ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲಸೌಕರ್ಯಗಳ ನಿರೀಕ್ಷೆಯಲ್ಲಿ ಚಿತ್ತಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು

Published 29 ಜೂನ್ 2024, 5:39 IST
Last Updated 29 ಜೂನ್ 2024, 5:39 IST
ಅಕ್ಷರ ಗಾತ್ರ

ಚಿತ್ತಾಪುರ: ಬೋಧನೆಗೆ ಉಪನ್ಯಾಸಕರ ಕೊರತೆ. ಕೊಠಡಿಗಳಲ್ಲಿ ಬೆಳಕಿನ ಸಮಸ್ಯೆ. ಸೂರ್ಯಾಸ್ತವಾದರೆ ಸಾಕು ಕಾಲೇಜು ಆವರಣದಲ್ಲಿ ಕಿಡಿಗೇಡಿಗಳ ಓಡಾಟ–ಕಾಟ. ಮಳೆ ಬಂದರೆ ಜಲಾವೃತವಾಗುವ ಕಾಲೇಜು ಮೈದಾನ...

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಸಮಸ್ಯೆಗಳ ಪಟ್ಟಿ ಹೀಗೇ ಮುಂದುವರಿಯುತ್ತದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಹೊಂದಿರುವ ಈ ಕಾಲೇಜು ಆವರಣದಲ್ಲಿ ಒಮ್ಮೆ ಕಣ್ಣಾಡಿಸಿದರೆ ಹೊಸ–ಸುಸಜ್ಜಿತ ಕಟ್ಟಡದ ಅಗತ್ಯ ಯಾರಿಗಾದರೂ ವೇದ್ಯವಾಗುತ್ತದೆ.

ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿಯೇ ಕಾಲೇಜಿಗೆ ಅಗತ್ಯವಿರುವ ತರಗತಿ ಕೊಠಡಿಗಳನ್ನು ಅನುದಾನ ದೊರೆತಾಗಲೆಲ್ಲ ಆಗಾಗ ಕಟ್ಟಲಾಗಿದೆ. ಪ್ರಾಂಶುಪಾಲರ ಕಚೇರಿ ಕೋಣೆ, ಸಿಬ್ಬಂದಿ ಕೋಣೆ ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಕ್ಕೆ ತಲಾ ಎರಡು ತರಗತಿ ಕೊಠಡಿಗಳೇನೋ ಇವೆ. ಆದರೆ, ಪುರಸಭೆಯ ವಾಣಿಜ್ಯ ಮಳಿಗೆಗಳ ಪಕ್ಕದಲ್ಲೇ ತರಗತಿ ಕೋಣೆಗಳನ್ನು ನಿರ್ಮಿಸಿದ್ದರಿಂದ ಕಿಟಕಿ ತೆರೆಯಲು ಕಷ್ಟವಾಗುತ್ತಿದ್ದು, ಬೆಳಕಿನ ಸಮಸ್ಯೆ ಕಾಡುತ್ತಿದೆ. ಕಾಲೇಜಿನಲ್ಲಿರುವ ಸಣ್ಣ ‘ಆರ್‌.ಒ.’ ಘಟಕ ಕೆಟ್ಟಿದ್ದು, ಕೊಳವೆ ಬಾವಿಯ ನೀರನ್ನು ಶುದ್ಧೀಕರಿಸದೇ ಕುಡಿಯುವಂತಾಗಿದೆ.

ಸಿಬ್ಬಂದಿ ಕೊರತೆ:

ಕಾಲೇಜು 2023–24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ 65.5ರಷ್ಟು ಫಲಿತಾಂಶ ದಾಖಲಿಸಿದೆ. 2024–25ನೇ ಸಾಲಿಗಾಗಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ 73, ವಾಣಿಜ್ಯ ವಿಭಾಗದಲ್ಲಿ 27 ಹಾಗೂ ವಿಜ್ಞಾನ ವಿಭಾಗದಲ್ಲಿ 47 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರಥಮ ವರ್ಷದ ಪ್ರವೇಶ ದಾಖಲಾತಿ ಪ್ರಕ್ರಿಯೆ ಜಾರಿಯಲ್ಲಿದ್ದು, ಜೂನ್‌ 20ರ ತನಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಇಂಥ ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆ ಹೊರತಾಗಿ ಕಾಲೇಜಿಗೆ ಒಟ್ಟು 12 ಮಂಜೂರಾತಿ ಹುದ್ದೆಗಳಿವೆ. ಕನ್ನಡ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರ ಉಪನ್ಯಾಸಕರ ಹುದ್ದೆಗಳು ಖಾಲಿಯಿವೆ. ಈ ಮೂರು ವಿಷಯಗಳಿಗೆ ಅತಿಥಿ ಉಪನ್ಯಾಸಕರೇ ಗತಿಯಾಗಿದೆ. ‘ಡಿ’ ಗ್ರೂಪ್ ನೌಕರನ ಹುದ್ದೆಯೂ ಖಾಲಿ ಉಳಿದಿದೆ. ಇಬ್ಬರು ದ್ವಿತೀಯ ದರ್ಜೆ ಸಹಾಯಕರಿದ್ದು, ಅದರಲ್ಲಿ ಒಬ್ಬರನ್ನು ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ನಿಯೋಜಿಸಲಾಗಿದೆ.

ಆವರಣ ಜಲಾವೃತ ಸಮಸ್ಯೆ:

ಮಳೆ ಬಂದಾಗ ಕಾಲೇಜು ಆವರಣದಲ್ಲಿ ನೀರು ನಿಂತು ಸಮಸ್ಯೆಯಾಗುತ್ತದೆ. ಕಟ್ಟಡ ಹೊರಗೆ ಅಳವಡಿಸಿದ್ದ, ಎರಡು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಒಡೆದು ಹಾಳು ಮಾಡಿದ್ದಾರೆ. ‘ರಾತ್ರಿ ಸಮಯದಲ್ಲಿ ಕೆಲವರು ಕಾಲೇಜು ಆವರಣದಲ್ಲಿ ಮದ್ಯ ಸೇವಿಸಿ ಬಾಟಲಿ ಒಡೆದು ಹಾಕುವ ಘಟನೆಗಳು ಆಗಾಗ ಜರುಗುತ್ತಿವೆ’ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ಸರ್ಕಾರವು ಈ ಕಾಲೇಜಿನ ಈಗಿನ ಕಟ್ಟಡ ತೆರವುಗೊಳಿಸಿ, ಸುಸಜ್ಜಿತವಾದ ಹೊಸ ಕಟ್ಟಡ ನಿರ್ಮಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು (ಮಹಿಳಾ) ಸ್ಥಾಪಿಸಬೇಕು ಎಂಬುದು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.

ಇರುವ ಸೌಲಭ್ಯದ ನಡುವೆಯೇ ಕಲಿಕೆಯ ಆಸಕ್ತಿ ಹೆಚ್ಚಿಸಲು ಉಪನ್ಯಾಸಕರು ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ
ಭಾರತಿ ಖೂಬಾ ಪ್ರಾಚಾರ್ಯೆ ಸರ್ಕಾರಿ ಪದವಿ ಪೂರ್ವ ಕಾಲೇಜು
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದಲ್ಲಿ ಮೂರು ಸಾವಿರ ಪುಸ್ತಕಗಳಿವೆ. ವಿಷಯವಾರು ಪುಸ್ತಕಗಳ ಕೊರತೆಯಿದೆ. ಎಸ್‌ಸಿ ಎಸ್‌ಟಿ ಬುಕ್ ಬ್ಯಾಂಕ್ ಇದೆ
‌ರೇವಣಸಿದ್ದಪ್ಪ ಗಂಜಿ ಗ್ರಂಥಪಾಲಕ ಸರ್ಕಾರಿ ಪದವಿ ಪೂರ್ವ ಕಾಲೇಜು
ಸರ್ಕಾರಿ ಪದವಿ ಪೂರ್ವ ಕಾಲೇಜು–ಸರ್ಕಾರಿ ಕಾಲೇಜು ಒಂದೇ ಇರುವುದರಿಂದ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿಯರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪಿಯು ಕಾಲೇಜು ಪ್ರಾರಂಭಿಸಬೇಕು
ಕಮಲಾಬಾಯಿ ದಂಡೋತಿ ಕಾಲೇಜಿನ ಹಳೆ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT