ಸೋಮವಾರ, ಜನವರಿ 24, 2022
28 °C

ಜಲವಿವಾದ: ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಮಹದಾಯಿ ಹಾಗೂ ಕಾವೇರಿ ನದಿಗಳ ನೀರು ಬಳಕೆ ವಿಚಾರದಲ್ಲಿ ಬಹಳ ವರ್ಷಗಳಿಂದ ತಕರಾರುಗಳು ಏಳುತ್ತಲೇ ಇವೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ, ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು. ಈ ಮೂಲಕ ರಾಜಕೀಯವಾಗಿಯೇ ಇದಕ್ಕೆ ಪರಿಹಾರ ನೀಡಬೇಕು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ.ನೀಲಾ ಆಗ್ರಹಿಸಿದ್ದಾರೆ.

‘ಕುಡಿಯುವ ನೀರಿನ ಕೊರತೆ ನೀಗಿಸಲು ಹಾಗೂ ವಿದ್ಯುತ್‌ ಉತ್ಪಾದನೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಕಳಸಾ–ಬಂಡೂರಿ ನಾಲಾ ಯೋಜನೆ ಹಾಗೂ ಮೇಕೆದಾಟು ಯೋಜನೆ ರೂಪಿಸಿದೆ. ಆದರೆ, ಈ ಯೋಜನೆಗಳ ಜಾರಿಗೆ ಸಂಬಂಧಿಸಿ ಮಹದಾಯಿ ಹಾಗೂ ಕಾವೇರಿ ನದಿ ಪ್ರದೇಶದ ರಾಜ್ಯಗಳು ಎತ್ತಿರುವ ತಕರಾರುಗಳಿಗೆ ಪರಿಹಾರ ಹುಡುಕದೇ ಅವುಗಳು ಜಾರಿಯಾಗುವುದು ಸಾಧ್ಯವಿಲ್ಲ. ಇದಕ್ಕೆ ರಾಜಕೀಯ ವಲಯದಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.

‘ಒಕ್ಕೂಟ ಸರ್ಕಾರ ಈ ಕುರಿತು ಕ್ರಮವಹಿಸದೇ ಇರುವುದರಿಂದ ಜಲವಿವಾದಗಳು ದೀರ್ಘ ಕಾಲದಿಂದ ಉಳಿದಿವೆ. ಇನ್ನೂ ಉದಾಸೀನ ಸಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಒತ್ತಡ ಹೇರುವಲ್ಲೂ ಉದಾಸೀನ ತೋರುವುದು ಜನವಿರೋಧಿ ನಿಲುವಾಗುತ್ತದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳ ಭಾಗವಾಗಿಯೇ ಇದು ಕಾಣಿಸುತ್ತದೆ. ಎಲ್ಲ ಸಾರ್ವಜನಿಕ ವಲಯದ ಕುಡಿಯುವ ಹಾಗೂ ನೀರಾವರಿ ಯೋಜನೆಗಳನ್ನು, ವಿದ್ಯುತ್ ಉತ್ಪಾದನೆಯನ್ನು ಖಾಸಗೀಕರಣಕ್ಕೆ ಒಳಪಡಿಸುವ ದುರುದ್ದೇಶ ಕೂಡ ಸರ್ಕಾರದ ಈ ಧೋರಣೆಯ ಹಿಂದಿದೆ’ ಎಂದೂ ದೂರಿದ್ದಾರೆ.

‘ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳ ಜೊತೆ ಮತ್ತು ಮೇಕೆದಾಟು ವಿಚಾರದಲ್ಲಿ ತಮಿಳುನಾಡು ರಾಜ್ಯದ ಜೊತೆ ಮಾತನಾಡಬೇಕು. ಅವರಿಗಿರುವ ಆತಂಕಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಧಾನಿ ಮುಂದಾಗಬೇಕು. ಒಕ್ಕೂಟ ವ್ಯವಸ್ಥೆಯಲ್ಲಿರುವ ಎಲ್ಲ ಸರ್ಕಾರಗಳೂ ಪಕ್ಷಭೇದ ಮರೆತು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು’ ಎಂದೂ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು