ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದೇ ತಾಸಿನಲ್ಲಿ ₹ 2 ಕೋಟಿ ಮೊತ್ತದ ಮದ್ಯ ಮಾರಾಟ!

ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಆರಂಭವಾದ 151 ಮದ್ಯದಂಗಡಿಗಳು
Last Updated 5 ಮೇ 2020, 12:27 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಾದ್ಯಂತ ಸೋಮವಾರ ಮಧ್ಯಾಹ್ನ 2ರ ಬಳಿಕ ಮದ್ಯದಂಗಡಿಗಳು ಆರಂಭವಾದರೂ ₹ 2 ಕೋಟಿ ಮೊತ್ತದ ಮದ್ಯವನ್ನು ಮಾರಾಟ ಮಾಡುವ ಮೂಲಕ ಭರ್ಜರಿ ವಹಿವಾಟು ನಡೆಸಿದವು.

ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಎಂಎಸ್‌ಐಎಲ್‌ ಹಾಗೂ ವೈನ್‌ಶಾಪ್‌, ಔಟ್‌ಲೆಟ್‌ಗಳನ್ನು ತೆರೆಯಲು ಅಬಕಾರಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಜಿಲ್ಲಾಧಿಕಾರಿ ಶರತ್ ಬಿ. ಅವರು ಎಲ್ಲ ಮಳಿಗೆಗಳಲ್ಲಿನ ಸ್ಟಾಕ್‌ ಪರಿಶೀಲಿಸಿ, ಸ್ಟಾಕ್‌ ಕಡಿಮೆಯಾಗಿದ್ದರ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದ್ದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ 30 ಎಂಎಸ್‌ಐಎಲ್‌ ಹಾಗೂ 121 ಔಟ್‌ಲೆಟ್‌ಗಳನ್ನು ಬಾಗಿಲುಗಳನ್ನು ತೆಗೆಸಿ ಸ್ಟಾಕ್‌ ಪರಿಶೀಲಿಸಿದರು. ಹೀಗಾಗಿ, ಬೆಳಿಗ್ಗೆ 9ಕ್ಕೆ ಆರಂಭವಾಗಬೇಕಿದ್ದ ಮದ್ಯದಂಗಡಿಗಳು ಮಧ್ಯಾಹ್ನ 2ರ ಬಳಿಕ ಆರಂಭವಾದವು.

ಅಂಗಡಿ ತೆರೆಯುತ್ತಿದ್ದಂತೆಯೇ ಸಾಲುಗಟ್ಟಿ ಮಾಸ್ಕ್ ಹಾಕಿಕೊಂಡು ನಿಂತಿದ್ದ ಮದ್ಯಪ್ರಿಯರು ತಮಗೆ ಬೇಕಾದ ಬ್ರ್ಯಾಂಡ್‌ನ ಮದ್ಯವನ್ನು ಖರೀದಿಸಿದರು. ಸ್ಟೇಶನ್‌ ರಸ್ತೆಯ ಭಾಲ್ಕೇಶ್ವರ ವೈನ್‌ ಶಾಪ್‌ ಎದುರು ಮದ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಕಾದು ನಿಂತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಚದುರಿಸಿದರು. ಅಧಿಕಾರಿಗಳು ಆ ಮಳಿಗೆಯಲ್ಲಿನ ಸ್ಟಾಕ್‌ ಪರಿಶೀಲಿಸಲು ಬಂದಿದ್ದರು. ಹೀಗಾಗಿ, ಅಂಗಡಿಯನ್ನು ತೆರೆಯಲಾಗಿತ್ತು. ಅದಾದ ಬಳಿಕ ಮದ್ಯ ಸಿಗಲಿದೆ ಎಂಬ ಆಸೆಯಿಂದ ಕಾಯುತ್ತಾ ಕುಳಿತಿದ್ದರು. ಆದರೆ, ಅಧಿಕಾರಿಗಳು ಅಂಗಡಿಯ ಶಟರ್ ಎಳೆದು ಬಂದ್ ಮಾಡಿಸಿದರು. ಹೀಗಾಗಿ, ಮದ್ಯಪ್ರಿಯರು ಮತ್ತೊಂದು ಅಂಗಡಿಯನ್ನು ಹುಡುಕಿಕೊಂಡು ಹೋದರು.

ಎಸ್‌ವಿಪಿ ವೃತ್ತದಲ್ಲಿರುವ ಪೂಜಾ ವೈನ್ಸ್, ಹಳೆ ಜೇವರ್ಗಿ ರಸ್ತೆಯಲ್ಲಿರುವ ಎಸ್‌ಕೆಜಿ ಮಾರ್ಟ್‌ ಎದುರು ಹೆಚ್ಚಿನ ಜನದಟ್ಟಣಿ ಕಂಡು ಬಂತು. ಸಂಜೆ 7 ಗಂಟೆಯಾಗುತ್ತಿದ್ದಂತೆಯೇ ಅಂಗಡಿಗಳನ್ನು ಬಂದ್‌ ಮಾಡಲಾಯಿತು.

ಮದ್ಯ ವಹಿವಾಟಿನ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಅಬಕಾರಿ ಇಲಾಖೆ ಉಪ ಅಧೀಕ್ಷಕ ಎಫ್‌.ಎಚ್‌.ಚಲವಾದಿ, ‘ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಮದ್ಯದಂಗಡಿಗಾಳ ಸ್ಟಾಕ್‌ ಪರಿಶೀಲನೆ ನಡೆಸಿದ ಬಳಿಕ ಮಾರಾಟಕ್ಕೆ ಅವಕಾಶ ನೀಡಲಾಯಿತು. ನಗರದಲ್ಲಿ ಸುಮಾರು 40 ಮಳಿಗೆಗಳಲ್ಲಿ ಮದ್ಯ ಲಾಕ್‌ಡೌನ್ ಆರಂಭಕ್ಕೂ ಮೊದಲಿದ್ದ ಸ್ಟಾಕ್‌ನಲ್ಲಿ ವ್ಯತ್ಯಾಸವಾಗಿದ್ದು, ಅಂತಹ ವೈನ್‌ಶಾಪ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದರು.

‘ಎಲ್ಲ ಅಂಗಡಿಗಳಲ್ಲಿಯೂ ಸಾಕಷ್ಟು ಮದ್ಯ ದಾಸ್ತಾನಿದೆ. ಸಂಜೆ ವೇಳೆಗೆ ₹ 2 ಕೋಟಿ ಮೊತ್ತದ ಮದ್ಯ ಮಾರಾಟವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT