ಭಾನುವಾರ, ಜೂನ್ 13, 2021
26 °C
ಒಂದು ವರ್ಷದಿಂದ ಪೂರ್ಣಪ್ರಮಾಣದಲ್ಲಿ ನಡೆಯದ ನ್ಯಾಯಾಲಯ ಕಲಾಪಗಳು

ಸಂಕಷ್ಟಕ್ಕೆ ಸಿಲುಕಿದ ವಕೀಲ ಸಮುದಾಯ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಒಂದು ವರ್ಷದಿಂದ ಲಾಕ್‌ಡೌನ್, ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಪೂರ್ಣ
ಪ್ರಮಾಣದಲ್ಲಿ ನ್ಯಾಯಾಲಯಗಳ ಕಲಾಪ ನಡೆದಿಲ್ಲ. ವಕೀಲರು, ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಬರಲು ಅನುಮತಿ ಇಲ್ಲದೇ ಇರುವುದರಿಂದ ಇದೇ ವೃತ್ತಿಯನ್ನು ನಂಬಿರುವ ವಕೀಲರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಲಬುರ್ಗಿ ವಕೀಲರ ಸಂಘದಲ್ಲಿ 3 ಸಾವಿರಕ್ಕೂ ಹೆಚ್ಚು ವಕೀಲರು ಹೆಸರು ನೋಂದಾಯಿಸಿಕೊಂಡಿದ್ದು, ರಾಜ್ಯದ ಎರಡನೇ ಅತಿ ದೊಡ್ಡ ಸಂಘವಾಗಿದೆ. ಬಹುತೇಕ ಕಿರಿಯ ವಕೀಲರು ಕೊರೊನಾ ತಂದೊಡ್ಡಿದ ಆದಾಯ ನಷ್ಟದಿಂದಾಗಿ ಬೇಸತ್ತು ಬೇರೆ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬುಧವಾರ ಘೋಷಿಸಿದ ಆರ್ಥಿಕ ನೆರವಿನ ಪ್ಯಾಕೇಜ್‌
ನಲ್ಲಿಯೂ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.

‘ಕಕ್ಷಿದಾರರ ಹಿತಕ್ಕಾಗಿ ತಮ್ಮ ಜೀವವನ್ನು ಲೆಕ್ಕಿಸದೇ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಾಡುವ ವಕೀಲರನ್ನೂ ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸುವಂತೆ ಕರ್ನಾಟಕ ರಾಜ್ಯ ವಕೀಲರ ಸಂಘವು ಮಾಡಿದ ಮನವಿಗೆ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ. ಆರ್ಥಿಕ ಪ್ಯಾಕೇಜ್ ಘೋಷಿಸಿ ಒಬ್ಬೊಬ್ಬ ವಕೀಲರಿಗೆ ₹ 2 ಸಾವಿರ ನೆರವು ಘೋಷಿಸಿದ್ದರೂ ಹೇಗೋ ನಡೆಯುತ್ತಿತ್ತು. ಹಲವಾರು ಪ್ರಕರಣಗಳನ್ನು ನಿಭಾಯಿಸಿ ಹೆಸರುವಾಸಿಯಾಗಿರುವ ಹಿರಿಯ ವಕೀಲರಿಗೂ ಕೊರೊನಾ ಲಾಕ್‌ಡೌನ್‌ನಿಂದ ಸಮಸ್ಯೆಯಾಗಿದೆ’ ಎನ್ನುತ್ತಾರೆ ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ.

ಕೋವಿಡ್‌ ಪೀಡಿತರಿಗೆ ನೆರವು: ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ವಕೀಲರಿಗೆ ₹ 25 ಸಾವಿರ ಹಾಗೂ ಹೋಮ್‌ ಐಸೋಲೇಶನ್‌ನಲ್ಲೇ ಇರುವ ವಕೀಲರಿಗೆ ₹ 10 ಸಾವಿರ ಆರ್ಥಿಕ ನೆರವನ್ನು ರಾಜ್ಯ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನೀಡಲಾಗುತ್ತಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ವರಮಾನ ಕಳೆದುಕೊಂಡವರ ನೆರವಿಗೆ ನಿಲ್ಲಲು ಸಾಧ್ಯವಾಗಿಲ್ಲ. ಈ ಬಗ್ಗೆ ಸರ್ಕಾರವೇ ಪರಿಹಾರ ಘೋಷಿಸಬೇಕು ಎಂದು ಕಡಗಂಚಿ ಅವರು ಒತ್ತಾಯಿಸುತ್ತಾರೆ.

‘ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ಯುವ ವಕೀಲರು ಯಾವುದೇ ಆದಾಯ ಇಲ್ಲದ್ದರಿಂದ ಮನೆ ನಡೆಸಲೂ ಪರದಾಡುತ್ತಿದ್ದರು. ಇದನ್ನು ಗಮನಿಸಿ ನನ್ನ ಕೈಲಾದ ಸಹಾಯವನ್ನು ಕೆಲವರಿಗೆ ಮಾಡಿದ್ದೆ. ಆದರೆ, ಒಂದು ವರ್ಷದಿಂದ ಕಲಾಪಗಳು ಹೆಚ್ಚಾಗಿ ನಡೆಯುತ್ತಿಲ್ಲವಾದ್ದರಿಂದ ನನ್ನಿಂದಲೂ ಸಹಾಯ ಮಾಡಲು ಆಗುತ್ತಿಲ್ಲ. ನನ್ನ ಮೂರು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಆದಾಯ ಇಲ್ಲದೇ ಒಂದು ತಿಂಗಳು ಕಳೆದಿದ್ದೇನೆ’ ಎಂದು ಹೈಕೋರ್ಟ್‌ನ ಹಿರಿಯ ವಕೀಲ ಪಿ. ವಿಲಾಸಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು