ಕಲಬುರ್ಗಿ: ಶಿಲ್ಪಿಗಳ ಬದುಕಿಗೆ ‘ಉಳಿಪೆಟ್ಟು’

ಕಲಬುರ್ಗಿ: ಶಿಲೆಗಳನ್ನೇ ನಂಬಿ ಬದುಕು ಕಟ್ಟಿಕೊಂಡ ಜಿಲ್ಲೆಯ 15 ಸಾವಿರಕ್ಕೂ ಹೆಚ್ಚು ಶಿಲ್ಪಕಲಾವಿದರ ಹೊಟ್ಟೆ ಮೇಲೆ ಈಗ ‘ಉಳಿಪೆಟ್ಟು’ ಬೀಳುತ್ತಿದೆ. ಶಿಲ್ಪ ಕೆತ್ತನೆಗೆ ಅವಕಾಶವೂ ಇಲ್ಲದೇ, ಕೆತ್ತಿ ಇಟ್ಟ ಶಿಲ್ಪಗಳಿಗೆ ಬೇಡಿಕೆಯೂ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ.
ಕುಲಕಸುಬನ್ನು ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಶಿಲ್ಪಕಲಾಕೃತಿ ನಂಬಿಬದುಕಿದ ಜನರು ಮಾರ್ಚ್, ಏಪ್ರಿಲ್,
ಮೇ ತಿಂಗಳಲ್ಲೇ ಹೆಚ್ಚು ಹಣ ಗಳಿಸಿಕೊಳ್ಳುತ್ತಿದ್ದರು. ಮದುವೆ, ಮುಂಜಿ, ಜಾತ್ರೆ, ಉತ್ಸವಗಳು ಇದೇ ಅವಧಿಯಲ್ಲಿ ಹೆಚ್ಚಾಗಿ
ನಡೆಯುತ್ತಿದ್ದವು. ಈ ಬಾರಿ ಎಲ್ಲವೂ ನಿಷೇಧವಾಗಿದ್ದರಿಂದ ಇವರೆಲ್ಲ ಅತಂತ್ರ ಸ್ಥಿತಿ ತಲುಪುಂತಾಗಿದೆ.
‘ಶಿಲ್ಪಗಳ ಕೆತ್ತನೆಗೆ ಬೇಕಾದ ಶಿಲೆಗಳನ್ನು ಬಾಗಲಕೋಟೆ ಮತ್ತು ಮೈಸೂರಿನಿಂದ ತರಿಸಿಕೊಳ್ಳುತ್ತಿದ್ದೆವು. ಈಗ ಸಾರಿಗೆ
ವ್ಯವಸ್ಥೆ ನಿಂತಿದ್ದರಿಂದ ನಮ್ಮ ಬಳಿ ಕಲ್ಲುಗಳೇ ಇಲ್ಲದೇ ಕೆಲಸ ನಿಲ್ಲಿಸಬೇಕಾಯಿತು. ವ್ಯಾಪಾರವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ’ ಎನ್ನುತ್ತಾರೆ ನಂದೂರಿನ ಭಗವಂತಪ್ಪ ವಿಶ್ವಕರ್ಮಶಿಲ್ಪಿ.
ಕರಕುಶಲಕ್ಕೂ ಹೊಡೆತ: ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಪರಿಕರಗಳಿಗೆ ಬಡಗಿ ಮತ್ತು ಕಮ್ಮಾರರನ್ನೇ ಅವಲಂಬಿಸಿ
ದ್ದಾರೆ. ಈಗ ರೈತರೇ ಆರ್ಥಿಕ ಸಂಕಷ್ಟದಲ್ಲಿದ್ದು, ಅವರನ್ನೇ ನಂಬಿಕೊಂಡು ಮಾಡುವ ಕಟ್ಟಿಗೆ ಹಾಗೂ ಕಬ್ಬಿಣದ ಕೆಲಸ
ಗಳು ಕೂಡ ಬಹುತೇಕ ನಿಂತು ಹೋಗಿದೆ. ಹೀಗಾಗಿ, ಕಲಾವಿದರು ಮಾತ್ರವಲ್ಲ; ಕುಶಲಕರ್ಮಿಗಳೂ ಜೀವನೋಪಾಯಕ್ಕೆ ಚಿಂತೆ ಮಾಡಬೇಕಾದ ಸ್ಥಿತಿ ಬಂದಿದೆ.
‘ಚಿನ್ನಾಭರಣ ಮಳಿಗೆ ಮುಚ್ಚಿದ್ದು, ಕುಸುರಿ ಕೆಲಸಗಳು ನಿಂತಿವೆ. ಲಾಕ್‌ಡೌನ್ ಮುಗಿದ ನಂತರ ಅದರ ಕರಿನೆರಳು ಬೆಂಬಿಡುವುದಿಲ್ಲ. ಎಲ್ಲ ವರ್ಗದ ಜನರೂನಷ್ಟ ಅನುಭವಿಸಿದ್ದಾರೆ. ಮದುವೆ ಕಾರ್ಯಗಳ ಅವಧಿ ಕೂಡ ಮುಗಿಯುತ್ತ ಬಂದಿದೆ. ಚಿನ್ನಾಭರಣ ವ್ಯಾಪಾರವು ಚೇತರಿಸಿಕೊಳ್ಳುವುದು ಕಷ್ಟ’ ಎನ್ನುತ್ತಾರೆ ಸರಸ್ವತಿ ನಗರದ ಅಕ್ಕಸಾಲಿಗ ಶಿವರಾಜ ಪೊದ್ದಾರ.
ಕಮ್ಮಾರರು, ಚಮ್ಮಾರರು, ಶಿಲ್ಪಿಗಳು, ಬಡಿಗರರು, ಅಕ್ಕಸಾಲಿಗರು, ಕಂಚುಗಾರರು ಹೀಗೆ ಬೇರೆಬೇರೆ ವರ್ಗಗಳನ್ನೆಲ್ಲ ಕರಕುಶಲ ಕರ್ಮಿಗಳು ಎಂದೇ ಪರಿಗಣಿಸಲಾಗಿದೆ. ಇವರಲ್ಲಿ ಶಿಲ್ಪಕಲೆ, ಮರದ ಕಲಾಕೃತಿ ಕೆತ್ತಿ ಜೀವನ ಮಾಡುವವರ ಸಂಖ್ಯೆಯೇ ದೊಡ್ಡದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.