ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ | ಎಕ್ಸ್–ರೇ ಕಾರ್ಯಸ್ಥಗಿತ: ರೋಗಿಗಳ ಪರದಾಟ

ಸಾರ್ವಜನಿಕ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಹುದ್ದೆಗೆ ನೇಮಕವಿಲ್ಲ
Published 23 ಮಾರ್ಚ್ 2024, 15:27 IST
Last Updated 23 ಮಾರ್ಚ್ 2024, 15:27 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ತಿಂಗಳಿಂದ ಎಕ್ಸ್‌ರೇ ಯಂತ್ರವನ್ನು ನಿರ್ವಹಿಸುವ ಟೆಕ್ನಿಷಿಯನ್‌ ಇಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.

ಇಡೀ ತಾಲ್ಲೂಕಿಗೆ ಸರ್ಕಾರದಿಂದ ಒಂದೇ ಎಕ್ಸ್‌ರೇ ಯಂತ್ರ ಇರುವುದರಿಂದ, ಸುಮಾರು 90 ಗ್ರಾಮಗಳ ರೋಗಿಗಳು ಇಲ್ಲಿಗೆ ಬರುತ್ತಾರೆ. ಆದರೆ ಎಕ್ಸ್‌ರೇ ಯಂತ್ರವಿದ್ದರೂ, ಟೆಕ್ನಿಷಿಯನ್ ಇಲ್ಲದ್ದರಿಂದ ಸೇವೆ ದೊರೆಯುತ್ತಿಲ್ಲ. ಹೀಗಾಗಿ ನಿತ್ಯ ನೂರಾರು ರೋಗಿಗಳು ಆಸ್ಪತ್ರೆಗೆ ಬಂದು ಬರಿಗೈಲಿ ಮರಳಬೇಕಾಗಿದೆ. ಹೊರಗಡೆ ಹೋದರೆ ನೂರಾರು ರೂಪಾಯಿ ಕೇಳುತ್ತಾರೆ. ಸದ್ಯ ಬರ ಪರಿಸ್ಥಿತಿಯಿದ್ದು, ಕೈಯಲ್ಲಿ ಹಣವಿಲ್ಲ. ಅವರಿಗೆಲ್ಲಿಂದ ಕೊಡುವುದು ಎಂದು ಎಕ್ಸ್‌ರೇ ಪಡೆಯುವುದಕ್ಕಾಗಿ ಬಂದಿದ್ದ ರೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ನಾನು ಶನಿವಾರ ಎಕ್ಸರೇ ಪಡೆಯುವುದಕ್ಕೆಂದು ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಸಿಬ್ಬಂದಿಯನ್ನು ವಿಚಾರಿಸಿದಾಗ ಎಕ್ಸರೇ ಯಂತ್ರ ಸರಿಯಾಗಿದೆ. ಆದರೆ ಅದನ್ನು ನಿರ್ವಹಿಸುವ ಟೆಕ್ನಿಷಿಯನ್ ಇಲ್ಲ. ಹೀಗಾಗಿ ಎಕ್ಸ್‌ರೇ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಸಿಬ್ಬಂದಿ ಹೇಳಿದರು. ಹೀಗಾದರೆ ಹೇಗೆ ತಾಲ್ಲೂಕಿಗೆ ಇರುವುದು ಒಂದೇ ಎಕ್ಸ್‌ರೇ ಯಂತ್ರ. ರೋಗಿಗಳು ನಿತ್ಯ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಹೀಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಶೀಘ್ರ ಎಕ್ಸರೇ ಯಂತ್ರ ನಿರ್ವಹಣೆಗಾಗಿ ಟೆಕ್ನಿಷಿಯನ್ ನೇಮಕ ಮಾಡಬೇಕು ಎಂದು ರೋಗಿ ಸಿದ್ಧನೂರು ಗ್ರಾಮಸ್ಥ ಮಹಿಬೂಬ್ ಸಿದ್ದುನೂರು ಆಗ್ರಹಿಸಿದರು.

ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ವಿನೋದ್ ರಾಥೋಡ್ ಅವರು, ‘ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸರೇ ನೋಡಿಕೊಳ್ಳುವ ಟೆಕ್ನಿಷಿಯನ್ ಕೊರತೆ ಇದೆ. ಹೀಗಾಗಿ ಹಲವಾರು ಬಾರಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಅವರು ಎರಡು ಮೂರು ದಿನಗಳಲ್ಲಿ ಜೇವರ್ಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಿಂದ ಯರವಲು ಸೇವೆ ಟೆಕ್ನಿಷಿಯನ್ ಒಬ್ಬರನ್ನು ಕಳುಹಿಸಿ ಕೊಡಲಾಗುವುದ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದಷ್ಟು ಬೇಗನೆ ಕಳಿಸಿಕೊಟ್ಟರೆ ಅನುಕೂಲವಾಗುತ್ತದೆ. ದಿನಾಲು ರೋಗಿಗಳು ಬರುತ್ತಾರೆ. ನಮಗೂ ತೊಂದರೆ ಆಗಿದೆ ಎಂದು ತಿಳಿಸಿದರು.

ಹೊರಗಡೆ ಖಾಸಗಿ ಆಸ್ಪತ್ರೆಗಳಲ್ಲಿ ಎಕ್ಸರೇ ಮಾಡಿಸಿಕೊಳ್ಳುವುದು ಬಹಳ ದುಬಾರಿಯಾಗಿದ್ದು, ಬಡವರಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಾಯಂ ಆಗಿ ಎಕ್ಸರೇ ಟೆಕ್ನಿಷಿಯನ್ ಕಳಿಸಿಕೊಡಬೇಕು. ತಾಲೂಕು ಕೇಂದ್ರದಲ್ಲಿ ಎಕ್ಸರೇ ನೋಡಿಕೊಳ್ಳುವ ಟೆಕ್ನಿಷಿಯನ್ ಇಲ್ಲ ಎಂದರೆ ಹೇಗೆ? ಎಷ್ಟು ಜನರಿಗೆ ತೊಂದರೆ ಆಗುತ್ತದೆ. ಅದರ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು. ಬಡವರಿಗೆ ಸಾಕಷ್ಟು ತೊಂದರೆ ಆಗುತ್ತದೆ ಎಂದು ಜೇವರ್ಗಿ(ಬಿ) ಗ್ರಾಮದ ಹನುಮಂತ ರಾಯ ಬಿರಾದಾರ ಹಾಗೂ ಶಿರವಾಳ ಗ್ರಾಮದ ವಿಜಯ್ ಕುಮಾರ್ ದೊಡ್ಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT