ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಲ್ಲಿ ಶೇ 25ರಷ್ಟೇ ಮೂಲ ಬಿಜೆಪಿ ಶಾಸಕರು: ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

Last Updated 11 ಜುಲೈ 2022, 15:56 IST
ಅಕ್ಷರ ಗಾತ್ರ

ಕಲಬುರಗಿ: ‘ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಸರ್ಕಾರಗಳಲ್ಲಿ ಶೇ 25ರಷ್ಟು ಮೂಲ ಬಿಜೆಪಿ ಶಾಸಕರಿದ್ದಾರೆ. ಉಳಿದವರನ್ನು ಖರೀದಿಸಿ, ಸರ್ಕಾರ ರಚಿಸಿದ್ದಾರೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಪ್ರದೇಶ ಹೊರತುಪಡಿಸಿ ವಿವಿಧ ರಾಜ್ಯಗಳಲ್ಲಿ ಬಿಜೆಪಿಯವರು ಬೇರೆ ಪಕ್ಷಗಳ ಶಾಸಕರನ್ನು ಆಪರೇಶನ್ ಕಮಲ ಅಕ್ರಮ ಮಾಡಿಯೇ ಖರೀದಿಸಿ ಸರ್ಕಾರ ನಡೆಸುತ್ತಿದ್ದಾರೆ. ಬಿಹಾರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎಷ್ಟು ಜನ ಬಿಜೆಪಿಯ ಶಾಸಕರಿದ್ದಾರೆ ಎಂಬುದನ್ನು ಲೆಕ್ಕ ಹಾಕಲಿ’ ಎಂದರು.

‘ಬಿಜೆಪಿ ದುರಾಡಳಿತದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಬೆಲೆ ಡಾಲರ್ ಎದುರು ತೀವ್ರವಾಗಿ ಕುಸಿಯುತ್ತಿದೆ. 46 ಸಾವಿರ ಅಗ್ನಿವೀರರನ್ನು ನೇಮಿಸಿಕೊಳ್ಳಲು ಮುಂದಾಗಿರುವ ಸರ್ಕಾದ ಮೊದಲು ಸೇನೆಯಲ್ಲಿ ಖಾಲಿ ಇರುವ 2 ಲಕ್ಷ ಸೈನಿಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿ’ ಎಂದರು.

‘ಉಜ್ವಲ ಯೋಜನೆಯಡಿ ದೇಶದ ಬಡವರಿಗೆ ಉಚಿತ ಅಡುಗೆ ಅನಿಲ ಕೊಡಲಾಗುತ್ತದೆ ಎಂದು ಮೋದಿ ಹೇಳಿ ಪ್ರಚಾರ ಗಿಟ್ಟಿಸಿಕೊಂಡರು. ಆದರೆ, ಬೆಲೆ ನಿಯಂತ್ರಿಸುವ ಬದಲು ಕಾಂಗ್ರೆಸ್ ಅವಧಿಯಲ್ಲಿದ್ದಕ್ಕಿಂತ ಮೂರು ಪಟ್ಟು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದಾರೆ. ಇದರಿಂದ ಉಜ್ವಲಾ ಗ್ಯಾಸ್ ಪಡೆದ ಅರ್ಧಕ್ಕಿಂತ ಹೆಚ್ಚು ಜನರು ಅದನ್ನು ಬಳಸುತ್ತಿಲ್ಲ’ ಎಂದರು.

17ರಂದು ಸಭೆ: ರಾಷ್ಟ್ರಪತಿ ಚುನಾವಣೆ ಪ್ರಯುಕ್ತ ಜುಲೈ 17ರಂದು ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಹಲವರು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ತಟಸ್ಥ ನಿಲುವು ಹೊಂದಿದ್ದಾರೆ.‌ ವಿರೋಧ ಪಕ್ಷ ತನ್ನ ಕೆಲಸ ಮಾಡಲಿದೆ’ ಎಂದು ಹೇಳಿದರು.

‘ಸಿಯುಕೆಯಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ಅಕ್ಷಮ್ಯ’

‘ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಈಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಎಬಿವಿಪಿ ವತಿಯಿಂದ ಶಾಖಾದಂತಹ ಕವಾಯತು ಪ್ರದರ್ಶನಗಳಿಗೆ ಅವಕಾಶ ನೀಡಿರುವುದು ಅಕ್ಷಮ್ಯ. ಇದರ ಹೊಣೆ ಕುಲಪತಿಯೇ ಹೊರಬೇಕಾಗುತ್ತದೆ’ ಎಂದು ಟೀಕಿಸಿದರು.

‘ವಿಶ್ವವಿದ್ಯಾಲಯಗಳು ಯಾವತ್ತೂ ಒಂದು ಸಿದ್ಧಾಂತ ಬಿತ್ತುವ ಕೇಂದ್ರಗಳಾಗಬಾರದು. ಶಾಖಾ ಮಾಡಿಕೊಳ್ಳಲು ಹೊರಗಡೆ ಬೇಕಾದಷ್ಟು ಸ್ಥಳಗಳಿವೆ. ಅವುಗಳನ್ನು ಬಳಸಿಕೊಳ್ಳಲು ಯಾರ ತಕರಾರೂ ಇಲ್ಲ. ವಿಶ್ವವಿದ್ಯಾಲಯವನ್ನು ಆರ್‌ಎಸ್‌ಎಸ್‌ ಅಡ್ಡೆಯನ್ನಾಗಿ ಮಾಡಿಕೊಳ್ಳಬಾರದು’ ಎಂದು ಅವರು ತಾಕೀತು ಮಾಡಿದರು.

‘ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಹೀಗಾಗಿ, ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಡಾ. ಮನಮೋಹನ್ ಸಿಂಗ್ ಸರ್ಕಾರವು ಜಿಲ್ಲೆಗೆ ಕೇಂದ್ರೀಯ ವಿಶ್ವವಿದ್ಯಾಲಯ ಮಂಜೂರು ಮಾಡಿತ್ತು. ಶೈಕ್ಷಣಿಕ ಚಟುವಟಿಕೆ ಹೊರತಾದ ಬೆಳವಣಿಗೆಗಳು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವುದು ಸರಿಯಲ್ಲ’ ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT