ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಖೇಡಕ್ಕೆ ಬರಬೇಕೇ? ಮೂಗು ಮುಚ್ಚಿಕೊಂಡು ಬನ್ನಿ!

ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಸ್ಥಳದ ಹಲವೆಡೆ ಕೊಳಕು; ಪ್ರವಾಸಿಗರಿಗಿಲ್ಲ ಮೂಲಸೌಕರ್ಯ
Last Updated 22 ಜುಲೈ 2021, 19:30 IST
ಅಕ್ಷರ ಗಾತ್ರ

ಮಳಖೇಡ: ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ರಾಜಧಾನಿಯಾಗಿದ್ದ ಮಳಖೇಡವನ್ನು ನೋಡಲೆಂದು ಬರುವ ಪ್ರವಾಸಿಗರು, ಇತಿಹಾಸ ಆಸಕ್ತರಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿನ ಕಸವು ನಿರಾಸೆಯನ್ನುಂಟು ಮಾಡುತ್ತದೆ.

ಕವಿರಾಜಮಾರ್ಗ ಎಂಬ ಲಾಕ್ಷಣಿಕ ಗ್ರಂಥವನ್ನು ಬರೆದು ಕನ್ನಡ ನಾಡಿನ ಹೆಸರನ್ನು ಚಿರಸ್ಥಾಯಿಗೊಳಿಸಿದ ಶ್ರೀವಿಜಯ ಬದುಕಿದ್ದ ಐತಿಹಾಸಿಕ ಸ್ಥಳಕ್ಕೆ ಬಂದೊದಗಿದ ದುರವಸ್ಥೆಯನ್ನು ಕಂಡು ಮನಸ್ಸು ಮಮ್ಮಲ ಮರಗುತ್ತದೆ.

ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರ ಗಳ ಮಧ್ಯದಲ್ಲಿರುವ ಮಳಖೇಡವನ್ನು ಪ್ರವಾಸಿ ತಾಣವನ್ನು ಮಾಡುವ ಯತ್ನಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಯಿಂದಾಗಿ ಕೈಗೂಡಿಲ್ಲ. ರಾಷ್ಟ್ರಕೂಟ ದೊರೆಗಳ ಭವ್ಯ ಇತಿಹಾಸವನ್ನು ತಿಳಿದುಕೊಂಡು ಅದನ್ನು ನೋಡಲೆಂದು ಹೋದರೆ ನಿರಾಸೆಯಾಗುತ್ತದೆ. ಗ್ರಾಮದ ಬಸ್ ನಿಲ್ದಾಣದಿಂದ ಎರಡು ಮುಖ್ಯ ಮಾರ್ಗಗಳ ಮೂಲಕ ಮಳಖೇಡ ಕೋಟೆಯನ್ನು ತಲುಪಬಹುದು.

ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ಇಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಚರಂಡಿಯಲ್ಲಿನ ಕಸವನ್ನು ರಸ್ತೆಗೆ ಎತ್ತಿ ಹಾಕುವ ಸಿಬ್ಬಂದಿ ಹಲವು ದಿನಗಳವರೆಗೆ ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಸಕಾಲಕ್ಕೆ ವಿಲೇವಾರಿ ಆಗದೇ ಇರುವುದರಿಂದ ಮಳೆ, ಗಾಳಿಗೆ ಮತ್ತೆ ಆ ಕಸ ಚರಂಡಿ ಸೇರುತ್ತದೆ ಎಂಬುದು ಗ್ರಾಮಸ್ಥರ ಆರೋಪ.

ಎರಡು ವರ್ಷಗಳ ಹಿಂದೆ ಗ್ರಾಮದಲ್ಲಿ ನಡೆದ ಮಳಖೇಡ ಉತ್ಸವದ ಸಂದರ್ಭದಲ್ಲಿ ಕೋಟೆಯನ್ನು ಸ್ವಚ್ಛಗೊಳಿಸಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಇದೀಗ ಮತ್ತೆ ಕೋಟೆಯ ಹಲವೆಡೆ ಕಾಲಿಡಲು ಸಾಧ್ಯವಾಗದಷ್ಟು ಮುಳ್ಳು ಕಂಟಿಗಳು ಬೆಳೆದಿವೆ.

ರಾಜ್ಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಈ ಕೋಟೆಯ ಉಸ್ತುವಾರಿಗೆ ಒಬ್ಬ ಭದ್ರತಾ ಸಿಬ್ಬಂದಿಯೂ ಇಲ್ಲ. ಇದರಿಂದಾಗಿ ಯುವಕರು ತಂಡೋಪತಂಡವಾಗಿ ಕೋಟೆಯೊಳಗೆ ನುಗ್ಗಿ ಅಲ್ಲಿಯೇ ಮದ್ಯಪಾನ ಮಾಡಿ ಹರಟೆ ಹೊಡೆಯುತ್ತಾರೆ ಎಂಬ ಆರೋಪಗಳಿವೆ.

ಮಳಖೇಡ ಕೋಟೆಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಡಾಡಿ ದನಗಳು ಅಲ್ಲಿದ್ದವು. ಮದ್ಯದ ಪ್ಯಾಕೆಟ್‌ಗಳ ರಾಶಿಯೇ ಅಲ್ಲಿ ಕಂಡು ಬಂತು. ಕೋಟೆಯ ಒಳಗಡೆ ಭಾಗದಲ್ಲಿ ಎಲ್ಲೆಂದರಲ್ಲಿ ಕಸ, ಕಂಟಿಗಳು ಬೆಳೆದು ಬಂದಿರುವುದರಿಂದ ಪ್ರವಾಸಿಗರು ಒಬ್ಬಂಟಿಯಾಗಿ ಒಳಗಡೆ ವೀಕ್ಷಣೆಗೆ ತೆರಳಲು ಹಿಂದೇಟು ಹಾಕುತ್ತಾರೆ.

‘ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಕಪ್ಪಿ ಕಾಲೊನಿಯ ಬಸವೇಶ್ವರ ಮೂರ್ತಿ ಇರುವ ಕಟ್ಟೆಯ ಸುತ್ತಲೂ ಕಸದ ರಾಶಿಯೇ ತುಂಬಿಕೊಂಡಿದೆ. ಸುತ್ತಲೂ ಹಿಂದೂ–ಮುಸ್ಲಿಂ ಸಮುದಾಯದ ಮನೆಗಳಿದ್ದು, ಆ ದುರ್ನಾತದಲ್ಲಿಯೇ ದಿನದೂಡಬೇಕಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾಮವನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿಗೆ ಸಾಕಷ್ಟು ಅನುದಾನವಿದ್ದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸಂಜೆಯಾದರೆ ಸಾಕು ಸೊಳ್ಳೆ ಕಚ್ಚಲಾರಂಭಿಸುತ್ತವೆ. ಮಳೆ ಬಂದರಂತೂ ಮುಗಿದೇ ಹೋಯಿತು. ಕೆಟ್ಟ ವಾಸನೆಗೆ ಮನೆ ಬಿಟ್ಟು ಎಲ್ಲಿಯಾದರೂ ಹೋಗಬೇಕೆನಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮದ ನಿವಾಸಿ ಅಲ್ಲಾಬಕಷ್ ಖುರೇಷಿ.

‘₹ 2 ಕೋಟಿಯ ಅಭಿವೃದ್ಧಿ ಯೋಜನೆ’

ಮಳಖೇಡ ಗ್ರಾಮದ ರಾಷ್ಟ್ರಕೂಟರ ಕೋಟೆಯ ಅಭಿವೃದ್ಧಿಗಾಗಿ ₹ 2 ಕೋಟಿಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ. ಇನ್ನೂ ಟೆಂಡರ್ ಹಂತದಲ್ಲಿದ್ದು, ಕೋಟೆಯ ಆವರಣದಲ್ಲಿ ಸೌಂದರೀಕರಣ, ಬರುವ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಜೊತೆಗೆ ರಾಷ್ಟ್ರಕೂಟರ ಪರಂಪರೆ ಬಿಂಬಿಸುವ ಸಾಕ್ಷ್ಯಚಿತ್ರ ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

***

ಇಡೀ ಊರಿನಲ್ಲಿ ಕಸ ವಿಲೇವಾರಿಯ ಸಮಸ್ಯೆ ಬಹಳ ದಿನ. ಯಾವಾಗಲೋ ಒಮ್ಮೆ ಬಂದು ಕಸವನ್ನು ಒಯ್ಯುತ್ತಾರೆ. ಮಸೀದಿ, ದೇವಸ್ಥಾನಗಳ ಪಕ್ಕದಲ್ಲಿ ಕಸ ಬಿದ್ದಿದ್ದರಿಂದ ದರ್ಶನಕ್ಕೆ ಬರುವ ಭಕ್ತರಿಗೂ ಕಸಿವಿಸಿಯಾಗುತ್ತದೆ
ಲಾಲಮಿಯಾ, ಮಳಖೇಡ ಗ್ರಾಮಸ್ಥ

ಮಳಖೇಡ ಕೋಟೆಯ ನಿರ್ವಹಣೆಗೆ ಯಾರೂ ಇಲ್ಲ. ಯಾವಾಗಲೋ ಒಮ್ಮೆ ಹಣ ಬಿಡುಗಡೆಯಾದಾಗ ದುರಸ್ತಿ ಮಾಡುತ್ತಾರೆ. ಆದರೆ, ಸಮಗ್ರವಾಗಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಬೇಕು ಹಾಗೂ ಜಾಗ ಅತಿಕ್ರಮಣವಾಗಿರುವ ಬಗ್ಗೆ ಪರಿಶೀಲಿಸಿ ತೆರವುಗೊಳಿಸಬೇಕು

-ವಿಜಯಕುಮಾರ ರೆಡ್ಡಿ, ಸಾಹಿತಿ, ಮಳಖೇಡ

***

ಮಳಖೇಡ ಕೋಟೆಯ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲು ಪ್ರವಾಸಮಿತ್ರರೊಬ್ಬರನ್ನು ಇಲಾಖೆಯಿಂದ ನಿಯೋಜಿಸಲಾಗಿತ್ತು. ಆದರೆ, ಕೋವಿಡ್ ಬಂದುದರಿಂದ ಅವರ ಸೇವೆಯನ್ನು ಬಳಸಿಕೊಳ್ಳುತ್ತಿಲ್ಲ.

-ಪ್ರಭುಲಿಂಗ ತಳಕೇರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

***

ಕಸ ವಿಲೇವಾರಿ ಬಗೆಗಿನ ದೂರುಗಳು ಬಂದ ತಕ್ಷಣ ತೆರವುಗೊಳಿಸಲಾಗುತ್ತಿದೆ. ಕಸ ಸಂಗ್ರಹಕ್ಕೆ ಒಂದು ಎಕರೆ ಜಾಗದಲ್ಲಿ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು, ನಿಯಮಿತವಾಗಿ ಗ್ರಾಮದಲ್ಲಿನ ಕಸವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು

ಜಗದೀಶ ರಾಜಪ್ಪ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಮಳಖೇಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT