ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹೇಳಿದ್ದು ಒಂದೂ ಆಗಿಲ್ಲ: ಮಲ್ಲಿಕಾರ್ಜುನ ಖರ್ಗೆ

ಉಮೇಶ ಜಾಧವ ವಿರುದ್ಧ ಸಂಸದ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ವಾಗ್ದಾಳಿ
Last Updated 6 ಮಾರ್ಚ್ 2019, 6:52 IST
ಅಕ್ಷರ ಗಾತ್ರ

ಚಿತ್ತಾಪುರ:ಪ್ರಧಾನಿ ನರೇಂದ್ರ ಮೋದಿ ಅವರ ಯಾವುದೇ ಯೋಜನೆ ಯಶಸ್ವಿ ಆಗಿಲ್ಲ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಕೇಂದ್ರ ಸರ್ಕಾರದ ಆರ್ಥಿಕ ನೀತಿ ಹಳಿ ತಪ್ಪಿದ್ದರಿಂದ ದೇಶದ ಜಿಡಿಪಿ ಬೆಳವಣಿಗೆ ಶೇಕಡ 6.6 ರಲ್ಲೇ ಕುಂಠಿತಗೊಂಡಿದೆ. ಶೇಕಡ 8 ರಷ್ಟು ಬೆಳವಣಿಗೆ ಮಾಡುತ್ತೇವೆ ಎನ್ನುವ ಪ್ರಧಾನಿ ಮೋಧಿ ಭರವಸೆ ಸಾಕಾರಗೊಂಡಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಕುಸಿತವಾಗಿದೆ’ ಎಂದರು.

‘ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರದ್ದು ಶೇಕಡ 60 ಮತ್ತು ರಾಜ್ಯ ಸರ್ಕಾರದ್ದು ಶೇಕಡ 40 ಹಣ ಇರುತ್ತದೆ.

ಈ ಯೋಜನೆಯಡಿ ದೇಶದ 130 ಕೋಟಿ ಜನರ ಪೈಕಿ 50 ಕೋಟಿ ಜನರಿಗೆ ಸೌಲಭ್ಯ ಸಿಗಲಿದೆ ಎಂದು ದೊಡ್ಡ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಳೆದ ವರ್ಷ ಮೀಸಲಿಟ್ಟಅನುದಾನ ₹3,200 ಕೋಟಿ. ಈ ವರ್ಷ ಮೀಸಲಿಟ್ಟ ಅನುದಾನ ₹6,600 ಕೋಟಿ. ಇದರಲ್ಲಿ ಜನರಿಗೆ ಸೌಲಭ್ಯ ತಲುಪಿಸಲು ಹೇಗೆ ಸಾಧ್ಯವಾಗುತ್ತದೆ’ ಎಂದು ಅವರು ಹರಿಹಾಯ್ದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಮೋದಿ ಅವರು ಜನರಿಗೆ ಭರವಸೆ ನೀಡಿದ್ದರು. ಇಲ್ಲಿವರೆಗೆ ಒಟ್ಟು 10 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎನ್.ಎಸ್.ಓ.ಎಸ್ ಸಂಸ್ಥೆ ಹಾಗೂ ಕಾರ್ಮಿಕ ಸಂಸ್ಥೆ ನಡೆಸಿದ ಸಮೀಕ್ಷೆ ವರದಿ, ಸರ್ಕಾರದ ಅಂಕಿಸಂಖ್ಯೆ ಪ್ರಕಾರ ಉದ್ಯೋಗ ಸೃಷ್ಟಿಯಾಗಿದ್ದು ಕೇವಲ 25 ಲಕ್ಷ ಮಾತ್ರ. ಇದ್ದ ಉದ್ಯೋಗ ಕಳೆದುಕೊಂಡವರ ಸಂಖ್ಯೆ 38 ಲಕ್ಷ. ಉದ್ಯೋಗ ಸೃಷ್ಟಿ ಎಲ್ಲಿದೆ ಗಮನಿಸಿ. ಸೃಷ್ಟಿ ಮಾಡುವುದಕ್ಕಿಂತ 13 ಲಕ್ಷ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಯಾಕೆ ಬಂತು? ಎಂದು ವಾಗ್ದಾಳಿ ಮಾಡಿದರು.

ಕೆಲವರಿಗೆ ಚಾರಿತ್ರ್ಯಕ್ಕಿಂತ ಸಂಪತ್ತು ಮುಖ್ಯ

‘ಸಮಾಜದಲ್ಲಿ ಕೆಲವರು ತಮ್ಮ ಜವಾಬ್ದಾರಿ ಮರೆತು ತಮ್ಮ ಚಾರಿತ್ರ್ಯಕ್ಕಿಂತ ಸಂಪತ್ತು ಮುಖ್ಯ ಎಂದು ತಿಳಿದುಕೊಂಡಿದ್ದಾರೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಡಾ.ಉಮೇಶ ಜಾಧವ್‌ ಅವರ ಹೆಸರನ್ನು ಪ್ರಸ್ತಾಪಿಸದೆ ಮಂಗಳವಾರ ಇಲ್ಲಿ ವ್ಯಂಗ್ಯವಾಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಜಯದೇವ ಹಾಗೂ ಕಿದ್ವಾಯಿ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾತ್ಮಗಾಂಧಿಯವರು ಸಂಪತ್ತು ನಷ್ಟವಾದರೆ ಏನೂ ನಷ್ಟವಿಲ್ಲ. ಆರೋಗ್ಯ ನಷ್ಟವಾದರೆ ಅಲ್ಪ ನಷ್ಟ. ಆದರೆ, ಚಾರಿತ್ರ್ಯ ನಷ್ಟವಾದರೆ ಎಲ್ಲವೂ ನಷ್ಟ ಎಂದು ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಂದು ಕೆಲವರಿಗೆ ಆರೋಗ್ಯ ಮತ್ತು ಚಾರಿತ್ರ್ಯಕ್ಕಿಂತ ಸಂಪತ್ತೇ ಮುಖ್ಯ ಎನಿಸುತ್ತಿದೆ’ ಎಂದು ಅವರು ಟೀಕಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ.ಪಿ, ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಓಂಪ್ರಕಾಶ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೆದಾರ್, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಾನಂದ ಪಾಟೀಲ್, ಶಿವರುದ್ರ ಭೀಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಅಧ್ಯಕ್ಷ ಮಹೆಮೂದ್ ಸಾಹೇಬ್, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ, ಮುಖಂಡರಾದ ಮಾಪಣ್ಣ ಗಂಜಗಿರಿ, ಡಾ.ಪ್ರಭುರಾಜ ಕಾಂತಾ, ರಾಜಶೇಖರ ತಿಮ್ಮನಾಯಕ, ಜಯಪ್ರಕಾಶ ಕಮಕನೂರ, ಮುಕ್ತಾರ್ ಪಟೇಲ್ ಅನೇಕರು ಇದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಕೆ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ ಮೇಕಿನ್ ಸ್ವಾಗತಿಸಿದರು.

**

ಯಾರು ಎಲ್ಲಿಗೆ ಹೋಗಲಿ ಬಿಡಲಿ, ಅದು ನಮಗೆ ಮುಖ್ಯವಲ್ಲ. ನಮಗೆ ತತ್ವ, ಸಿದ್ಧಾಂತ, ಅಭಿವೃದ್ಧಿ, ಜನಪರ ಕೆಲಸ ಮುಖ್ಯ

– ಮಲ್ಲಿಕಾರ್ಜುನ ಖರ್ಗೆ, ಸಂಸದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT