲ್ಲಿ ಕುಳಿತವರು ಮಾಡಬೇಕಿದೆ. ಹೀಗಾಗಿ ನಿಮ್ಮ ಆಶೀರ್ವಾದ ಅಗತ್ಯವಾಗಿದೆ. ನೀವು ಒಮ್ಮೆ ಅವಕಾಶ ಕೊಡಿ’ ಎಂದು ಪದೇ ಪದೇ ಹೇಳಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಈಗಿರುವ ಸರ್ಕಾರ ಶೇ 40 ಪರ್ಸೆಂಟೇಜ್ ಪಡೆಯುವ ಲಪುಟರ ಸರ್ಕಾರ ಎಂದು ದೂರಿದರು.

‘ಯಡಿಯೂರಪ್ಪನವರಿಗೆ ಕೇಸುಗಳ ಚಿಂತೆ ಹೆಚ್ಚಾಗಿದೆ. ಹೀಗಾಗಿ ಕೊತ್ವಾಲ್ ರಾಮಚಂದ್ರ ನಿಲ್ಲುವ ಜಾಗದಲ್ಲಿ ಯಡಿಯೂರಪ್ಪ ನಿಲ್ಲುತ್ತಿದ್ದಾರೆ. ದೇವೇಗೌಡರು ಈ ನಾಡಿನ ರೈತರ, ಜನರ ಹಾಗೂ ಬಡವರ ಸೇವೆ ಮಾಡಿದ ಪ್ರತಿಫಲವಾಗಿ 97 ವರ್ಷವಾದರೂ ಇಂದಿಗೂ ರಾಜ್ಯದ ನೀರಾವರಿ ಯೋಜನೆಗಳ ಚಿಂತೆ ಮಾಡುತ್ತಿದ್ದಾರೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ, ‘ನಾನು ಜೆಡಿಎಸ್ ಸೇರಿ 20 ತಿಂಗಳಾಗಿದೆ. ಅಂದು ನನ್ನನ್ನು ಗೇಲಿ ಮಾಡಿದವರು ಇಂದು ಹುಬ್ಬೇರಿಸಿ ನೋಡುವಂತಾಗಿದೆ. ಇದಕ್ಕೆ ನಿಮ್ಮ ಬೆಂಬಲ ಸಹಕಾರ ಕಾರಣವಾಗಿದೆ. ನಾನು ಜನರ ಬಳಿಗೆ ಜನತೆಯ ಸಮಸ್ಯೆ ಅರಿಯಲು 500 ಕಿ.ಮೀ. ಪಾದಯಾತ್ರೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ನಿರಂತರ ಹೋರಾಟ ನಡೆಸಿದ್ದೇನೆ. ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಿದ್ದೇನೆ’ ಎಂದು ಹೇಳಿದರು.

‘ದೇವೇಗೌಡರ ಕಾಲದಲ್ಲಿ ಮಂಜೂರಾಗಿದ್ದ ಸಕ್ಕರೆ ಕಾರ್ಖಾನೆ ಈಗ ಇಥೆನಾಲ್ ಘಟಕವಾಗಿ ಪರಿವರ್ತನೆಯಾಗಿದೆ. ಇಲ್ಲಿನ ಬೆಣ್ಣೆತೊರಾ, ಮುಲ್ಲಾಮಾರಿ, ಚಂದ್ರಂಪಳ್ಳಿ ನೀರಾವರಿ ಯೋಜನೆಗಳಿಂದ ರೈತರ ಜಮೀನಿಗೆ ನೀರು ಹರಿಸಬೇಕಾಗಿದೆ. ಈವರೆಗೆ ಆಳಿದವರು ಹನಿ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಅರಣ್ಯ ಜಮೀನಿನಲ್ಲಿ ಅಕ್ರಮ ಸಾಗುವಳಿ ಮಾಡುತ್ತಿರುವ ಸಾವಿರಾರು ರೈತರಿಗೆ ಸಕ್ರಮಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನನ್ನ ಹೋರಾಟ ಮುಂದುವರೆಯುತ್ತದೆ’ ಎಂದರು.

ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಹುಲ್ ಯಾಕಾಪುರ ಮಾತನಾಡಿದರು.

ಶಾಸಕ ಸಾ.ರಾ. ಮಹೇಶ್, ಜೆಡಿೆಎಸ್ ಜಿಲ್ಲಾ ಘಟಕದ ಅಅಧ್ಯಕ್ಷ ಸುರೇಶ ಮಹಾಗಾಂವ್ಕರ್, ಮುಖಂಡರಾದ ಅಫಜಲಪುರದ ಶಿವಕುಮಾರ ನಾಟೀಕಾರ, ಆಳಂದನ ಮಹೇಶ್ವರಿ ವಾಲಿ, ಕಲಬುರಗಿ ಉತ್ತರದ ನಾಸೀರ್ ಹುಸೇನ್, ದಕ್ಷಿಣದ ಕೃಷ್ಣಾರೆಡ್ಡಿ, ಸೇಡಂನ ಬಾಲರಾಜ ಗುತ್ತೇದಾರ, ಬೀದರ್ ಜಿಲ್ಲಾ ಅಧ್ಯಕ್ಷ ರಮೇಶ ಪಾಟೀಲ, ಚಿಂಚೋಳಿ ತಾಲ್ಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ, ಕಾಳಗಿ ತಾಲ್ಲೂಕು ಅಧ್ಯಕ್ಷ ಗೌರಿಶಂಕರ ಸೂರವಾರ, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಹಣಮಂತ ಪೂಜಾರಿ, ಸಯ್ಯದ್ ನಿಯಾಜ್ ಅಲಿ, ನೀಲಕಂಠ ಕೆ.ಕೆ, ಎಸ್.ಕೆ ಮುಕ್ತಾರ್ ಮೊದಲಾದವರು ಇದ್ದರು.

ಅದ್ದೂರಿ ಸ್ವಾಗತ: ಇದಕ್ಕೂ ಮೊದಲು ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದ ನಾಯಕರಿಗೆ ಜೆಡಿಎಸ್ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಬಸವೇಶ್ವರ ವೃತ್ತದಿಂದ ಪೊಲೀಸ್ ಪರೇಡ್ ಮೈದಾನದವರೆಗೆ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರ ಮಧ್ಯೆ ಮೆರವಣಿಗೆ ನಡೆಯಿತು. ತಮಟೆಗಳ ಸದ್ದು ಹಾಗೂ ಪಟಾಕಿಗಳ ಕಲರವದ ಜತೆಗೆ ಇಲ್ಲಿನ ಬಸ್ ನಿಲ್ದಾಣದ ಬಳಿ ಜೆಸಿಬಿಗಳನ್ನು ನಿಲ್ಲಿಸಿ ಹೂಮಳೆಗರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು