ಬುಧವಾರ, ಮಾರ್ಚ್ 29, 2023
27 °C
55 ಸದಸ್ಯ ಬಲದ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಇಲ್ಲ ಬಹುಮತ, ಸೂತ್ರಧಾರನ ಸ್ಥಾನದಲ್ಲಿ ಜೆಡಿಎಸ್‌

ಜೆಡಿಎಸ್‌ ಅತ್ತಲೋ ಇತ್ತಲೋ? ಇನ್ನೂ ಮುಗಿಯದ ಕಲಬುರಗಿ ಮೇಯರ್‌ ಚುನಾವಣೆ ಹಗ್ಗಜಗ್ಗಾಟ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಅಧಿಸೂಚನೆ ಹೊರಬೀಳುತ್ತಿದ್ದಂತೆ, ನಗರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಬಿರುಸುಗೊಂಡಿವೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಪಾಲಿಕೆಯಲ್ಲಿ ಗದ್ದುಗೆ ಏರಲು ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ತೀವ್ರ ಕಸರತ್ತು ನಡೆಸಿದ್ದಾರೆ.

ಒಟ್ಟು 55 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ 27, ಬಿಜೆಪಿ 24 (ಒಬ್ಬ ಪಕ್ಷೇತರ ಸೇರಿ), ಜೆಡಿಎಸ್‌ 4 ಸ್ಥಾನಗಳನ್ನು ಹೊಂದಿವೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕಿ ಖನೀಜ್‌ ಫಾತಿಮಾ ಅವರು ಸೇರಿ ಕಾಂಗ್ರೆಸ್‌ ಬಲ 29 ಆಗುತ್ತದೆ. ಅದೇ ರೀತಿ ಬಿಜೆಪಿಯ 24 ಪಾಲಿಕೆ ಸದಸ್ಯರು, ಸಂಸದ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಸುನೀಲ ವಲ್ಯಾಪುರೆ ಹಾಗೂ ಶಶೀಲ್‌ ನಮೋಶಿ ಅವರ ಮತಗಳೂ ಸೇರಿ ಒಟ್ಟು 30 ಮತಗಳಿವೆ. ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದಿದೆ.

55 ಪಾಲಿಕೆ ಸದಸ್ಯರು ಹಾಗೂ ಎಂಟು ಇತರ ಜನಪ್ರತಿನಿಧಿಗಳು ಸೇರಿ ಒಟ್ಟು ಪಾಲಿಕೆಯ ಮತದ ಸಾಮರ್ಥ್ಯ 63ಕ್ಕೆ ಏರಿಕೆಯಾಗಿದೆ. ಮೇಯರ್‌ ಆಯ್ಕೆಗೆ 33 ಮತಗಳು ಬೇಕು. ಹೀಗಾಗಿ, ಕಾಂಗ್ರೆಸ್‌ ನಾಲ್ಕು ಹಾಗೂ ಬಿಜೆಪಿಗೆ ಮೂರು ಮತಗಳ ಅವಶ್ಯಕತೆ ಇದೆ.

ಸದ್ಯ ತನ್ನ ಬಳಿ ನಾಲ್ಕೇ ನಾಲ್ಕು ಸ್ಥಾನಗಳನ್ನು ಇಟ್ಟುಕೊಂಡಿರುವ ಜೆಡಿಎಸ್‌ ಈಗ ‘ಸೂತ್ರಧಾರ’ನಾಗಿ ಹೊರಹೊಮ್ಮಿದೆ.‌

ಬಿಜೆಪಿಯತ್ತ ಒಲವು: ‘ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸುವುದೇ ‘ಲಾಭ’ದಾಯಕ ಎಂದು ಜೆಡಿಎಸ್‌ ನಿರ್ಧರಿಸಿದೆ. ಈ ಬಗ್ಗೆ ರಾಜ್ಯಮಟ್ಟದ ನಾಯಕರಲ್ಲೂ ಚರ್ಚೆಗಳು ನಡೆದು ಈಗಾಗಲೇ ನಿರ್ಧಾರ ಮಾಡಿಯಾಗಿದೆ. ಮೇಯರ್‌ ಅಥವಾ ಉಪಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಷರತ್ತಿನ ಮೇಲೆ ಬಿಜೆಪಿಗೆ ಬೆಂಬಲ ನೀಡಲು ನಾಯಕರು ನಿರ್ಧರಿಸಿದ್ದಾರೆ’ ಎಂದು ಪಕ್ಷದ ನಂಬಲರ್ಹ ಮೂಲಗಳು ಮಾಹಿತಿ ನೀಡಿವೆ.

ಸ್ಥಳೀಯ ಮುಖಂಡರೇನಂತಾರೆ?

ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಜನರು ಬಿಜೆಪಿಯನ್ನೇ ಬೆಂಬಲಿಸಿದ್ದು ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ನಾವು ಪಾಲಿಕೆ ಅಧಿಕಾರ ಬೇರೊಬ್ಬರಿಗೆ ಬಿಟ್ಟುಕೊಡುವುದಿಲ್ಲ. ಈಗಾಗಲೇ ಜೆಡಿಎಸ್‌ನ ಸ್ಥಳೀಯ ಮುಖಂಡರು ಹಾಗೂ ರಾಜ್ಯಮಟ್ಟದ ಮುಖಂಡರ ಜೊತೆಮಾತುಕತೆ ನಡೆದಿದೆ. ನೂರಕ್ಕೆ ನೂರಷ್ಟು ಬಿಜೆಪಿ ತೆಕ್ಕೆಗೇ ಪಾಲಿಕೆ ಬರಲಿದೆ.

–ದತ್ತಾತ್ರೇಯ ಪಾಟೀಲ ರೇವೂರ, ಶಾಸಕ

*

ಪಾಲಿಕೆಯಲ್ಲಿ ಕಾಂಗ್ರೆಸ್‌ ಈ ಬಾರಿ ಕೂಡ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮುಖಂಡರು, ಶಾಸಕರು, ಸಂಸದರು, ವಿಧಾನ ‍ಪರಿಷತ್‌ ಸದಸ್ಯರ ಮತಗಳು ಇವೆ ಎಂಬ ಕಾರಣಕ್ಕೆ ಜಿದ್ದಿಗೆ ನಿಂತಿದ್ದಾರೆ ಹೊರತು ಕಾಂಗ್ರೆಸ್‌ಗೆ ಸಮಾನ ಸ್ಥಾನಗಳು ಅವರಿಗೆ ಸಿಕ್ಕಿಲ್ಲ. ಈ ಬಗ್ಗೆ ಸೋಮವಾರ ಪಕ್ಷದ ಹಿರಿಯ ಮುಖಂಡರು ಚರ್ಚೆ ನಡೆಸಿ, ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ.

–ಖನೀಜ್‌ ಫಾತಿಮಾ, ಶಾಸಕಿ‌

*

ಕಲಬುರಗಿ ಪಾಲಿಕೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ಕೊಡಬೇಕು ಎಂಬುದನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರೇ ನಿರ್ಧರಿಸುವರು. ಇನ್ನೆರಡು ದಿನಗಳಲ್ಲಿ ಸ್ಥಳೀಯ ಮುಖಂಡರು ಹೋಗಿ ಹಿರಿಯ ನಾಯಕರನ್ನು ಭೇಟಿ ಮಾಡಿ, ಮತ್ತೊಮ್ಮೆ ಪರಿಸ್ಥಿತಿಯನ್ನು ವಿವರಿಸುತ್ತೇವೆ.

–ಕೇದಾರಲಿಂಗಯ್ಯ ಹಿರೇಮಠ, ಅಧ್ಯಕ್ಷ‌, ಜೆಡಿಎಸ್‌ ಜಿಲ್ಲಾ ಘಟಕ

*

ಜೆಡಿಎಸ್‌ನಿಂದ ಗೆದ್ದಿರುವ ನಾಲ್ವರಲ್ಲಿ ಒಬ್ಬರು ಮಹಿಳೆ ಇದ್ದಾರೆ. ಹೀಗಾಗಿ, ಮೇಯರ್‌ ಸ್ಥಾನವನ್ನು ಬಿಟ್ಟುಕೊಡುವ ಪಕ್ಷಕ್ಕೇ ನಾವು ಬೆಂಬಲ ನೀಡಬೇಕು ಎಂಬ ವಿಚಾರವನ್ನು ನಮ್ಮ ಹಿರಿಯ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಈಗಲೂ ಪಕ್ಷದ ಸ್ಥಳೀಯ ಮುಖಂಡರಲ್ಲಿ ಇದೇ ನಿಲುವು ಇದೆ.

–ನಾಸಿರ್‌ ಹುಸೇನ್‌ ಉಸ್ತಾದ್‌, ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್‌ ಅಲ್ಪಸಂಖ್ಯಾತರ ಘಟಕ

*

27 ಮಂದಿ ಪೈಕಿ ಯಾರಾಗಲಿದ್ದಾರೆ ‍ಪ್ರಥಮಪ್ರಜೆ?

1984ನೇ ಸಾಲಿನಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಈವರೆಗೆ 32 ಮೇಯರ್‌ಗಳು ಆಡಳಿತ ನಡೆಸಿದ್ದಾರೆ. ಇದರಲ್ಲಿ ಮಹಿಳಾ ಮೇಯರ್‌ಗಳ ಸಂಖ್ಯೆ ಕೇವಲ ಆರು. ಈ ಬಾರಿ ಮೇಯರ್‌ ಸ್ಥಾನ ಮತ್ತೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಪಾಲಿಕೆಯಲ್ಲಿ ಮತ್ತೊಮ್ಮೆ ಮಹಿಳಾ ಪಾರುಪತ್ಯ ಆರಂಭವಾಗಲಿದೆ.

ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಂದರೆ 27 ವನಿತೆಯರು ಚುನಾಯಿತರಾಗಿದ್ದಾರೆ. ಪ್ರಸಕ್ತ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿದ್ದರ ಪರಿಣಾಮವಿದು. ಈ ಹಿಂದೆ ಶೇ 33 ಸ್ಥಾನಗಳು ಮಾತ್ರ ಮೀಸಲಿರುತ್ತಿದ್ದ ಕಾರಣ, 19 ಸದಸ್ಯೆಯರು ಮಾತ್ರ ಆಯ್ಕೆಯಾಗುತ್ತಿದ್ದರು.

ಈ ಬಾರಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಮೇಯರ್‌ ಗೌನ್‌ ಯಾರ ಹೆಗಲೇರಲಿದೆ ಎಂಬ ಗುಟ್ಟು ಇನ್ನೂ ಹಾಗೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು