ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳ ಜೀವ ಹಿಂಡುತ್ತಿದೆ ‘ಲಂಪಿಸ್ಕಿನ್’

ಸಾವಿರಾರು ಜಾನುವಾರುಗಳಿಗೆ ಸೋಂಕು
Last Updated 30 ಆಗಸ್ಟ್ 2020, 18:54 IST
ಅಕ್ಷರ ಗಾತ್ರ

ವಾಡಿ (ಕಲಬುರ್ಗಿ ಜಿಲ್ಲೆ): ಕೊರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟ, ಬೆಳೆ ನಷ್ಟ, ಇಳುವರಿ ಹಾಗೂ ದರ ಕುಸಿತದಿಂದ ಬಸವಳಿದಿದ್ದ ರೈತರಿಗೆ ‘ಲಂಪಿಸ್ಕಿನ್’ ಎಂಬ ವಿಚಿತ್ರ ಸಾಂಕ್ರಾಮಿಕ ರೋಗದಿಂದ ಜಾನುವಾರುಗಳು ನರಳುತ್ತಿರುವುದು ಆತಂಕ ಮೂಡಿಸಿದೆ.

ನಾಲವಾರ ವಲಯದ ಯಾಗಾಪೂರ, ಲಾಡ್ಲಾಪುರ ಸೇರಿದಂತೆ ವಿವಿಧೆಡೆ 500ಕ್ಕೂ ಅಧಿಕ ಜಾನುವಾರುಗಳು ಈ ಕಾಯಿಲೆಯಿಂದ ನರಳುತ್ತಿವೆ. ಜಾನುವಾರುಗಳ ಮೈ, ಕಾಲುಗಳು, ಭುಜ, ಕುತ್ತಿಗೆ ಹಾಗೂ ಗಂಟಲು ಭಾಗಗಳಲ್ಲಿ ಗುಳ್ಳೆಗಳಾಗಿ ಗಡ್ಡೆಯಾಗುತ್ತಿದೆ. 1 ಇಂಚು ಸುತ್ತಳತೆಯ ಗಡ್ಡೆಗಳಿಂದ ರಂಧ್ರಗಳಾಗಿ ರಕ್ತ ಹೆಪ್ಪುಗಟ್ಟಿ ಕೀವು ತುಂಬಿಕೊಳ್ಳುತ್ತಿದೆ. ರಂಧ್ರಗಳ ಮೂಲಕ ಸಣ್ಣ ಸಣ್ಣ ಹುಳು ಹೊರಬರುತ್ತಿದ್ದು, ಜಾನುವಾರುಗಳು ನೋವಿನಿಂದ ನರಳುತ್ತಿವೆ.

‘15 ದಿನಗಳಿಂದ ಈ ರೋಗ ವೇಗವಾಗಿ ಹರಡುತ್ತಿದ್ದು, ಜಾನುವಾರುಗಳಿಗೆ ನಡೆದಾಡಲು ಮತ್ತು ಮೇಯಲು ಸಾಧ್ಯವಾಗುತ್ತಿಲ್ಲ. ಅವುಗಳಲ್ಲಿ ಸುಸ್ತು ಆವರಿಸಿ ನಿಲ್ಲಲಾಗದೆ ನೆಲಕ್ಕೆ ಒರಗುತ್ತಿವೆ’ ಎನ್ನುತ್ತಾರೆ ರೈತರು.

ಪಶುವೈದ್ಯರು ತುರ್ತಾಗಿ ಸಾಮೂಹಿಕ ಚಿಕಿತ್ಸೆಗೆ ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಯಾಗಾಪೂರ ಗ್ರಾಮ ಘಟಕದ ಅಧ್ಯಕ್ಷ ರಾಜಕುಮಾರ ಯರಗೋಳ ಒತ್ತಾಯಿಸಿದ್ದಾರೆ.

ಸೊಳ್ಳೆಗಳಿಂದ ಪ್ರಸಾರ: ‘ಜಾನುವಾರುಗಳಿಗೆ ‘ಲಂಪಿಸ್ಕಿನ್’ ಎಂಬ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಬಾಧಿತ ದನಗಳಿಂದ ಸೊಳ್ಳೆಗಳ ಮೂಲಕ ರೋಗ ಹರಡುತ್ತಿದೆ. ದೇಹದ ವಿವಿಧ ಭಾಗಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎನ್ನುತ್ತಾರೆ ಚಿತ್ತಾಪುರ ತಾಲ್ಲೂಕು ಪಶುವೈದ್ಯ ಬಸಲಿಂಗಪ್ಪ ಡಿಗ್ಗಿ.

ಜಾನುವಾರುಗಳಿಗೆ ಕ್ವಾರಂಟೈನ್

ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗ್ರಾಮಗಳಲ್ಲಿ ‘ಲಂಪಿಸ್ಕಿನ್’ ಬಾಧಿತ ಜಾನುವಾರುಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ರೋಗ ತಗುಲದಂತೆ ದನಗಳನ್ನು ಪ್ರತ್ಯೇಕವಾಗಿರಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಮೇವು, ಔಷಧಿಗಳನ್ನು ನೀಡಲಾಗುತ್ತಿದೆ.

‘1 ಸಾವಿರ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪಶುವೈದ್ಯ ಡಾ.ವಿಜಯಕುಮಾರ ತಿಳಿಸಿದರು.

ಐದು ಹಸುಗಳು ಸಾವು

ಕಾಳಗಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಭಾನುವಾರ 5 ಹಸುಗಳು ಸಾವನ್ನಪ್ಪಿವೆ. ಚರ್ಮದ ಮೇಲೆ ಅಲ್ಲಲ್ಲಿ ಗುಳ್ಳೆಗಳಿದ್ದು, ಹೊಟ್ಟೆ ಉಬ್ಬಿದ ಸ್ಥಿತಿಯಲ್ಲಿ ಅವು ಸಾವನ್ನಪ್ಪಿವೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT