ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಬಳಸದಿದ್ದರೆ ಉಳಿವುದಾದರೂ ಹೇಗೆ?

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾ ಶಾಸ್ತ್ರಜ್ಞರ ಸಮ್ಮೇಳನದಲ್ಲಿ ಡಾ. ಮುರಿಗೆಪ್ಪ ಪ್ರಶ್ನೆ
Last Updated 20 ಜೂನ್ 2019, 15:40 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅಳಿವಿನ ಅಂಚಿನ ಭಾಷೆಗಳನ್ನು ಚಿಕ್ಕ ವಯಸ್ಸಿನಿಂದಲೇ ಪ್ರಜ್ಞಾಪೂರ್ವಕವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಯುನೆಸ್ಕೊದಂತಹ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಂಘಟನೆಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ನಮ್ಮ ಮನೆ ಭಾಷೆ ಮಾತನಾಡದಿದ್ದರೆ ಅದು ಉಳಿಯುವುದಾದರೂ ಹೇಗೆ’ ಎಂದು ಅಖಿಲ ಭಾರತ ದ್ರಾವಿಡ ಭಾಷಾ ಸಂಸ್ಥೆಯ ಅಧ್ಯಕ್ಷ ಡಾ.ಎ.ಮುರಿಗೆಪ್ಪ ಪ್ರಶ್ನಿಸಿದರು.

ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ, ‘47ನೇ ಅಖಿಲ ಭಾರತ ದ್ರಾವಿಡ ಭಾಷಾ ಶಾಸ್ತ್ರಜ್ಞರ ಹಾಗೂ ಅಳಿವಿನಂಚಿನ ಭಾಷೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ’ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕುಂದಾಪುರ ಕನ್ನಡ ಶೈಲಿಯನ್ನು ಹೊಂದಿರುವ ಬೆಲಾರೆ ಭಾಷೆಯನ್ನು ಮಾತನಾಡುವವರ ಸಂಖ್ಯೆ 1961ರಲ್ಲಿ 3 ಸಾವಿರ ಇತ್ತು. ಇದೀಗ 85 ವರ್ಷ ವಯಸ್ಸಿನವೃದ್ಧರೊಬ್ಬರು ಮಾತ್ರ ಬೆಲಾರೆ ಮಾತನಾಡುತ್ತಾರೆ. ಆದರೆ, ಅವರೊಂದಿಗೆ ಮಾತನಾಡಲು ಆ ಭಾಷೆ ಗೊತ್ತಿರುವವರು ಯಾರೂ ಇಲ್ಲದ್ದರಿಂದ ಅದು ಕಣ್ಮರೆಯಾಗುತ್ತಿದೆ.ಇಂತಹ ಭಾಷೆಗಳ ವೈಜ್ಞಾನಿಕ ದಾಖಲೀಕರಣ ಅಗತ್ಯವಾಗಿದ್ದು, ಇದಕ್ಕೆ ಸರ್ಕಾರ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.

‘ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಘಟನೆ (ಯುನೆಸ್ಕೊ) ಅಳಿವಿನ ಅಂಚಿನಲ್ಲಿರುವ ಭಾಷೆಗಳ ಪಟ್ಟಿ ಮಾಡಿದೆ. ಆದರೆ, ಅದರಲ್ಲಿ ಸೀಮಿತ ಸಂಖ್ಯೆಯ ಭಾಷೆಗಳಿವೆ. ಭಾರತದಲ್ಲೇ ನೂರಾರು ಅಳಿವಿನ ಅಂಚಿನಲ್ಲಿರುವ ಭಾಷೆಗಳಿವೆ. ಈ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಅವುಗಳನ್ನೂ ಸೇರಿಸಿಕೊಳ್ಳಬಹುದು. ಕಂಪ್ಯೂಟರ್‌, ಮೊಬೈಲ್‌ ಅಪ್ಲಿಕೇಶನ್‌ ಹಾಗೂ ಸಾಫ್ಟ್‌ವೇರ್‌ಗಳಲ್ಲಿ ಈ ಭಾಷೆಯ ಪದಗಳನ್ನು ಸೇರಿಸುವ ಮೂಲಕ ಭಾಷೆಯ ಮರುಬಳಕೆಯನ್ನು ಸಾಧ್ಯವಾಗಿಸಬಹುದಾಗಿದೆ’ ಎಂದು ಮುರಿಗೆಪ್ಪ ಅಭಿಪ್ರಾಯಪಟ್ಟರು.

ಸಮ್ಮೇಳನಕ್ಕೆ ಚಾಲನೆ ನೀಡಿದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ, ‘ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಆರಂಭವಾದ ಬಳಿಕ ಇಂಗ್ಲಿಷ್‌ ಭಾಷೆ ಪ್ರವರ್ಧಮಾನಕ್ಕೆ ಬಂತು. ಅಲ್ಲಿಂದ ಭಾರತದ ವಿಶಿಷ್ಟ ಭಾಷೆಗಳ ಅವನತಿಯೂ ಆರಂಭವಾಯಿತು’ ಎಂದು ವಿಷಾದಿಸಿದರು.

‘ಅಳಿವಿನಂಚಿನಲ್ಲಿರುವ ಭಾಷೆಗಳ ಪುನಶ್ಚೇತನ ಹಾಗೂ ದಾಖಲೀಕರಣಕ್ಕಾಗಿ ಕೇಂದ್ರ ಸರ್ಕಾರವು 2015ರಲ್ಲಿ ‘ಅಳಿವಿನಂಚಿನಲ್ಲಿರುವ ಭಾಷೆಗಳ ಕೇಂದ್ರ’ವನ್ನು ಆರಂಭಿಸಿದೆ. ಈ ಭಾಷೆಗಳ ಸುಸ್ಥಿರ ಅಭಿವೃದ್ಧಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಇಂತಹ ಹಲವು ಕೇಂದ್ರಗಳಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೋಡಲ್‌ ಕೇಂದ್ರವಾಗಿ ಕೆಲಸ ಮಾಡುತ್ತಿದ್ದು, ದಕ್ಷಿಣ ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ 12 ಭಾಷೆಗಳನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದೆ. ಅರೆಬಾಷೆ, ಬೆಲಾರಿ, ಬೆಟ್ಟ ಕುರುಬ, ಬ್ಯಾರಿ, ಚೆಂಚು, ಎರವ, ಹವ್ಯಕ, ಇರುಳ, ಕೊರಚ, ಕೊರಗ, ಪಟ್ಟೇದಾರ ಹಾಗೂ ಸಂಕೇತಿ ಭಾಷೆಗಳ ದಾಖಲೀಕರಣ ಪೂರ್ಣಗೊಂಡಿದೆ’ ಎಂದರು.‌

ಕೇರಳದ ತಿರುವನಂತಪುರದಲ್ಲಿರುವ ಅಂತರರಾಷ್ಟ್ರೀಯ ದ್ರಾವಿಡ ಭಾಷಾ ಸಂಸ್ಥೆಯ ನಿರ್ದೇಶಕ ಪ್ರೊ.ನಡುವಟ್ಟಂ ಗೋಪಾಲಕೃಷ್ಣನ್‌ ಮಾತನಾಡಿ, ‘ದ್ರಾವಿಡ ಭಾಷೆಗಳ ವಿಶಿಷ್ಟತೆಯನ್ನು ಜಗತ್ತಿಗೆ ಪರಿಚಯಿಸಿದ್ದರಲ್ಲಿ ಕರ್ನಾಟಕದ ಭಾಷಾ ವಿಜ್ಞಾನಿಗಳ ಕೊಡುಗೆ ಮಹತ್ವದ್ದಾಗಿದೆ’ ಎಂದು ಶ್ಲಾಘಿಸಿದರು.

ಕರ್ನಾಟಕ, ತಮಿಳುನಾಡು, ಆಂಧ್ರ‍ಪ್ರದೇಶ, ಕೇರಳ ರಾಜ್ಯಗಳ ಹಾಗೂ ಶ್ರೀಲಂಕಾದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT