ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಮತಗಟ್ಟೆಗಳಲ್ಲಿ ಕುಡಿಯುವ ನೀರು, ಆಂಬುಲೆನ್ಸ್ ವ್ಯವಸ್ಥೆ

Published 3 ಮೇ 2024, 15:53 IST
Last Updated 3 ಮೇ 2024, 15:53 IST
ಅಕ್ಷರ ಗಾತ್ರ

ಕಲಬುರಗಿ: ಮೇ 7ರಂದು ನಡೆಯಲಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಸಂದರ್ಭದಲ್ಲಿ ಮತದಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ. ಬಿಸಿ ಗಾಳಿಯ ಆಘಾತದಕ್ಕೊಳಗಾಗುವವರ ಚಿಕಿತ್ಸೆಗೆ ಒಟ್ಟು 40 ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಖಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲೆಂದೇ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ 6ರಿಂದ 7 ಬೆಡ್‌ಗಳನ್ನು ಮೀಸಲಿಡಲಾಗುತ್ತಿದೆ. ಮತದಾನಕ್ಕೆ ಸಂಬಂಧಿಸಿದಂತೆ ಬಹುತೇಕ ಸಿದ್ಧತೆ ಪೂರ್ಣಗೊಂಡಿವೆ. ಕ್ಷೇತ್ರದಲ್ಲಿ ಒಟ್ಟಾರೆ 2166 ಮತಗಟ್ಟೆಗಳಿದ್ದು, ಅದರಲ್ಲಿ 545 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಪರಿಗಣಿಸಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಕೇಂದ್ರ ಕೈಗಾರಿಕಾ ಮೀಸಲು ಪೊಲೀಸ್ ಪಡೆ, ರಾಜ್ಯ ಪೊಲೀಸ್ ಮೀಸಲು ಪಡೆ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿನವರೆಗೆ 1103 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡು ಕ್ರಮ ಜರುಗಿಸಲಾಗಿದೆ. 980 ಎಫ್‌ಐಆರ್‌ಗಳನ್ನು ಅಬಕಾರಿ ಪೊಲೀಸರು ದಾಖಲಿಸಿದ್ದರೆ, 123 ಎಫ್‌ಐಆರ್‌ಗಳನ್ನು ಪೊಲೀಸ್, ಎಫ್‌ಎಸ್‌ಟಿ ಹಾಗೂ ಎಸ್‌ಎಸ್‌ಟಿ ತಂಡಗಳು ದಾಖಲಿಸಿಚೆ. ₹ 3.27 ಕೋಟಿ ನಗದು, ₹ 5.55 ಕೋಟಿ ಮೊತ್ತದ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ಕ್ಷೇತ್ರದಲ್ಲಿ ಐದು ಕಡೆ ಮಾದರಿ ಮತಗಟ್ಟೆಗಳನ್ನು ಆರಂಭಿಸಲಾಗುವುದು. ಸಖಿ, ಯುವ, ಪಿಡಬ್ಲುಡಿ ಹಾಗೂ ಪರಿಕಲ್ಪನೆ ಆಧಾರಿತ ಮತಗಟ್ಟೆಗಳನ್ನು ವಿಶೇಷವಾಗಿ ಸಿಂಗರಿಸಲಾಗುವುದು. ಮತಗಟ್ಟೆಯ ಒಳಗಡೆ ಮೊಬೈಲ್ ಫೋನ್ ಒಯ್ಯುವಂತಿಲ್ಲ. ಯಾರಿಗೆ ಮತ ಹಾಕಲಾಗಿದೆ ಎಂಬುದನ್ನು ಚಿತ್ರೀಕರಣ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಫೌಜಿಯಾ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಾತನಾಡಿ, ‘ಗ್ರಾಮಾಂತರ ಪ್ರದೇಶದಲ್ಲಿ 1719 ಬೂತ್‌ಗಳಿದ್ದು, ಇವಿಎಂ ಯಂತ್ರಗಳನ್ನು ಮತಗಟ್ಟೆತೆ ತಲು‍ಪಿಸಲು ಹಾಗೂ ಅಲ್ಲಿಂದ ಸ್ಟ್ರಾಂಗ್ ರೂಮ್‌ಗೆ ಕೊಂಡೊಯ್ಯಲು ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. ಪ್ರತಿ ಮತಗಟ್ಟೆಯ ಬಳಿಯೂ ಸಿಬ್ಬಂದಿ ಇರಲಿದ್ದಾರೆ. ಜಿಲ್ಲೆಗೆ ಮೂರು ಸಿಐಎಸ್‌ಎಫ್‌ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ. ಜಿಲ್ಲೆಯ ಪೊಲೀಸರಲ್ಲದೇ ಹೊರ ಜಿಲ್ಲೆಗಳಿಂದಲೂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಮಾತನಾಡಿ, ‘ಈ ಬಾರಿ ನೆಲ, ಅರಣ್ಯ, ನೀರಿನಲ್ಲಿಯೂ (ಚಂದ್ರಂಪಳ್ಳಿ ಜಲಾಶಯ) ಸ್ವೀಪ್ ಚಟುವಟಿಕೆಗಳನ್ನು ನಡೆಸಲಾಗಿದೆ. ಚುನಾವಣೆ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಕರೆತರಲು ಪ್ರಯತ್ನಿಸಲಾಗುವುದು. ಅಂಗವಿಕಲ ಮತದಾರರು ಬಯಸಿದರೆ ಅವರಿಗೆ ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಲಾಗುವುದು’ ಎಂದರು.

ಮತದಾರರು ಬಿಸಿಲು ಏರುವ ಮುನ್ನವೇ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಮಾಡಲು ಅವಕಾಶವಿದೆ
ಫೌಜಿಯಾ ತರನ್ನುಮ್ ಬಿ. ಜಿಲ್ಲಾ ಚುನಾವಣಾಧಿಕಾರಿ
ಮುಂಜಾಗೃತಾ ಕ್ರಮವಾಗಿ ಪರವಾನಗಿ ಹೊಂದಿದ ಆಯುಧಗಳನ್ನು ಪಡೆಯಲಾಗಿದೆ. ಇಲ್ಲಿಯವರೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲಿದ್ದ 33 ವ್ಯಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ
ಅಕ್ಷಯ್ ಹಾಕೆ ಕಲಬುರಗಿ ಎಸ್ಪಿ
ಅತಿ ಕಡಿಮೆ ಮತದಾನವಾಗಿರುವ 182 ಮತಗಟ್ಟೆಗಳನ್ನು ಗುರುತಿಸಿ ಅಲ್ಲಿ ಬಿಎಲ್‌ಒಗಳು ಹಾಗೂ ಅವರ ಮೇಲೆ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಿ ಮತದಾರರಿಗೆ ಮನವೊಲಿಸುವ ಕಾರ್ಯಕವನ್ನು ಮಾಡಲಾಗಿದೆ
ಭಂವರ್ ಸಿಂಗ್ ಮೀನಾ ಜಿ.ಪಂ. ಸಿಇಒ ಸ್ವೀಪ್ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT