ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ: ಗ್ರಾಮ ಒನ್‍ ಕೇಂದ್ರಕ್ಕೆ ಬರದ ಕಮಿಷನ್‌, ಕಂಪ್ಯೂಟರ್‌ ನಿರ್ವಹಣೆ ಸಂಕಷ್ಟ

Published 27 ಆಗಸ್ಟ್ 2023, 6:26 IST
Last Updated 27 ಆಗಸ್ಟ್ 2023, 6:26 IST
ಅಕ್ಷರ ಗಾತ್ರ

ಯಡ್ರಾಮಿ: ರಾಜ್ಯ ಸರ್ಕಾರ, 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಗ್ರಾಮ ಒನ್‌ ಕೇಂದ್ರಗಳನ್ನು ತೆರೆದಿದೆ. ಆದರೆ ಗ್ರಾಮ ಒನ್‌ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ನೀಡಬೇಕಿರುವ ಕಮಿಷನ್‌ ಹಣವನ್ನು ನೀಡುತ್ತಿಲ್ಲ. ಇದು ಸಿಬ್ಬಂದಿಯನ್ನು ಸಂಕಷ್ಟಕ್ಕೆ ದೂಡಿದೆ.

ತಾಲ್ಲೂಕಿನಲ್ಲಿ ಒಟ್ಟು 16 ಗ್ರಾಮ ಪಂಚಾಯಿತಿಗಳಿದ್ದು, 18 ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್‌, ಪ್ಯಾನ್‍ ಕಾರ್ಡ್‌, ಬೆಳೆ ವಿಮೆ ನೋಂದಣಿ, ಆಯುಷ್ಮಾನ್ ಕಾರ್ಡ್ ಹಾಗೂ ಇನ್ನಿತರ ಸೇವೆಗಳನ್ನು ಒದಗಿಸಲಾಗುತ್ತದೆ. ಸದ್ಯ ಗೃಹಜ್ಯೋತಿ, ಗೃಹಲಕ್ಷ್ಮಿ, ಯೋಜನೆಗಳ ಫಲಾನುಭವಿಗಳ ನೋಂದಣಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಇನ್ನೂ ಕಂಪ್ಯೂಟರ್ ಆಪರೇಟರ್‌ಗಳ ವೇತನ, ವಿದ್ಯುತ್, ಪ್ರಿಂಟರ್ ಸೌಕರ್ಯವನ್ನು ನೀಡಿಲ್ಲ. ಆದರೆ ಸೇವಾ ಕೇಂದ್ರಗಳಲ್ಲಿ ಎಲ್ಲ ಖರ್ಚು-ವೆಚ್ಚವನ್ನೂ ಆಪರೇಟರ್‌ಗಳು ಭರಿಸಿಕೊಳ್ಳಬೇಕಿದೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ನಮ್ಮ ಶ್ರಮಕ್ಕೆ ಸರಿಯಾದ ಪ್ರತಿಫಲ ದೊರೆಯುತ್ತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಉಚಿತವಾಗಿ ನೋಂದಣಿ ಮಾಡಿದರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ಸರ್ಕಾರದ ಯೋಜನೆಗಳ ನೋಂದಣಿಗೆ ಸರ್ಕಾರ ಹೆಚ್ಚಿನ ಕಮಿಷನ್ ಹಣ ನೀಡಬೇಕು ಎಂದು ಕಂಪ್ಯೂಟರ್‌ ಆಪರೇಟರ್‌ಗಳು ಒತ್ತಾಯಿಸಿದ್ದಾರೆ.

ಸೇವಾ ಶುಲ್ಕ ಪಡೆಯಲು ಅನುಮತಿ ನೀಡಿ: ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಸೇವಾ ಶುಲ್ಕ ವಿಧಿಸಲು ಅನುಮತಿ ನೀಡಬೇಕು. ಸದ್ಯ ಒಂದು ಅರ್ಜಿಗೆ ಸರ್ಕಾರದಿಂದ ₹12 ನೀಡುತ್ತಿದ್ದು, ಅದರಲ್ಲಿ 5 ಪೇಪರ್ ಪ್ರಿಂಟಿಂಗ್ ಖರ್ಚಾಗುತ್ತಿದೆ. ಉಳಿದ 7 ರೂಪಾಯಿಯಲ್ಲಿ ಸಿಬ್ಬಂದಿ ಸೇವಾ ಕೇಂದ್ರದ ನಿರ್ವಹಣೆ ನಡೆಸುವುದು ಕಷ್ಟವಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕಂಪ್ಯೂಟರ್‌ ಆಪರೇಟರ್‌ ಒಬ್ಬರು.

ತಿಂಗಳಿಗೆ ಇಂಟರ್‌ನೆಟ್‌ ಶುಲ್ಕ ಸುಮಾರು ₹1,350 ದಾಟುತ್ತಿದೆ. ಈಗಾಗಲೇ ಸರ್ಕಾರದ ಹಲವು ಯೋಜನೆಗೆ ಫಲಾನುಭವಿಗಳಿಂದ ಹಣ ಪಡೆದಿಲ್ಲ. ಹೀಗಾಗಿ, ಗೃಹಲಕ್ಷ್ಮಿ ಯೋಜನೆಗೆ ಉಚಿತವಾಗಿ ನೋಂದಣಿ ಮಾಡುತ್ತಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಕೇಂದ್ರದ ಕಟ್ಟಡ ಬಾಡಿಗೆ ಹಾಗೂ ಇತರೆ ಖರ್ಚು, ವೆಚ್ಚ ನಿಭಾಯಿಸಲು ಸಮಸ್ಯೆ ಆಗುತ್ತಿದೆ. ಸರ್ಕಾರ ಗೌರಧನ ನೀಡಿದರೆ ಅನುಕೂಲವಾಗುತ್ತದೆ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT