ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಕುಂಟಾ ಸಿಮೆಂಟ್‌ ಕಾರ್ಖಾನೆ ಪ್ರಾರಂಭಿಸಿ: ಸಂಸತ್‌ ಕಲಾಪದಲ್ಲಿ ಡಾ.ಉಮೇಶ ಜಾಧವ

ಸಂಸತ್‌ ಕಲಾಪದಲ್ಲಿ ಧ್ವನಿ ಎತ್ತಿದ ಸಂಸದ ಡಾ.ಉಮೇಶ ಜಾಧವ
Last Updated 23 ಸೆಪ್ಟೆಂಬರ್ 2020, 3:11 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಕುರಕುಂಟಾ ಸಿಮೆಂಟ್‌ ಕಾರ್ಖಾನೆ (ಸಿಸಿಐ)ಯನ್ನು ಮರು ಪ್ರಾರಂಭಿಸಬೇಕು ಎಂದು ಸಂಸದ ಡಾ.ಉಮೇಶ ಜಾಧವ ಅವರು, ಮಂಗಳವಾರ ಲೋಕಸಭೆಯಲ್ಲಿ ಮನವಿ ಮಾಡಿಕೊಂಡರು.

ಅಧಿವೇಶನದಲ್ಲಿ ಪಾಲ್ಗೊಂಡ ಅವರು, ತಮಗೆ ಸಿಕ್ಕ ಅವಕಾಶದಲ್ಲಿ ಜಿಲ್ಲೆಯ ಸಿಮೆಂಟ್‌ ಕಾರ್ಖಾನೆಗಳ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಿದರು. ಸರ್ಕಾರಿ ಸ್ವಾಮ್ಯದ ಕುರಕುಂಟಾ ಸಿಮೆಂಟ್‌ ಕಾರ್ಖಾನೆ ಬಂದ್‌ ಆಗಿದ್ದರಿಂದ ಸಾವಿರಾರು ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಅಪಾರ ಪ್ರಮಾಣದ ಆದಾಯ ನಿಂತುಹೋಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಬಲ್ಲ ಈ ಕಾರ್ಖಾನೆ ಬಹಳ ಜನೋಪಯೋಗಿ ಆಗಿದೆ. ಇದಕ್ಕೆ ಮರುಜೀವ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬೃಹತ್‌ ಕೈಗಾರಿಕಾ ಸಚಿವರಲ್ಲಿ ಮನವಿ ಮಾಡಿದರು.

‘ಸಿಸಿಐನಿಂದ 2006ರಲ್ಲಿ ಕೇಂದ್ರ ಸರ್ಕಾರದಿಂದ ಹೂಡಿಕೆಯೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಈ ಕಾರ್ಖಾನೆ ಆರಂಭಿಸಲಾಗಿದೆ. ಆರಂಭದಲ್ಲಿ 5,000ಕ್ಕೂ ಹೆಚ್ಚು ಕುಟುಂಬಗಳು ಇದನ್ನು ಅವಲಂಭಿಸಿದ್ದವು. ಕಾರ್ಖಾನೆ ನಿಂತಿದ್ದರಿಂದ ಇದನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಅವಲಂಬಿಸಿದ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕಳೆದಒಂದೂವರೆ ದಶಕದಲ್ಲಿ ಈ ಜನರಿಗಾಗಿ ಯಾರೂ ಧ್ವನಿ ಎತ್ತಿಲ್ಲ. ಆದರೆ ಕಳೆದ ವರ್ಷ ನಾನು ಸಂಸದನಾಗಿ ಆಯ್ಕೆಯಾದಾಗ ಈ ವಿಷಯವನ್ನು ನನ್ನ ಮೊದಲ ಭಾಷಣವಾಗಿ ಕಳೆದ ವರ್ಷ ಎತ್ತಿಕೊಂಡಿದ್ದೆ. ಇದಕ್ಕೆ ಪೂರಕ ಎಂಬಂತೆ ಜಿಲ್ಲಾಧಿಕಾರಿಯವರ ಸಮೀಕ್ಷೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀಕ್ಷೆ ಹಾಗೂ ಸಾರ್ವಜನಿಕರ ಅಹವಾಲುಗಳನ್ನೂ ಇಲ್ಲಿ ಪರಿಗಣಿಸಲು ಮನವಿ ಮಾಡುತ್ತೇನೆ’ ಎಂದೂ ಸಂಸದ ಹೇಳಿದರು.

‘ಕಲಬುರ್ಗಿ ಜಿಲ್ಲೆಯ ಕುರಕುಂಟಾ, ಶಹಾಬಾದ್‌ ಸುತ್ತಮುತ್ತ ಸುಣ್ಣದಕಲ್ಲು ಅಪಾರ ಪ್ರಮಾಣದಲ್ಲಿ ದೊರೆಯುತ್ತದೆ. ಈ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಆರ್ಥಿಕವಾಗಿ ಬೆಳೆಯಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ರೈಲ್ವೆ ಮಾರ್ಗ, ಹೆದ್ದಾರಿ, ಕಾರ್ಮಿಕರು ಹೀಗೆ ಎಲ್ಲ ಸೌಕರ್ಯಗಳೂ ಇಲ್ಲಿವೆ. ಆದ್ದರಿಂದ ಕುರಕುಂಟಾ ಸಿಮೆಂಟ್‌ ಕಾರ್ಖಾನೆಯನ್ನು ಶೀಘ್ರ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದೂ ಡಾ.ಜಾಧವ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT