ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುಪಾಡುಗಳ ಆಚೆಗೆ ವಿಶ್ವ ಮಾನವರಾಗಿ: ಕನ್ನಡ ಪ್ರಾಧ್ಯಾಪಕ ವಿಕ್ರಮ ವಿಸಾಜಿ

ರಾಷ್ಟ್ರಕವಿ ಕುವೆಂಪು ಬದುಕು– ಸಾಹಿತ್ಯ ಅವಲೋಕನ ಮಾಡಿದ ವಿಕ್ರಮ ವಿಸಾಜಿ
Last Updated 31 ಡಿಸೆಂಬರ್ 2021, 5:36 IST
ಅಕ್ಷರ ಗಾತ್ರ

ಕಲಬುರ್ಗಿ: ‘ಈ ನೆಲದ ವೈಚಾರಿಕ ಕವಿ ಕುವೆಂಪು ಅವರ ಕರೆಯಂತೆ ವಿಶ್ವ ಮಾನವರಾಗಲು ಜಾತಿ, ಧರ್ಮ, ಮೌಢ್ಯಾಚಾರಣೆಗಳ ಕಟ್ಟುಪಾಡುಗಳಿಂದ ಹೊರ ಬರಬೇಕು. ಅಸಮಾನತೆಯ ಬಂಧನಗಳ ಜಡತ್ವದಿಂದ ಬಿಡುಗಡೆಯಾಗಬೇಕು’ ಎಂದು ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ವಿಕ್ರಮ ವಿಸಾಜಿ ಹೇಳಿದರು.

ಕುವೆಂಪು ಅವರು ಜನ್ಮ ದಿನಾಚರಣೆ ಪ್ರಯುಕ್ತ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ಕುವೆಂಪು ಬದುಕು– ಸಾಹಿತ್ಯ ಅವಲೋಕನ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

‘ಈ ಸಮಾಜದಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಮತಗಳಿವೆ. ಇವುಗಳ ನಡುವೆಯೂ ನಮ್ಮದು ಮನುಜಮತ, ವಿಶ್ವಪಥ ಆಯ್ಕೆಯಾಗಬೇಕು. ಪೂರ್ಣ ದೃಷ್ಟಿ, ಸಮನ್ವಯ ಮತ್ತು ಸರ್ವೋದಯ ವಿಚಾರಗಳನ್ನು ಕುವೆಂಪು ನಮಗೆ ಆಸ್ತಿಯಾಗಿ ಕೊಟ್ಟಿದ್ದಾರೆ. ಗುಡಿ, ಚರ್ಚ್‌, ಮಸೀದಿಗಳಲ್ಲಿ ದೇವರಿಲ್ಲ; ನೇಗಿಲ ಯೋಗಿಯ ಮನೆಯಲ್ಲಿ ದೇವರಿದ್ದಾನೆ ಎಂದು ಹೇಳುವ ಮೂಲಕ ಕುವೆಂಪು ಕಾಯಕ ತತ್ವವನ್ನು ಎತ್ತಿಹಿಡಿದಿದ್ದಾರೆ. ನಾನು ನನಗಾಗಿ ಎನ್ನದೆ ನಾವು ನಮಗಾಗಿ ಎಂದು ಬದುಕುವ ಪರಿಕಲ್ಪನೆ ಕೊಟ್ಟು ಸಂಪ್ರದಾಯ ಬೇಧಗಳ ಗೋಡೆಗಳನ್ನು ತಿರಸ್ಕರಿಸಿದ್ದಾರೆ’ ಎಂದರು.

‘ಸಮಾನತೆಯ ತತ್ವದಡಿ ಬದುಕುವುದನ್ನು ಕಲಿಸಿದ ರಸಋಷಿ, ಕನ್ನಡ ಭಾಷಾಪ್ರಜ್ಞೆ ಮತ್ತು ಚಳವಳಿಯ ಪ್ರಜ್ಞೆ ಬೆಳೆಸುವುದನ್ನು ಕಲಿಸಿದ್ದಾರೆ. ಅವರ ಮಂತ್ರಮಾಂಗಲ್ಯ ಸೂತ್ರ ಪುಸ್ತಕದಲ್ಲಿ ಆದರ್ಶ ಮದುವೆಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಸರಳವಾಗಿರಬೇಕು, ಜಾತಿರಹಿತವಾಗಿರಬೇಕು, ಆಡಂಬರ ರಹಿತವಾಗಿರಬೇಕು, ಕಡಿಮೆ ಜನರು ಭಾಗಿಯಾಗಿರಬೇಕು ಎಂಬುದು ಅಲ್ಲಿದೆ. ಸಂಸ್ಕೃತ ಶ್ಲೋಕ, ಮಂತ್ರ, ತಂತ್ರ, ಹೋಮ, ಹವನ ಇಲ್ಲದೆಯೇ, ವ್ಯವಹಾರಿಕವಲ್ಲದ ಪತಿ-ಪತ್ನಿ ಜತೆಯಾಗಿ ಸಮಪ್ರಜ್ಞೆಯಿಂದ ಬದುಕುವ ವಾಗ್ದಾನ ಮಾಡಬೇಕು. ಇಂಥಹ ವಿಚಾರಗಳನ್ನು ಬೇರೆ ಯಾವ ಕವಿಯೂ ಕೊಡಲು ಸಾಧ್ಯವಾಗಿಲ್ಲ. ಕುವೆಂಪು ಅವರ ವಿಚಾರಗಳನ್ನು ಮೆಚ್ಚುವ ನಾವುಗಳು ಜಾತಿ, ವರ್ಗ, ವರ್ಣ ಬೇಧಗಳಿಲ್ಲದ ವೈಜ್ಞಾನಿಕ ಮನೋಭಾವದಡಿ ಬದುಕು ರೂಢಿಸಿಕೊಂಡಾಗ ಮಾತ್ರ ಸರ್ವೋದಯ ಸಮಾಜ ಉದಯವಾಗಲು ಸಾಧ್ಯ’ ಎಂದು ವಿವರಿಸಿದರು.

ಆವಿಷ್ಕಾರ ವೇದಿಕೆಯ ಜಿಲ್ಲಾ ಸಂಚಾಲಕಿ ಅಶ್ವಿನಿ ಮಾತನಾಡಿ, ‘ಮತ– ಮೌಢ್ಯಗಳಲ್ಲಿ ಹಂಚಿ ಹೋಗಿರುವ ಜನರಿಗೆ ನಾವು ವೈಚಾರಿಕ ಚಿಂತನೆಗಳನ್ನು ಪರಿಚಯಿಸುವ ಅವಶ್ಯಕತೆಯಿದೆ. ಸಮಾಜದ ಹಿನ್ನೆಡೆಗೆ ಕಾರಣವಾಗುತ್ತಿರುವ ಸಾಂಪ್ರದಾಯಿಕ ಬಂಧನಗಳಿಂದ ವಿದ್ಯಾರ್ಥಿ ಯುವಜನರು ಬಿಡುಗಡೆಯಾಗಬೇಕು. ಉತ್ತಮ ಕಲೆ, ಸಾಹಿತ್ಯ, ಸಿನೆಮಾಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಸಾಂಸ್ಕೃತಿಕ ವಾತಾವರಣ ಶುಚಿಯಾಗಲು ಸಾಧ್ಯ. ಅನ್ಯಾಯ, ಅಸಮಾನತೆ, ಶೋಷಣೆಗಳನ್ನು ಕಂಡು ಕುವೆಂಪು ಅವರು ಪ್ರಖರವಾದ ಸಾಹಿತ್ಯವನ್ನು ನಮಗೆ ಕೊಟ್ಟು ಹೋಗಿದ್ದಾರೆ. ಅದನ್ನೇ ನಾವುಗಳು ಅಸ್ತ್ರವಾಗಿ ಬಳಸುವ ಮೂಲಕ ಸಮಾಜದ ಪರಿವರ್ತನೆಗೆ ಸಂಘಟಿತರಾಗಬೇಕಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸಂಸ್ಥೆಯ ಕಾರ್ಯದರ್ಶಿ ಮಾರುತಿರಾವ ಡಿ. ಮಾಲೆ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ಅಂಬೇಡ್ಕರ್ ಪದವಿ ಕಾಲೇಜಿನ ಪ್ರಾಚಾರ್ಯ ಗಿರೀಶ ಎಂ. ಮೀಶಿ, ಉಪನ್ಯಾಸಕ ವಸಂತ ನಾಸಿ, ಆವಿಷ್ಕಾರದ ಪುಟ್ಟರಾಜ ಲಿಂಗಶೆಟ್ಟಿ, ಮಹಾದೇವಿ ನಾಗೂರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆವಿಷ್ಕಾರ ಜಿಲ್ಲಾ ಸಮಿತಿ ಸದಸ್ಯ ಮಡಿವಾಳಪ್ಪ ಹೇರೂರ ನಿರೂಪಿಸಿದರು. ಶ್ರೀಶರಣ ಹೊಸಮನಿ ವಂದಿಸಿದರು.

ಇದೇ ವೇಳೆ ವಿದ್ಯಾರ್ಥಿಗಳು ಕುವೆಂಪು ವಿಚಾರಗಳ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಅತಿಥಿಗಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT