ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮೂಲಸೌಕರ್ಯ ಮರುಸ್ಥಾಪನೆಗೆ ಆದ್ಯತೆ ನೀಡಿ

ಪ್ರವಾಹ ಪರಿಸ್ಥಿತಿ ಕುರಿತು ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ ಸೂಚನೆ
Last Updated 21 ಅಕ್ಟೋಬರ್ 2020, 2:52 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರನ್ನು ಸರಿಯಾಗಿ ನೋಡಿಕೊಳ್ಳಬೇಕು. ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಜನರ ಆರೋಗ್ಯ ಕಾಪಾಡುವುದು, ಮನೆ ನಿರ್ಮಾಣವೂ ಸೇರಿದಂತೆ ಮೂಲ ಸೌಕರ್ಯಗಳನ್ನು ಮರು ಸ್ಥಾಪಿಸಬೇಕಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಹಾಗೂ ಜಾನುವಾರಗಳ ಹಾನಿ ಬಗ್ಗೆ ಕೂಡಲೇ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ ಸೂಚಿಸಿದರು.

ಮಂಗಳವಾರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಕೃತಿ ವಿಕೋಪ ನಿಯಂತ್ರಣ ನಿಟ್ಟಿನಲ್ಲಿ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್ ಹಾಗೂ ಸರ್ಕಾರ ಕಾಲಕಾಲಕ್ಕೆ ನೀಡಿರುವ ಮಾರ್ಗಸೂಚಿಯಂತೆ ಜಿಲ್ಲಾಡಳಿತವು ಕಟ್ಟುನಿಟ್ಟಾಗಿ ಪಾಲಿಸಿ ಸಂತ್ರಸ್ತರ ನೆರವಾಗುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು ಸಮಾಧಾನ ತಂದಿದೆ’ ಎಂದರು.

‘ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಯಾವುದೇ ಜೀವಹಾನಿಯಾಗದೆ ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಸಂತ್ರಸ್ತರ ನೆರವಿಗೆ ಧಾವಿಸಿದ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡ ಪರಿಣಾಮ ಯಾವುದೇ ಮಾನವ ಹಾನಿ ಆಗಿಲ್ಲ’ ಎಂದರು.‌

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ‘ಜಿಲ್ಲೆಯ 159 ಗ್ರಾಮಗಳಿಗೆ ಪ್ರತಿಯೊಬ್ಬ ಅಧಿಕಾರಿಗೆ 4-5 ಗ್ರಾಮಗಂತೆ 40 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಗುರುತಿಸಿ ರಾತೋರಾತ್ರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿ ಸಂತ್ರಸ್ತರ ಸ್ಥಳಾಂತರ ಮತ್ತು ರಕ್ಷಣಾ ಕಾರ್ಯಕ್ಕೆ ಕಳುಹಿಸಲಾಯಿತು. ರಕ್ಷಣಾ ತಂಡಗಳಿಗೆ ಸಾಕಷ್ಟು ದೋಣಿಗಳು, ಯಂತ್ರಚಾಲಿತ ಬೋಟ್‍ಗಳು, ಸಂತ್ರಸ್ತರ ಸ್ಥಳಾಂತರಕ್ಕೆ ಬಸ್‍ಗಳು, ಕ್ರೂಸರ್‌ಗಳು, 35 ಅಂಬುಲೆನ್ಸ್‌ಗಳನ್ನು ಬಳಸಿಕೊಂಡು ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೆಹರೂ ಯುವ ಕೇಂದ್ರದ ಸ್ವಯಂ ಸೇವಕರು, ಕಾರವಾರದ ಖಾಸಗಿ ಬೋಟ್ ತಂಡ, ಈಜುಗಾರರು, ಮುಳುಗು ತಜ್ಞರು ಮುಂತಾದವರ ಸೇವೆಯನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುವ ಮೂಲಕ ಪರಿಸ್ಥಿತಿ ಕೈ ಮೀರಿದಂತೆ ನಿರ್ವಹಿಸಲಾಗಿದೆ’ ಎಂದರು.

‘ಜಿಲ್ಲೆಯಾದ್ಯಂತ ಈವರೆಗೆ 30 ಸಾವಿರಕ್ಕಿಂತ ಹೆಚ್ಚಿನ ಜನರನ್ನು ಸಂರಕ್ಷಿಸಿ 163 ಕಾಳಜಿ ಕೇಂದ್ರದಲ್ಲಿ ಅವರಿಗೆ ಆಶ್ರಯ ಕಲ್ಪಿಸಿ ತ್ವರಿತಗತಿಯಲ್ಲಿ ಆಹಾರದ ಜೊತೆಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲರಿಗೂ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಸಹ ವಿತರಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪಿ.ರಾಜಾ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್, ಡಿಸಿಪಿ ಕಿಶೋರ ಬಾಬು, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಐ.ಎ.ಎಸ್. ಪ್ರಬೇಷನರಿ ಅಧಿಕಾರಿ ಡಾ.ಆಕಾಶ ಶಂಕರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಇದ್ದರು.

ಅಗ್ನಿಶಾಮಕ, ಆರೋಗ್ಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಲೋಕೋಪಯೋಗಿ, ಪಂಚಾಯತ್ ರಾಜ್ ಮುಂತಾದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT