ಶೀಘ್ರ ನ್ಯಾಯಮೂರ್ತಿಗಳ ನೇಮಕ: ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಶ್ವಾಸ

7
ಕಲಬುರ್ಗಿ ಹೈಕೋರ್ಟ್ ಪೀಠದ ದಶಮಾನೋತ್ಸವ ಸಂಭ್ರಮ

ಶೀಘ್ರ ನ್ಯಾಯಮೂರ್ತಿಗಳ ನೇಮಕ: ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಶ್ವಾಸ

Published:
Updated:
Deccan Herald

ಕಲಬುರ್ಗಿ: ‘ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರವೇ ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ನ್ಯಾಯಮೂರ್ತಿಗಳು ನೇಮಕಗೊಳ್ಳಲಿದ್ದಾರೆ’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕಲಬುರ್ಗಿ ಹೈಕೋರ್ಟ್ ಪೀಠದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನ್ಯಾಯಮೂರ್ತಿ ಎನ್.ಕೆ.ಜೈನ್ ಅವರು ತಮ್ಮ ನಿವೃತ್ತಿ ಭಾಷಣದಲ್ಲಿ ಧಾರವಾಡ ಮತ್ತು ಕಲಬುರ್ಗಿ ಸಂಚಾರಿ ಪೀಠದ ಬಗ್ಗೆ ಉಲ್ಲೇಖಿಸಿದ್ದರು. ಆ ಬಳಿಕ ಬಂದ ನ್ಯಾಯಮೂರ್ತಿಗಳಾದ ಸಿರಿಯಾಕ್ ಜೋಸೆಫ್, ಎನ್.ಕೆ.ಪಾಟೀಲ ಅವರಿಂದ ಈ ಕನಸು ಸಾಕಾರಗೊಂಡಿತು. ಆರಂಭದಲ್ಲಿ 12 ಸಾವಿರ ಪ್ರಕರಣಗಳು ಈ ಪೀಠಕ್ಕೆ ವರ್ಗಾವಣೆಯಾಗಿದ್ದವು. ಈಗ 1.31 ಲಕ್ಷ ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸಿರುವುದು ದಾಖಲೆಯಾಗಿದೆ’ ಎಂದು ಬಣ್ಣಿಸಿದರು.

‘ನ್ಯಾಯದಾನ ವಿಳಂಬವಾಗಬಾರದು. ಕಕ್ಷಿದಾನರ ಮನೆ ಬಾಗಿಲಿಗೆ ನ್ಯಾಯ ತಲುಪಿಸುವ ಉದ್ದೇಶದಿಂದ ಕಲಬುರ್ಗಿ ಹೈಕೋರ್ಟ್ ಪೀಠವನ್ನು ಆರಂಭಿಸಲಾಗಿದೆ. ಈ ಭಾಗದ ಜನರಿಗೆ ಇದರಿಂದ ಬಹಳಷ್ಟು ಅನುಕೂಲವಾಗಿದೆ. ಹೈಕೋರ್ಟ್ ಪ್ರಾರಂಭವಾದ್ದರಿಂದ ಈ ಭಾಗದ ಹಿಂದುಳಿದಿರುವಿಕೆ ಹಣೆಪಟ್ಟಿ ಹೋಗಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಯ ಜನರು ಕಲಬುರ್ಗಿಗೆ ಬರುತ್ತಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮಾತನಾಡಿ, ‘ಕರ್ನಾಟದಲ್ಲಿ ನ್ಯಾಯದಾನ ಪ್ರಕ್ರಿಯೆ ಚೆನ್ನಾಗಿದೆ. ವಕೀಲರು, ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳು ಸಹಭಾಗಿತ್ವದಲ್ಲಿ ನ್ಯಾಯ ದೊರಕಿಸಿಕೊಡುತ್ತಾರೆ. ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿಯೇ 10 ವರ್ಷಗಳ ಅವಧಿಯಲ್ಲಿ 1.31 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ’ ಎಂದು ಹೇಳಿದರು.

‘ಯುವ ವಕೀಲರು ಬೆಂಗಳೂರು ಹೈಕೋರ್ಟ್‌ಗೆ ಬರಬೇಕು. ಪ್ರಕರಣಗಳನ್ನು ಇತ್ಯರ್ಥಪಡಿಸುವುದನ್ನು ನೋಡಿ ಕಲಿಯಬೇಕು. 20ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಬೆಂಗಳೂರಿನವರು ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ಬಂದು ಕಲಿಯುವಂತಾಗಬೇಕು’ ಎಂದು ಆಶಿಸಿದರು.

ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಮಾತನಾಡಿ, ‘ಈ ಭಾಗದ ಯುವಕರಲ್ಲಿ ಅತ್ಯುತ್ತಮ ಸಾಮರ್ಥ್ಯವಿದೆ. ಯುವ ವಕೀಲರು ನ್ಯಾಯಾಲಯಗಳಲ್ಲಿರುವ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಬೇಕು’ ಎಂದರು.

ಎಸ್.ಅಬ್ದುಲ್ ನಜೀರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಲಬುರ್ಗಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಸುಜಾತಾ, ಎನ್.ಕೆ.ಸುಧೀಂದ್ರರಾವ್, ಮೊಹಮ್ಮದ್ ನವಾಜ್, ಕರ್ನಾಟಕ ವಕೀಲರ ಪರಿಷತ್ ಸದಸ್ಯ ಕಾಶಿನಾಥ ಜೆ.ಮೋತಕಪಲ್ಲಿ, ಗುಲಬರ್ಗಾ ಬಾರ್ ಅಸೋಸಿಯೇಶನ್ ಕಲಬುರ್ಗಿ ಹೈಕೋರ್ಟ್ ಘಟಕದ ಉಪಾಧ್ಯಕ್ಷ ಶರಣಯ್ಯ ಜಿ.ಮಠ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಯಾದವ್, ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಸತೀಶ ಆರ್.ಪಾಟೀಲ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಪಾಟೀಲ ಇದ್ದರು.

ಗುಲಬರ್ಗಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆರ್.ಕೆ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹಿರಿಯ ವಕೀಲರಾದ ಅನುರಾಧ ದೇಸಾಯಿ ನಿರೂಪಿಸಿದರು.

ಎಮ್ಮವರು ಬೆಸಗೊಂಡರೆ..

‘ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯ’ ಎಂಬ ವಚನದ ಸಾಲುಗಳನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್, ‘ದಶಮಾನೋತ್ಸವ ಆಚರಣೆ ವಿಳಂಬವಾದರೂ ಎಲ್ಲರೂ ಸೇರಿರುವುದೇ ಖುಷಿಯ ಸಂಗತಿ’ ಎಂದು ಹೇಳಿದರು.

‘ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ನಮ್ಮ ನಾಯಕರು. ಹೊಳ್ಳ ಸಾಹೇಬ್ರೆ..’ ಎಂದು ಹೇಳಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

‘ಸಹೋದರಿಯರ ಪಾಲು ಕೊಡಿ’

‘ಹಿರಿಯರ ಆಸ್ತಿ ಭಾಗ ಮಾಡುವ ಸಂದರ್ಭದಲ್ಲಿ ಸಹೋದರಿಯರಿಗೂ ಪಾಲು ಕೊಡಬೇಕು’ ಎಂದು ಎಸ್.ಅಬ್ದುಲ್ ನಜೀರ್ ಹೇಳಿದರು.

‘ಬಹಳಷ್ಟು ಜನ ಅಣ್ಣ ತಮ್ಮಂದಿರು ಆಸ್ತಿ ಭಾಗ ಮಾಡಿಕೊಳ್ಳುವ ಸಂದರ್ಭದಲ್ಲಿ ತಮ್ಮ ಸಹೋದರಿಯರಿಗೆ ಪಾಲು ಕೊಡುತ್ತಿರಲಿಲ್ಲ. ನ್ಯಾಯಕ್ಕಾಗಿ ಸಹೋದರಿಯರು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದರು. ಹೀಗಾಗಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರಲಾಯಿತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !