ಶನಿವಾರ, ಮೇ 28, 2022
21 °C

ಅಕ್ರಮ ಮದ್ಯ, ಕಳ್ಳಭಟ್ಟಿ ಮಾರಾಟ ತಡೆಗಟ್ಟಿ: ಗ್ರಾಮಸ್ಥರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಅಕ್ರಮ ಮದ್ಯ ಮಾರಾಟದಿಂದ ಮತ್ತು ಕಳ್ಳಭಟ್ಟಿ ಸಾರಾಯಿ ಕುಡಿತದಿಂದ ಗ್ರಾಮದ ಯುವಕರು, ಕಿರಿಯ ವಯಸ್ಸಿನ ಮಕ್ಕಳು ಹಾಳಾಗುತ್ತಿದ್ದಾರೆ. ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಬೇಕು ಎಂದು ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಸೋಮವಾರ ಗ್ರಾಮದ ಪುರುಷರು, ಮಹಿಳೆಯರು ಸೇರಿದಂತೆ 64 ಜನರು ಹಾಗೂ ತಾಂಡಾದ 55 ಜನರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಗ್ರಾಮದಲ್ಲಿ ಯುವಕರು ಮತ್ತು ಕಿರಿಯ ವಯಸ್ಸಿನ ಮಕ್ಕಳು ಮದ್ಯ ಕುಡಿಯುವುದು ಹೆಚ್ಚಾಗುತ್ತಿದೆ. ಸಮಾಜದಲ್ಲಿ ಅನಾವಶ್ಯಕ ಜಗಳಗಳು, ಕಿರಿಕಿರಿ ಹೆಚ್ಚಾಗುತ್ತಿವೆ. ಗ್ರಾಮದಲ್ಲಿನ ವೈನ್ ಶಾಪ್ ಬಂದ್ ಮಾಡಬೇಕು ಮತ್ತು ಸಂಪೂರ್ಣವಾಗಿ ಮದ್ಯ ಮಾರಾಟ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಅಧ್ಯಕ್ಷರ ಕಳವಳ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಅಡೆತಡೆಯಿಲ್ಲದೆ ನಿರ್ಭಯವಾಗಿ ನಡೆಯುತ್ತಿದೆ. ಕೆಲವರು ಕಾನೂನು ಮೀರಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕುಡಿತದ ಚಟಕ್ಕೆ ದಾಸರಾದ ಜನರು, ಯುವಕರು ಸಾವಿನ ಮನೆ ಸೇರುತ್ತಿದ್ದಾರೆ ಎಂದು ಭೀಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಕಪ್ಪ (ಅಶೋಕ) ಕಾಸಲ್ ಅವರು ತೀವ್ರ ಕಳವಳ ವ್ಯಕ್ತ ಮಾಡಿದರು.

ಕಳ್ಳಭಟ್ಟಿ ಸಾರಾಯಿ ಬಗ್ಗೆ ತೋರುವ ಆಸಕ್ತಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಮದ್ಯ ಮಾರಾಟದ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗ್ರಾಮದ ಕಿರಾಣಿ ಅಂಗಡಿ, ಪಾನ್ ಶಾಪ್, ಮನೆ, ಹೋಟೆಲ್ ಗಳಲ್ಲಿ ಮದ್ಯದ ಬಾಟಲಿ ರಾಜಾರೋಷವಾಗಿ ಮಾರಾಟ ನಡೆಯುತ್ತಿದೆ. ಅಬಕಾರಿ ಅಧಿಕಾರಿಗಳಿಗೆ ಎಲ್ಲಾ ವಿಷಯ ಗೊತ್ತಿದ್ದರೂ ತಡೆಯಲು ಮುಂದಾಗುತ್ತಿಲ್ಲ ಎಂದು ಹೇಳಿದರು.

ಗ್ರಾಮದಲ್ಲಿರುವ ವೈನ್ ಶಾಪ್ ಬಂದ್ ಮಾಡುವಂತೆ ಗ್ರಾಮಸ್ಥರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಮಸೀದಿ, ಚರ್ಚ್, ಮರಗಮ್ಮ ಗುಡಿ ಸಮೀಪವೇ ವೈನ್ ಶಾಪ್ ಇದೆ. ಮಹಿಳೆಯರು ಬಹಿರ್ದೆಸೆಗೆ ಹೋಗುವ ದಾರಿಯಲ್ಲಿ ಸಂಜೆ ಮಹಿಳೆಯರಿಗೆ ತೀವ್ರ ಕಷ್ಟವಾಗುತ್ತಿದೆ. ಸಾಮಾನ್ಯ ಸಭೆ ನಡೆಸಿ ಸದಸ್ಯರೊಂದಿಗೆ ಚರ್ಚೆ ನಡೆಸುತ್ತೇವೆ. ಸಭೆಯಲ್ಲಿ ನಿರ್ಣಯ ಕೈಗೊಂಡು ಮದ್ಯ ಮಾರಾಟ ಮತ್ತು ವೈನ್ ಶಾಪ್ ಬಂದ್ ಮಾಡುವಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ಅವರು ಹೇಳಿದರು.

ಮುಖಂಡ ಬಸವರಾಜ ಹಾದಿಮನಿ ಮಾತನಾಡಿ, ಪ್ರತಿ ದಿವಸ ಚಿತ್ತಾಪುರದಿಂದ ಆಟೊ ಮೂಲಕ ಮದ್ಯ ಪೂರೈಕೆ ಮಾಡಲಾಗುತ್ತಿದೆ. ಬೆಳಗ್ಗೆ ಎಂಟಕ್ಕೆ ಬರುವ ಆಟೊ ಅಲ್ಲಲ್ಲಿ ಸಂಚರಿಸಿ ಮದ್ಯದ ಬಾಟಲಿ ಸರಬರಾಜು ಮಾಡುತ್ತಾರೆ. ಯಾವ ಅಂಗಡಿಯಿಂದ ಮದ್ಯ ಸಾಗಾಟ ನಡೆಯುತ್ತಿದೆ ಎಂದು ತಿಳಿದಿದ್ದರೂ ಅಬಕಾರಿ ಅಧಿಕಾರಿ ತಡೆಯಲು ಮುಂದಾಗುತ್ತಿಲ್ಲ ಎಂದು ಅವರು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ಶಿವಾಜಿ ಭೋವಿ, ಮುಖಂಡರಾದ ಕರಿಗೂಳಿ ವಾಡ್, ರಾಚಣ್ಣ ವಿಶ್ವಕರ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು