ಶನಿವಾರ, ಅಕ್ಟೋಬರ್ 24, 2020
27 °C
ಚುನಾವಣಾ ಪ್ರಮುಖರ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ವಿಜಯೋತ್ಸವಕ್ಕೆ ನಗರಕ್ಕೆ ಬರುತ್ತೇನೆ: ಸಚಿವ ಕೆ.ಎಸ್.ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬಿಜೆಪಿ ದೇಶಭಕ್ತರ ಪಕ್ಷ ಎಂಬುದು ಶಿಕ್ಷಕ ಮತದಾರರಿಗೆ ಗೊತ್ತಿದೆ. ಹೀಗಾಗಿ ಅವರು ಶಶೀಲ್ ನಮೋಶಿ ಅವರನ್ನು ಅತಿ ಹೆಚ್ಚಿನ ಅಂತರದಿಂದ ಗೆಲ್ಲಿಸಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಚುನಾವಣಾ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದ ಕಾರ್ಯಕರ್ತರು ಸೈನಿಕರ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಗೆಲುವು ನಿಶ್ಚಿತ. ನಮ್ಮ ಪಕ್ಷದ ಅಭ್ಯರ್ಥಿಗಳ ವಿಜಯೋತ್ಸವಕ್ಕೆ ಮತ್ತೆ ನಗರಕ್ಕೆ ಬರುತ್ತೇನೆ’ ಎಂದು ಹೇಳಿದರು.

‘ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗಳಿಸಿದರೂ ಕಾಂಗ್ರೆಸ್‌ ಪಕ್ಷದ ಸೊಕ್ಕು ಅಡಗಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರೂ ಜಾತಿವಾದಿಗಳು. ಬಿಜೆಪಿ ರಾಷ್ಟ್ರೀಯವಾದಿ ಪಕ್ಷ. ದೇಶದ ರಕ್ಷಣೆಗಾಗಿ ಮತದಾರರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ’ ಎಂದು ಹೇಳಿದರು.

‘ಚುನಾವಣೆಗೆ ಇನ್ನು ಹತ್ತು ದಿನ ಬಾಕಿ ಇದೆ. ಒಬ್ಬ ಕಾರ್ಯಕರ್ತರಿಗೆ 20 ಮತದಾರರ ಜವಾಬ್ದಾರಿ ವಹಿಸಲಾಗಿದೆ. ಈ ಅವಧಿಯಲ್ಲಿ ಅವರು ಐದು ಬಾರಿ ಮತದಾರರನ್ನು ಸಂಪರ್ಕಿಸಬೇಕು’ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಮಾತನಾಡಿ, ‍‘ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಾರ್ಯಕರ್ತರು ಶಿಕ್ಷಣ ಸಂಸ್ಥೆಗಳ ಪ್ರಮುಖರು, ಶಿಕ್ಷಕರ ಸಂಘಗಳನ್ನು ಭೇಟಿ ಮಾಡಿ ಮತಯಾಚಿಸಬೇಕು. ಅವರ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಸಂಗ್ರಹಿಸಬೇಕು’ ಎಂದು ಹೇಳಿದರು.

‘ಕಾರ್ಯಕರ್ತರು ಮತದಾರರ ವಾಟ್ಸ್‌ಆ್ಯಪ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಚಾರ ಸಂದೇಶದ ವಿಡಿಯೊವನ್ನು ಹಂಚಿಕೊಳ್ಳುವ ಮತದಾರರ ಮನವೊಲಿಸಬಹುದು. ಅಲ್ಲದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬಹುದು’ ಎಂದರು.

‘ಇಡೀ ದೇಶದಲ್ಲೇ ಕೇರಳದಲ್ಲಿ ಅತಿ ಹೆಚ್ಚು ಶಿಕ್ಷಕರು ಇದ್ದಾರೆ. ಆದರೆ, ಅವರಿಗೆ ಅಲ್ಲಿನ ಸರ್ಕಾರ ಲಾಕ್‌ಡೌನ್‌ ಅವಧಿಯಲ್ಲಿ ವೇತನ ನೀಡಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೇತನ ಸಹಿತ ಎಲ್ಲ ಸೌಲಭ್ಯಗಳನ್ನು ನೀಡಿದ್ದಾರೆ’ ಎಂದು ಹೇಳಿದರು.

ಈಶಾನ್ಯ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಾರಣಾಂತರಗಳಿಂದ ಸೋತಿದ್ದೇನೆ. ಈ ಬಾರಿ ಚುನಾವಣೆಗೆ ಒಂದೂವರೆ ವರ್ಷದಿಂದ ಸಿದ್ಧತೆ ನಡೆಸುತ್ತಿದ್ದೇನೆ. ಮತದಾರರು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಶಿರಾ, ರಾಜರಾಜೇಶ್ವನಗರ ಕ್ಷೇತ್ರಗಳ ಉಪಚುನಾವಣೆ, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎನ್ಇಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಅದಸ್ಯ‌ ಸುನೀಲ್ ವಲ್ಯಾಪುರೆ, ಶಾಸಕರಾದ ಬಸವರಾಜ‌ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ದೊಡ್ಡಪ್ಪಗೌಡ ಪಾಟೀಲ‌ ನರಿಬೋಳ, ಚಂದು ಪಾಟೀಲ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಇದ್ದರು.

ಸಮೀಕ್ಷೆ ನಡೆಸಲು ಸೂಚನೆ

ಕಲಬುರ್ಗಿ: ಈ ಭಾಗದಲ್ಲಿ ಭಾರಿ ಮಳೆಯಿಂದ ಆಗಿರುವ ಹಾನಿ ಕುರಿತು ಸಮೀಕ್ಷೆ ನಡೆಸುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಹಾಳಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಗೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಮುಗಿದ ನಂತರ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

ಕಳೆದ ಬಾರಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು. ಆಗ ರಾಜ್ಯ ಸರ್ಕಾರ 1,500 ಕೋಟಿ ಹಣ ಬಿಡುಗಡೆ ಮಾಡಿತ್ತು ಎಂದು ಹೇಳಿದರು.

ಕಲಬುರ್ಗಿಯ ಜನ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದಾರೆ. ಅವರಿಗೆ ಮಟ್ಟೂರ ಅವರನ್ನು ಸೋಲಿಸುವುದು ಕಷ್ಟವಲ್ಲ
-ಕೆ.ಎಸ್.ಈಶ್ವರಪ್ಪ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು