ಹೈದರಾಬಾದ್‌ ಕರ್ನಾಟಕದ ಮೇಲೂ ಮಮತೆ ಮೆರೆದಿದ್ದ ಸಿದ್ಧಗಂಗಾ ಶ್ರೀ

7

ಹೈದರಾಬಾದ್‌ ಕರ್ನಾಟಕದ ಮೇಲೂ ಮಮತೆ ಮೆರೆದಿದ್ದ ಸಿದ್ಧಗಂಗಾ ಶ್ರೀ

Published:
Updated:
Prajavani

ಕಲಬುರ್ಗಿ: ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಹೈದರಾಬಾದ್‌ ಕರ್ನಾಟಕದ ಮೇಲೂ ವಿಶೇಷ ಕಾಳಜಿ ಹೊಂದಿದ್ದರು. ಭಕ್ತರ ಒತ್ತಾಸೆಯ ಮೇರೆಗೆ ಇಳಿ ವಯಸ್ಸಿನಲ್ಲಿಯೂ ಸಾಕಷ್ಟು ಬಾರಿ ಇಲ್ಲಿಗೆ ಬಂದು ಹೋಗಿದ್ದರು. ಈ ಭಾಗದ ಸರ್ವಧರ್ಮಗಳ ಬಡ ಮಕ್ಕಳಿಗೂ ತಮ್ಮ ಮಠದಲ್ಲಿ ಆಶ್ರಯ ಕಲ್ಪಿಸಿ ಅವರಿಗೆ ವಿದ್ಯಾದಾನ ಮಾಡಿದ್ದರು.

ಅವರ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವ ಹಲವಾರು ಇಂದು ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಳೆಯ ವಿದ್ಯಾರ್ಥಿ ಸಂಘಗಳನ್ನು ಕಟ್ಟಿಕೊಂಡು ತಮ್ಮ ಕೈಲಾದ ಮಟ್ಟಿಗೆ ಸಮಾಜ ಸೇವೆಯಲ್ಲಿ ತೊಡಗಿ ‘ಗುರುದಕ್ಷಿಣೆ’ ನೀಡುತ್ತಿದ್ದಾರೆ.

‘ನಮ್ಮ ಭಾಗದಿಂದ ಬಡ ಮಕ್ಕಳನ್ನು ಕಳಿಸುತ್ತಿದ್ದೆವು. ತಮ್ಮ ಮಠದಲ್ಲಿಟ್ಟುಕೊಂಡು ಅವರಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು. ಅಂತಹ ಮಕ್ಕಳಲ್ಲಿ ಮುಸ್ಲಿಮರೂ ಇದ್ದರು. ಶ್ರೀಗಳು ಎಂದೂ ಜಾತಿಯನ್ನು ನೋಡಿದವರಲ್ಲ. ಮಾನವ ಕುಲವೊಂದೇ ಎಂಬುದು ಅವರ ನಿಲುವಾಗಿತ್ತು’ ಎಂದು ಈ ಭಾಗದ ಬಹುಪಾಲು ಮಠಾಧೀಶರು, ಹಿರಿಯರು ಸ್ಮರಿಸುತ್ತಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ನಾಲವಾರ ಮಠದ ರಥೋತ್ಸವದಲ್ಲಿಯೂ ಶಿವಕುಮಾರ ಸ್ವಾಮೀಜಿ ಭಾಗವಹಿಸಿದ್ದರು. ತಮ್ಮ 97ನೇ ವಯಸ್ಸಿನಲ್ಲಿಯೂ ಅವರು ಈ ಮಠಕ್ಕೆ ಭೇಟಿ ನೀಡಿದ್ದರು.

ಕಾಳಗಿ ಸಮೀಪ ಭರತನೂರಿಗೂ ಬಂದಿದ್ದರು. ಅಂದು ಇಲ್ಲಿಯ ಉದ್ಯಮಿ ಎಸ್‌.ಎಸ್‌. ಪಾಟೀಲ ಅವರ ಮನೆಯಲ್ಲಿ ತಂಗಿದ್ದರು.

 1973ರಲ್ಲಿ ಇಲ್ಲಿಯ ಶರಣಬಸವೇಶ್ವರ ಮಹಾವಿದ್ಯಾಲಯದ ಗ್ರಂಥಾಲಯ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದರು.

 

ಶ್ರೀಗಳಲ್ಲಿ ಬಸವಣ್ಣನನ್ನು ಕಂಡಿದ್ದೆ

ವಿಶ್ವಗುರು ಬಸವಣ್ಣನವರನ್ನು ನಾವು ಯಾರೂ ನೀಡಿಲ್ಲ. ಆದರೆ, ಆಚಾರ ವಿಚಾರಗಳಿಂದ ಬಸವಣ್ಣನವರನ್ನು ಸಿದ್ಧಗಂಗಾ ಶ್ರೀಗಳಲ್ಲಿ ಕಂಡಿದ್ದೆ. 12ನೇ ಶತಮಾನದಲ್ಲಿ ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿದ್ದರು, 20ನೇ ಶತಮಾನದಲ್ಲಿ ಲಕ್ಷಾಂತರ ಬಡಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಕೀರ್ತಿ ಸಿದ್ಧಗಂಗಾ ಶ್ರೀಗಳಿಗೆ ಸಲ್ಲುತ್ತದೆ, ಆದುದರಿಂದ ಅವರನ್ನು ಆಧುನಿಕ ಬಸವಣ್ಣ ಎಂದು ಕರೆಯಬಹುದು. ಬಸವಯುಗದ ಎರಡನೇ ಅಧ್ಯಾಯ ಮುಗಿದಂತೆ ಭಾಸವಾಗುತ್ತಿದೆ.
-ಬಿ.ಆರ್. ಪಾಟೀಲ, ಮಾಜಿ ಶಾಸಕರು ಆಳಂದ

‘ಶ್ರೇಷ್ಠ ವಿಭೂತಿ ಪುರುಷ’

ಜೇವರ್ಗಿ: ‘ನಡೆದಾಡುವ ದೇವರು, ಶತಾಯುಷಿ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಆಧುನಿಕ ಯುಗದ ಶ್ರೇಷ್ಠ ವಿಭೂತಿ ಪುರುಷ. ಅವರು ಜೀವನದುದ್ದಕ್ಕೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಕ್ಷೇತ್ರಕ್ಕೆ ಅದ್ವಿತೀಯ ಸೇವೆ ಸಲ್ಲಿಸಿದ ಶ್ರೇಷ್ಠ ಸಂತ’.

‘ಡಾ.ಶಿವಕುಮಾರ ಸ್ವಾಮೀಜಿ 21ನೇ ಶತಮಾನದ ಅಗ್ರಗಣ್ಯರ ಸಾಲಿನಲ್ಲಿ ನಿಲ್ಲುವಂತಹ ಆಧುನಿಕ ಬಸವಣ್ಣ. ದಿನನಿತ್ಯ ಸಾವಿರಾರು ಮಕ್ಕಳಿಗೆ ಅನ್ನ ಕೊಡುವ ಅನ್ನದಾತರು. ಮಕ್ಕಳ ವಿದ್ಯೆಯ ವಿಕಾಸದಲ್ಲಿ ದೇವರನ್ನು ಕಾಣುತ್ತಿದ್ದ ಮಹಾ ಶಿವಯೋಗಿಗಳು. ಪೂಜ್ಯರು ಶಿವೈಕ್ಯರಾಗಿರುವುದರಿಂದ ಕನ್ನಡ ನಾಡು, ದೇಶದ ಜನತೆ ಎಲ್ಲವನ್ನೂ ಕಳೆದುಕೊಂಡಂತಾಗಿದೆ. ಅವರ ಜೀವನ ಸಾಧನೆ ಬಣ್ಣಿಸಲು ಅಸಾಧ್ಯವಾಗಿದೆ. ಶ್ರೀಗಳ ನಡತೆ ಹಾಗೂ ಕಾಯಕ ಪ್ರಜ್ಞೆ ಸಮಾಜಕ್ಕೆ ದಾರಿದೀಪಗಳಾಗಿವೆ'

-ಡಾ.ಶಿವಾನಂದ ಸ್ವಾಮೀಜಿ, ವಿರಕ್ತ ಮಠ, ಸೊನ್ನ

ಅವಿನಾಭಾವ ಸಂಬಂಧ

ಡಾ.ಶಿವಕುಮಾರ ಸ್ವಾಮೀಜಿ ಅವರಿಗೂ ನಮ್ಮ ಪೀಠಕ್ಕೂ ಅವಿನಾಭಾವ ಸಂಬಂಧ. ಅವರು 1973ರ ಡಿಸೆಂಬರ್ 13ರಂದು ಶರಣಬಸವೇಶ್ವರ ಮಹಾವಿದ್ಯಾಲಯದ ಗ್ರಂಥಾಲಯಕ್ಕೆ ಚಾಲನೆ ನೀಡಿದ್ದರು. ಅಂದಿನ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರೊಂದಿಗೆ ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದ್ದರು.

ಡಾ.ಶಿವಕುಮಾರ ಸ್ವಾಮೀಜಿ ನಡೆ-ನುಡಿ ಎಲ್ಲರಿಗೂ ಮಾದರಿ. 111 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿರುವ ಶ್ರೀಗಳವರು, ಸ್ವಧರ್ಮ ನಿಷ್ಠೆ- ಪರಧರ್ಮ ಸಹಿಷ್ಣುತೆಯನ್ನು ಜೀವನುದ್ದಕ್ಕೂ ಅನುಸರಿಸಿಕೊಂಡು ಬಂದವರು. ಜಾತಿ ಭೇದ ಮರೆತು ಅಪಾರ ಶಿಷ್ಯ ಬಳಗಕ್ಕೆ ಶಿಕ್ಷಣ ನೀಡಿದ್ದರಿಂದ ಅವರ ಜೀವನ ಇಡೀ ಸಮಾಜಕ್ಕೆ ಮಾರ್ಗದರ್ಶಿ.

ಲಿಂಗಪೂಜೆ, ವಿಭೂತಿ, ರುದ್ರಾಕ್ಷಿ, ಪಾದೋದಕ ಪ್ರಸಾದದ ಮಹತ್ವವನ್ನು ಸಮಾಜಕ್ಕೆ ತಿಳಿಯಪಡಿಸುವಲ್ಲಿ ಅವರು ತಮ್ಮನ್ನು ತಾವುಅರ್ಪಿಸಿಕೊಂಡಿದ್ದರು. ನಡೆದಾಡುವ ದೇವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ. ಸ್ವಾಮೀಜಿಯವರ ಆಶಯದಂತೆ ನಾವು ಮುನ್ನೆಡೆದು ಆಚಾರ-ವಿಚಾರದಲ್ಲಿ ಅವರನ್ನು ಸ್ಮರಿಸೋಣ.

–ಡಾ.ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !