ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ : ಸ್ಕೇಟಿಂಗ್‌ಗೆ ಬೇಕು ಮೂಲಸೌಲಭ್ಯದ ಬಲ

Published 4 ಜುಲೈ 2023, 6:07 IST
Last Updated 4 ಜುಲೈ 2023, 6:07 IST
ಅಕ್ಷರ ಗಾತ್ರ

ಮಲ್ಲಪ್ಪ ಸಿ. ಪಾರೇಗಾಂವ

ಕಲಬುರಗಿ: ಜಿಲ್ಲೆಯಲ್ಲಿ ಸ್ಕೇಟಿಂಗ್‌ಗಾಗಿ ರೋಲರ್‌ ರಿಂಕ್‌ ಇಲ್ಲ, ಅಭ್ಯಾಸಕ್ಕೆ ಸೂಕ್ತ ಮೂಲಸೌಲಭ್ಯಗಳಿಲ್ಲ. ಹೀಗಿದ್ದರೂ ಜಿಲ್ಲೆಯ ಪ್ರತಿಭೆಗಳು ಗೆಲ್ಲುವ ಪದಕಗಳಿಗೆ ಮಾತ್ರ ಬರವಿಲ್ಲ. ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು, ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿರುವ ಸಿಂಥೆಟಿಕ್‌ ರೋಲರ್‌ ರಿಂಕ್‌ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಜಿಲ್ಲೆಯ ರೋಲರ್‌ ಸ್ಕೇಟರ್‌ಗಳ ಒತ್ತಾಯವಾಗಿದೆ.

ಹೌದು, ಸಾಕಷ್ಟು ಇಲ್ಲಗಳ ನಡುವೆಯೇ ಜಿಲ್ಲೆಯ ಪ್ರತಿಭೆಗಳ ಸಾಧನೆ ಗಮನಾರ್ಹವಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಜಿಲ್ಲೆಯ ಪ್ರತಿಭೆಗಳು 27 ಪದಕಗಳನ್ನು ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ರೋಲರ್‌ ಸ್ಕೇಟಿಂಗ್‌ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ಪ್ರತಿಭೆ ಸಂಜನಾ ಬಿ. ಪಾಟೀಲ ಅವರು, ಕಂಚಿನ ಪದಕ ಗೆದ್ದಿರುವುದು ತಾಜಾ ಉದಾಹರಣೆ.

ಡಾಂಬರು ಅಂಗಳದಲ್ಲೇ ಅಭ್ಯಾಸ

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ವಾಹನಗಳ ಪಾರ್ಕಿಂಗ್‌ಗಾಗಿ ಇರಿಸಲಾಗಿದ್ದ ಜಾಗವನ್ನು ಸ್ಕೇಟಿಂಗ್‌ ತರಬೇತಿಗಾಗಿ ನೀಡಲಾಗಿದೆ. ನಿತ್ಯ ಬೆಳಿಗ್ಗೆ 5.30ರಿಂದ 7.30ರವರೆಗೆ ಹಾಗೂ ಸಂಜೆ 6.30ರಿಂದ 8.30ರವರೆಗೆ ತರಬೇತಿ ನೀಡಲಾಗುತ್ತದೆ. 6ರಿಂದ 18 ವರ್ಷ ದೊಳಗಿನ 100ಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ತರಬೇತಿ ಪಡೆಯುವ ಮಕ್ಕಳು, ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಜಿಎಫ್‌ಐ), ವಲಯ ಮಟ್ಟದ ಸ್ಕೇಟಿಂಗ್‌ ಸ್ಪರ್ಧೆ, ಸಿಬಿಎಸ್‌ಇ ಸೇರಿದಂತೆ ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧೆ ಮಾಡುತ್ತಾರೆ. ರೋಲರ್‌ ಸ್ಕೇಟಿಂಗ್‌ನಲ್ಲಿ ಕಾರ್ಡ್‌ (ಮುಂದೆರಡು ಹಿಂದೆರಡು ಚಕ್ರ) ಹಾಗೂ ಇನ್‌ಲೈನ್‌ (ಒಂದೇ ಸಾಲಿನಲ್ಲಿ ನಾಲ್ಕು ಚಕ್ರ) ಎಂಬ ಎರಡು ವಿಧಗಳಿವೆ.

ಮಕ್ಕಳಿಗೆ, ಸದ್ಯ ಡಾಂಬರು ಅಂಗಳದಲ್ಲಿಯೇ ತರಬೇತಿ ನೀಡಲಾಗುತ್ತಿದೆ. ನೂರಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆಯುತ್ತಿದ್ದು, ಗುಣಮಟ್ಟದ ತರಬೇತಿಗಾಗಿ ಮೈದಾನ ಸೇರಿದಂತೆ ಹಲವು ಮೂಲಸೌಲಭ್ಯಗಳ ಅಗತ್ಯವಿದೆ. ಸರ್ಕಾರ ಶೀಘ್ರ ಅನುದಾನ ಬಿಡುಗಡೆಗೊಳಿಸಿದರೆ, ಜಿಲ್ಲೆಯ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ. ಜೇವರ್ಗಿ ತಾಲ್ಲೂಕಿನ ಸುಮಾರು 30 ಮಕ್ಕಳು, ವಾರಕ್ಕೊಮ್ಮೆ ಇಲ್ಲಿಗೆ ಬಂದು ತರಬೇತಿ ಪಡೆಯುತ್ತಾರೆ ಎಂದು ಜಿಲ್ಲಾ ಸ್ಕೇಟಿಂಗ್‌ ಸಂಸ್ಥೆ ಅಧ್ಯಕ್ಷ ವಿಕ್ರಮ್ ದರ್ಶನಾಪುರ ಹಾಗೂ ಮುಖ್ಯ ಕಾರ್ಯದರ್ಶಿ ಜಯಕುಮಾರ ಮಾಹಿತಿ ನೀಡಿದರು.

ಬೆಂಗಳೂರಿನ ರಿಂಕ್‌ನಲ್ಲಿ ತರಬೇತಿ

ಜಿಲ್ಲೆಯಲ್ಲಿ ಸಿಂಥೆಟಿಕ್‌ ರೋಲರ್‌ ರಿಂಕ್‌ ಇಲ್ಲ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗಳಿಗೆ ಜಿಲ್ಲೆಯ ಪ್ರತಿಭೆಗಳು ಆಯ್ಕೆಯಾದರೆ, ಒಂದು ವಾರ ಮೊದಲು ಬೆಂಗಳೂರಿಗೆ ತೆರಳಿ, ಅಲ್ಲಿನ ರೋಲರ್ ರಿಂಕ್‌ನಲ್ಲಿ ತರಬೇತಿ ನೀಡುತ್ತೇವೆ. ಅಲ್ಲಿ ಒಂದು ತಾಸಿಗೆ ₹ 1000 ನೀಡುತ್ತೇವೆ ಎಂದು ವಿಕ್ರಮ್‌ ದರ್ಶನಾಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT