ಸೋಮವಾರ, ಸೆಪ್ಟೆಂಬರ್ 27, 2021
28 °C

ತಕ್ಷಣ ಕಸಾಪ ಚುನಾವಣೆ ನಡೆಸಲು ವೀರಭದ್ರ ಸಿಂಪಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿದ್ದ ವೇಳೆಯೇ ಕೋವಿಡ್ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಮುಂದಕ್ಕೆ ಹಾಕಲಾಗಿತ್ತು. ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದರಿಂದ ಆಗಸ್ಟ್‌ ಅಂತ್ಯದ ವೇಳೆಗೆ ಚುನಾವಣೆ ನಡೆಸಬೇಕು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತದಾನವೊಂದನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕ್ರಿಯೆಗಳು ಮುಗಿದಿದ್ದವು. ಹೀಗಾಗಿ, ಮತದಾನ ದಿನಾಂಕವನ್ನು ಘೋಷಣೆ ಮಾಡುವ ಮೂಲಕ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿಕೊಡಬೇಕು. ರಾಜ್ಯದಾದ್ಯಂತ 3.10 ಲಕ್ಷ ಮತದಾರರಿದ್ದು, ಅವರಿಗೆ ದೈಹಿಕ ಸಂಪರ್ಕವನ್ನು ಕಾಪಾಡಿಕೊಳ್ಳುವಂತೆ ಹೇಳಿ ನಡೆಸಬಹುದಾಗಿದೆ. ಲಕ್ಷಾಂತರ ಮಕ್ಕಳು ಭಾಗವಹಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೇ ಸುಸೂತ್ರವಾಗಿ ನಡೆಸಿದ ಸರ್ಕಾರಕ್ಕೆ ಕಸಾಪ ಚುನಾವಣೆಯನ್ನು ನಡೆಸುವುದು ದೊಡ್ಡ ವಿಷಯವಲ್ಲ’ ಎಂದರು.

‘ತಕ್ಷಣ ಚುನಾವಣೆ ನಡೆಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ. ಕಸಾಪ ಅಧ್ಯಕ್ಷ ಸ್ಥಾನ ಯಾವುದೇ ಅಧಿಕಾರದ ಹುದ್ದೆಯಲ್ಲ. ಬದಲಾಗಿ ಸಾಹಿತ್ಯಾಸಕ್ತಿಯಿಂದ ಆಗುವಂಥದ್ದು. ಆದ್ದರಿಂದ ವಿಳಂಬ ಮಾಡದೇ ಚುನಾವಣೆ ನಡೆಸಬೇಕಿದೆ’ ಎಂದು ಪ್ರತಿಪಾದಿಸಿದರು.

‘ಕಸಾಪ ಕೇಂದ್ರ ಸಮಿತಿ ಹಾಗೂ ಜಿಲ್ಲಾ ಅಧ್ಯಕ್ಷರ ಅಧಿಕಾರವಧಿ ಸೆಪ್ಟೆಂಬರ್ 2ಕ್ಕೆ ಮುಕ್ತಾಯವಾಗಲಿದ್ದು, ಸರ್ಕಾರ ಡಿಸೆಂಬರ್‌ವರೆಗೆ ಚುನಾವಣೆಯನ್ನು ಮುಂದೂಡಿದೆ. ಇದರಿಂದಾಗಿ ನಾಡು–ನುಡಿಯ ಸ್ವಯಂಸೇವೆಯ ಕಸಾಪಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಜಿಲ್ಲಾ ಮಟ್ಟದಲ್ಲಿ 8ರಿಂದ 10 ಸಾವಿರ, ತಾಲ್ಲೂಕು ಮಟ್ಟದಲ್ಲಿ ಒಂದು ಸಾವಿರ ಹಾಗೂ ಹೋಬಳಿ ಮಟ್ಟದಲ್ಲಿ 500ರವರೆಗೆ ಮತದಾರರು ಇದ್ದಾರೆ. ಅವರೆಲ್ಲ ತಕ್ಷಣ ಚುನಾವಣೆ ನಡೆಸಬೇಕು ಎಂದು ಬಯಸುತ್ತಿದ್ದಾರೆ. ಆದ್ದರಿಂದ ವಿಳಂಬ ಮಾಡದೇ ಆಗಸ್ಟ್‌ ಅಂತ್ಯದ ವೇಳೆಗೆ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಕಸಾಪ ಪದಾಧಿಕಾರಿಗಳಾದ ದೌಲತರಾಯ ಮಾಲಿಪಾಟೀಲ, ಅಂಬಾಜಿ ಕೌಲಗಿ, ಅಣವೀರ ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು