ಬುಧವಾರ, ಏಪ್ರಿಲ್ 14, 2021
28 °C
ಸೇಡಂನಲ್ಲಿ ಬಾಲರಾಜ ಗುತ್ತೇದಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ

ಜಿಲ್ಲೆಯಲ್ಲಿ ಲಕ್ಷ ಉದ್ಯೋಗ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ‘ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿದರೆ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಗುರುವಾರ ಯುವ ಮುಖಂಡ ಬಾಲರಾಜ ಗುತ್ತೇದಾರ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಇಕ್ಬಾಲ್‌ ಖಾನ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

‘ರೈತರ ಸಾಲ ಮನ್ನಾ ಮಾಡಲು ₹ 25 ಸಾವಿರ ಕೋಟಿ ತೆಗೆದಿರಿಸಿದ್ದೆ. ನಂತರ ಮೈತ್ರಿ ಸರ್ಕಾರ ಬಿದ್ದಿದ್ದರಿಂದ ನಂತರ ಬಂದ ಬಿಜೆಪಿ ಸರ್ಕಾರ ಅಷ್ಟೂ ಹಣವನ್ನು ಸಾಲ ಮನ್ನಾಕ್ಕೆ ಬಳಸುವ ಬದಲು ₹ 9 ಸಾವಿರ ಕೋಟಿಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ. ಇದು ರೈತದ್ರೋಹಿ ಕ್ರಮವಲ್ಲವೇ’ ಎಂದು ಪ್ರಶ್ನಿಸಿದರು.

‘ಪಡಿತರದೊಂದಿಗೆ ಹೆಚ್ಚುವರಿ ಅಕ್ಕಿಯ ಬದಲು ₹ 100 ಇದ್ದ ವೃದ್ಧಾಪ್ಯ ವೇತನವನ್ನು ₹ 500ಕ್ಕೆ ಹೆಚ್ಚಿಸಿದೆ. ನಂತರ ಮುಖ್ಯಮಂತ್ರಿಯಾದಾಗ ಆ ಮೊತ್ತವನ್ನು ₹ 1 ಸಾವಿರಕ್ಕೆ ಹೆಚ್ಚಿಸಿದೆ. ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ₹ 5 ಸಾವಿರ ಮಾಸಾಶನ ನಿಗದಿ ಮಾಡುತ್ತೇನೆ’ ಎಂದರು.

‘ಕೊಪ್ಪಳ ಜಿಲ್ಲೆಯಲ್ಲಿ ಬೊಂಬೆಗಳ ತಯಾರಿಕಾ ವಲಯ ಸ್ಥಾಪನೆಯ ಬಗ್ಗೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಂಕಾಂಗ್‌ನ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆ. ಇತ್ತೀಚೆಗೆ ತಯಾರಿಕಾ ಘಟಕಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೌಜನ್ಯಕ್ಕೂ ನನ್ನು ಹೆಸರು ಪ್ರಸ್ತಾಪ ಮಾಡಲಿಲ್ಲ. ಕಲಬುರ್ಗಿಯಲ್ಲಿ ಸೌರಫಲಕಗಳ ಬಿಡಿ ಭಾಗಗಳ ತಯಾರಿಕೆ ಕ್ಲಸ್ಟರ್, ಬೀದರ್‌ನಲ್ಲಿ ಕೃಷಿ ಯಂತ್ರೋಪ‍ಕರಣಗಳ ತಯಾರಿಕೆ ಘಟಕ ಹಾಗೂ ಬಳ್ಳಾರಿಯಲ್ಲಿ ಗಾರ್ಮೆಂಟ್‌ ತಯಾರಿಕಾ ಕ್ಲಸ್ಟರ್ ಆರಂಭಿಸುವ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸಲು ಯೋಜನೆ ರೂಪಿಸಿದ್ದೆ. ನಮ್ಮ ಸರ್ಕಾರ ಬಂದರೆ ಅದನ್ನು ಖಂಡಿತ ಕಾರ್ಯರೂಪಕ್ಕೆ ತರುವೆ. ಒಂದು ಬಾರಿ ಸ್ಪಷ್ಟ ಬಹುಮತ ಕೊಟ್ಟು ನೋಡಿ ಮತ್ತೆ ಮತ ಕೇಳಲು ಬರುವುದೇ ಇಲ್ಲ’ ಎಂದು ಹೇಳಿದರು.

ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ’ಎರಡು ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬಂದಾಗಲೂ ಕುಮಾರಸ್ವಾಮಿ ಅವರು ಈ ನಾಡಿನ ಬಡವರು, ದೀನ ದಲಿತರ ಕಣ್ಣೀರು ಒರೆಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದಾಗ ತಲಾ ₹ 9.80 ಲಕ್ಷ ವೆಚ್ಚದಲ್ಲಿ ಸಾವಿರ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ರೈತರ ಸಾಲ ಮನ್ನಾ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು ರೈತರಿಗೆ ಅನುಕೂಲ ಮಾಡಿಕೊಟ್ಟರು‘ ಎಂದರು.

ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ಮುಖಂಡ ಅಶೋಕ ಗುತ್ತೇದಾರ ಬಡದಾಳ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ಯುವ ಮುಖಂಡರಾದ ಶಿವಕುಮಾರ ನಾಟೀಕಾರ, ಕೃಷ್ಣಾರೆಡ್ಡಿ, ಪಕ್ಷದ ಸೇಡಂ ತಾಲ್ಲೂಕು ಘಟಕದ ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ ಇತರರು ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು