ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ₹7.47 ಕೋಟಿ ಮದ್ಯ ಬಿಕರಿ: ಕಲಬುರಗಿ ಜಿಲ್ಲೆಯಲ್ಲಿ ದಾಖಲೆ ಮಾರಾಟ

Published 3 ಜನವರಿ 2024, 6:03 IST
Last Updated 3 ಜನವರಿ 2024, 6:03 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಇತ್ತೀಚೆಗೆ ಮದ್ಯ ಮಾರಾಟದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದ್ದರೂ ಮದ್ಯ ಖರೀದಿ ಮಾತ್ರ ಏರುಗತಿಯಲ್ಲೇ ಸಾಗಿದ್ದು, ಡಿಸೆಂಬರ್ ತಿಂಗಳೊಂದರಲ್ಲೇ ₹113.66 ಕೋಟಿ ಮೌಲ್ಯದ ಮದ್ಯ ಹಾಗೂ ಬಿಯರ್ ಮಾರಾಟವಾಗಿದೆ.

ಹೊಸ ವರ್ಷಾಚರಣೆ ಅಂಗವಾಗಿ ಡಿ. 31ರಂದು ಒಂದೇ ದಿನ ₹ 7.47 ಕೋಟಿ ಮೌಲ್ಯದ ಮದ್ಯ ಹಾಗೂ ಬಿಯರ್ ಮಾರಾಟವಾಗಿದೆ. ತಿಂಗಳಲ್ಲಿ ಸರಾಸರಿ ಪ್ರತಿನಿತ್ಯ ₹ 3.66 ಕೋಟಿ ಮೌಲ್ಯದ ಮದ್ಯ ಮಾರಾಟವಾಗುತ್ತದೆ. ಹೊಸ ವರ್ಷ ಆಚರಿಸಿದ ಭಾನುವಾರದಂದು ಅದರ ದುಪ್ಪಟ್ಟು ಮೌಲ್ಯದಷ್ಟು ಮದ್ಯ ಬಿಕರಿಯಾಗಿದೆ. ರಾಜ್ಯದಲ್ಲಿ ಆ ದಿನ ಮದ್ಯ ಮಾರಾಟವಾದ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಎರಡನೇ ಸ್ಥಾನದಲ್ಲಿತ್ತು ಎಂದು ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಡಿ. 31ರಂದು 12,298 ಬಾಕ್ಸ್‌ ಮದ್ಯ ಮಾರಾಟವಾಗಿದ್ದರೆ, ಬಿಯರ್ 6,284 ಬಾಕ್ಸ್‌ಗಳಷ್ಟು ಮಾರಾಟವಾಗಿದೆ. ಡಿಸೆಂಬರ್ ತಿಂಗಳಲ್ಲಿ ಒಟ್ಟಾರೆ 1,80,631 ಬಾಕ್ಸ್‌ಗಳಷ್ಟು ಮದ್ಯ ಬಿಕರಿಯಾಗಿದ್ದರೆ, 1,33,332 ಬಾಕ್ಸ್‌ಗಳಷ್ಟು ಬಿಯರ್‌ಗಳನ್ನು ಮದ್ಯಪ್ರಿಯರು
ಖರೀದಿಸಿದ್ದರು.

2022ರ ಡಿಸೆಂಬರ್ ತಿಂಗಳಲ್ಲಿ ಇಷ್ಟೊಂದು ಮದ್ಯ ಹಾಗೂ ಬಿಯರ್ ಮಾರಾಟವಾಗಿರಲಿಲ್ಲ. ಆಗ 1,76,082 ಬಾಕ್ಸ್‌ಗಳಷ್ಟು ಮದ್ಯ ಹಾಗೂ 1,17,121 ಬಾಕ್ಸ್‌ಗಳಷ್ಟು ಬಿಯರ್ ಮಾರಾಟವಾಗಿತ್ತು. ಒಟ್ಟಾರೆಯಾಗಿ ಒಂದು ವರ್ಷದ ಅವಧಿಯಲ್ಲಿ 4,550 ಬಾಕ್ಸ್‌ಗಳಷ್ಟು ಮದ್ಯ ಹಾಗೂ 16,111 ಬಾಕ್ಸ್ ಬಿಯರ್ ಹೆಚ್ಚುವರಿಯಾಗಿ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿ ವರ್ಷ ಬೇರೆ ರಾಜ್ಯಗಳಿಂದ ಅಕ್ರಮ ಮದ್ಯ ಕಲಬುರಗಿ ಜಿಲ್ಲೆಗೆ ಸಾಗಾಟವಾಗುತ್ತಿತ್ತು. ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಿದ್ದರಿಂದ ಇತ್ತೀಚೆಗೆ ಗೋವಾದಿಂದ ಬರುತ್ತಿದ್ದ ನಾಲ್ಕು ಮದ್ಯ ತುಂಬಿದ ವಾಹನಗಳನ್ನು ಜಪ್ತಿ ಮಾಡಿದ್ದರು.

‘ಗಡಿ ಭಾಗದಲ್ಲಿ ನಿರಂತರ ಗಸ್ತು ಹೆಚ್ಚಿಸಿದ್ದರಿಂದಲೂ ಬೇರೆ ರಾಜ್ಯಗಳಿಂದ ಬರುತ್ತಿದ್ದ ಮದ್ಯಕ್ಕೆ ಬ್ರೇಕ್ ಹಾಕಿದಂತಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಉತ್ಪಾದನೆಯಾಗುವ ಮದ್ಯ ಮಾರಾಟ ಹೆಚ್ಚಾಗಿದೆ’ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು. 

ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ರಾಜ್ಯದಲ್ಲಿ ದೊರೆಯುವುದಕ್ಕಿಂತ ಕಡಿಮೆ ಬೆಲೆಯಲ್ಲಿ ಮದ್ಯ ದೊರೆಯುತ್ತದೆ. ಹೀಗಾಗಿ, ಬೇರೆ ರಾಜ್ಯಗಳಿಂದ ಮದ್ಯ ತರುವ ರೂಢಿ ಇದೆ. ರಾಜ್ಯ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರಿಂದ ಭಾರತದಲ್ಲಿ ತಯಾರಾಗುವ ಮದ್ಯದ (ಐಎಂಎಲ್) ಬೆಲೆ 750 ಎಂಎಲ್‌ ಬಾಟಲಿಗೆ ಸರಾಸರಿ ₹ 200ರಷ್ಟು ಹೆಚ್ಚಳವಾಗಿತ್ತು. ಹೀಗಾಗಿ, ಬಹುತೇಕ ಮದ್ಯವ್ಯಸನಿಗಳು ಕಡಿಮೆ ದರದಲ್ಲಿ ದೊರೆಯುವ ಬಿಯರ್‌ನತ್ತ ವಾಲಿದ್ದರಿಂದಲೂ ಬಿಯರ್ ಮಾರಾಟ ಹೆಚ್ಚಾಗಿದೆ ಎನ್ನುತ್ತವೆ
ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT