ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ | ಮಳೆ ಅಭಾವ: ಬೆಣ್ಣೆತೊರಾ ನೀರಿಗೆ ಪರದಾಟ

Published 6 ನವೆಂಬರ್ 2023, 6:48 IST
Last Updated 6 ನವೆಂಬರ್ 2023, 6:48 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಎಲ್ಲೆಡೆ ಮಳೆ ಕೊರತೆ ಎದುರಾಗಿ ಬಿಸಿಲಿನ ಝಳ ಹೆಚ್ಚಾಗಿದೆ. ತೇವಾಂಶ ಇಲ್ಲದೆ ಬೆಳೆಗಳು ಬಾಡುತ್ತಿವೆ. ದಿಕ್ಕು ತೋಚದೆ ಅನ್ನದಾತರು ಕಂಗಾಲಾಗುತ್ತಿದ್ದಾರೆ. ಕೊಳವೆಬಾವಿ, ತೆರೆದಬಾವಿ, ನೀರಾವರಿ ಇದ್ದವರು ಹೇಗೊ ಕಳೆದೊಂದು ತಿಂಗಳಿಂದ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.

ಹಳ್ಳದ ಹತ್ತಿರ ಇರುವ ಮತ್ತು ಬೆಣ್ಣೆತೊರಾ ಜಲಾಶಯದ ಎಡದಂಡೆ ಕಾಲುವೆಗೆ ಸಮೀಪದ ವಿವಿಧ ಗ್ರಾಮಗಳ ಹೊಲಗಳ ರೈತರು ಬೆಳೆ ಸಂರಕ್ಷಣೆಗೆ ಎಲ್ಲಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಆದರೆ ನೀರಿನ ಮೂಲವೇ ಕಾಣದ ರೈತರು ಮಳೆರಾಯನತ್ತ ನೋಡುತ್ತ ಕೈಕಟ್ಟಿ ಕುಳಿತಿದ್ದಾರೆ.

ರೈತರ ಅನುಕೂಲಕ್ಕಾಗಿ ಬೆಣ್ಣೆತೊರಾ ಜಲಾಶಯದಿಂದ ನಿತ್ಯ 70 ಕ್ಯುಸೆಕ್ ನೀರು ಕಾಲುವೆಗೆ ಬಿಡಲಾಗುತ್ತಿದೆ. ಈ ನೀರು 59 ಕಿ.ಮೀ.ವರೆಗಿನ ಕಾಳಗಿ ತಾಲ್ಲೂಕಿನ 13, ಸೇಡಂ ತಾಲ್ಲೂಕಿನ 05 ಹೀಗೆ ಒಟ್ಟು 18 ಹಳ್ಳಿಗಳಿಗೆ ಹರಿದುಹೋಗಬೇಕು. ಆದರೆ ಮಳೆ ಇಲ್ಲದೆ ಬಾಡುತ್ತಿರುವ ತೊಗರಿ, ಜೋಳ, ಕಡಲೆ, ಕುಸುಬೆ, ಸೂರ್ಯಕಾಂತಿ ವಿವಿಧ ಬೆಳೆಗಳ ಸಂರಕ್ಷಣೆಗಾಗಿ ವಿವಿಧ ಹಳ್ಳಿಗಳ ರೈತರು ಎಲ್ಲೆಲ್ಲಿಂದೆಲ್ಲ ಮೋಟರ್ ಎಂಜಿನ್, ಪೈಪ್, ಸಾಮಗ್ರಿಗಳು ಸಂಗ್ರಹಿಸಿ ನೀರು ಪಡೆಯುತ್ತಿದ್ದಾರೆ.

ಹಗಲು, ರಾತ್ರಿ ಎನ್ನದೆ ಕಾಲುವೆಗೆ ಹಚ್ಚಿರುವ 250ಕ್ಕೂ ಹೆಚ್ಚು ಮೋಟರ್ ಆಯಿಲ್ ಎಂಜಿನ್‌ಗಳ (ಪಂಪ್ ಸೆಟ್) ಪರಿಣಾಮ ನೀರು 35 ಕಿ.ಮೀ. ವರೆಗೆ ಮಾತ್ರ ಹೋಗುತ್ತಿದೆ. ಇದರಿಂದ ಅರಜಂಬಗಾ, ತೆಂಗಳಿ ಮುಂದಿನ ರೈತರಿಗೆ ನೀರು ಸಿಗದಂತಾಗಿ ಅವರು ಪರದಾಡುತ್ತಿದ್ದಾರೆ.

ಅ.23ರಂದು ಗೇಟ್ ತೆರೆದು 70 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಕಾಲುವೆಗೆ ಪಂಪ್‌ಸೆಟ್‌ಗಳು ಹೆಚ್ಚಿದ್ದರಿಂದ ನೀರು ಎಲ್ಲಾ ರೈತರಿಗೆ ಸಿಗುತ್ತಿಲ್ಲ.
ಸುಭಾಷ ಚವಾಣ, ಬೆಣ್ಣೆತೊರಾ ಜಲಾಶಯದ ಎಇಇ

ಎಲ್ಲಾ ರೈತರು ಕೇವಲ ಹಗಲು ಹೊತ್ತಿನಲ್ಲಿ ಮಾತ್ರ ನೀರು ಪಡೆದರೆ ಅಂದುಕೊಂಡಂತೆ 59 ಕಿ.ಮೀ ವರೆಗೂ ನೀರು ಹರಿಯುತ್ತದೆ ಮತ್ತು ಎಲ್ಲಾ ಹೊಲಗಳಿಗೂ ತಕ್ಕಮಟ್ಟಿಗೆ ನೀರು ಸಿಗಲು ಸಾಧ್ಯವಾಗುತ್ತದೆ. ಆದರೆ ಸಮೀಪದ ಊರು ಮತ್ತು ಹೊಲಗಳ ರೈತರು ಹಗಲು, ರಾತ್ರಿ ಎನ್ನದೆ ಮೋಟರ್‌ಗಳನ್ನು ಚಾಲು ಇಡುತ್ತಿದ್ದರಿಂದ ನೀರು ಮುಂದಕ್ಕೆ ಹರಿದುಹೋಗಲು ಬಿಡುತ್ತಿಲ್ಲ. ಇದರಿಂದಾಗಿ ಮುಂದಿನ ಹೊಲಗಳ ರೈತರು ಹಿಡಿಶಾಪ ಹಾಕುವ ಪ್ರಸಂಗ ತಲೆದೋರಿದೆ.

ಬೆಣ್ಣೆತೊರಾ ಜಲಾಶಯದ ಅಧಿಕಾರಿಗಳು ರಾತ್ರಿ ಕಾಲುವೆ ಮೇಲೆ ಓಡಾಡಿ ಮೋಟರ್ ಎಂಜಿನ್ ಬಂದ್ ಮಾಡಿ, ಇನ್ನೊಬ್ಬರಿಗೂ ನೀರು ಪಡೆಯಲು ಅವಕಾಶ ಮಾಡಿಕೊಡಿ ಎಂದು ಮನವರಿಕೆ ಮಾಡುತ್ತಿದ್ದರೂ ರೈತರು ಕೇಳದ ಸ್ಥಿತಿಯಲ್ಲಿದ್ದಾರೆ. ಕೊನೆಗೆ ಪೊಲೀಸರನ್ನೇ ಜತೆಗೆ ಕರೆದುಕೊಂಡು ಹೋಗಿ ಮೋಟರ್ ಬಂದ್ ಮಾಡಿಸಿ ಇತರರಿಗೂ ಅವಕಾಶ ಕಲ್ಪಿಸಿಕೊಡುವಂತೆ ಕೋರುವುದಾಗಿ ಜಲಾಶಯದ ಅಧಿಕಾರಿ ಸುಭಾಷ ಚವಾಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT